ರಾಷ್ಟ್ರ ಭಾಷೆಯ (National Language) ವಿಚಾರದಲ್ಲಿ ಸಾಕಷ್ಟು ಚರ್ಚೆ ನಡೆದಿದೆ. ಹಿಂದಿ ರಾಷ್ಟ್ರ ಭಾಷೆ ಅಲ್ಲ ಎಂಬುದನ್ನು ದಕ್ಷಿಣದ ಸೆಲೆಬ್ರಿಟಿಗಳು ಒತ್ತಿ ಹೇಳುತ್ತಿದ್ದಾರೆ. ಅತ್ತ, ಬಾಲಿವುಡ್ನ ಕೆಲವು ನಟ-ನಟಿಯರು ‘ಹಿಂದಿಯೇ ನಮ್ಮ ರಾಷ್ಟ್ರ ಭಾಷೆ’ ಎಂದು ಬಾಯಿ ಬಡಿದುಕೊಳ್ಳುತ್ತಿದ್ದಾರೆ. ಕೆಲವೇ ದಿನಗಳ ಹಿಂದೆ ಕಿಚ್ಚ ಸುದೀಪ್ ಅವರು ನೀಡಿದ ಹೇಳಿಕೆ ದೊಡ್ಡ ಮಟ್ಟದಲ್ಲಿ ಸುದ್ದಿ ಆಯಿತು. ‘ಹಿಂದಿ (Hindi) ನಮ್ಮ ರಾಷ್ಟ್ರ ಭಾಷೆಯಾಗಿ ಉಳಿದಿಲ್ಲ’ ಎಂದು ಸುದೀಪ್ ಹೇಳಿದ್ದನ್ನು ಬಾಲಿವುಡ್ ನಟ ಅಜಯ್ ದೇವಗನ್ ವಿರೋಧಿಸಿದ್ದರು. ಟ್ವಿಟರ್ನಲ್ಲಿ ಈ ಇಬ್ಬರು ಸ್ಟಾರ್ ನಟರ ನಡುವೆ ಮಾತಿನ ಚಕಮಕಿ ನಡೆದಿತ್ತು. ಹಾಗಂತ ಆ ಚರ್ಚೆ ಅಲ್ಲಿಗೇ ಕೊನೆ ಆಗುವಂಥದ್ದಲ್ಲ. ಈಗ ಹಿಂದಿ ಚಿತ್ರರಂಗದ ಮತ್ತೋರ್ವ ಜನಪ್ರಿಯ ನಟ ಅರ್ಜುನ್ ರಾಮ್ಪಾಲ್ (Arjun Rampal) ಅವರು ಹಿಂದಿ ಪರವಾಗಿ ಬ್ಯಾಟ್ ಬೀಸಿದ್ದಾರೆ. ‘ಹಿಂದಿ ನಮ್ಮ ರಾಷ್ಟ್ರ ಭಾಷೆ. ಅದಕ್ಕೆ ನಾವು ಗೌರವ ನೀಡಬೇಕು’ ಎಂದು ಅವರು ಹೇಳಿದ್ದಾರೆ. ‘ಇಂಡಿಯಾ ಟುಡೇ’ ನಡೆಸಿದ ಸಂದರ್ಶನದಲ್ಲಿ ಅರ್ಜುನ್ ರಾಮ್ಪಾಲ್ ಅವರು ಮಾತನಾಡಿದ್ದು, ಅವರ ಹೇಳಿಕೆ ಮತ್ತೆ ಚರ್ಚೆ ಹುಟ್ಟುಹಾಕಿದೆ.
ಬಾಲಿವುಡ್ನ ಹಲವು ಸೆಲೆಬ್ರಿಟಿಗಳಿಗೆ ಈ ಅಭಿಪ್ರಾಯ ಇದೆ. ಹಿಂದಿಯೇ ರಾಷ್ಟ್ರ ಭಾಷೆ ಎಂದು ಅವರೆಲ್ಲ ವಾದಿಸುತ್ತಿದ್ದಾರೆ. ಆ ಸಾಲಿಗೆ ಅರ್ಜುನ್ ರಾಮ್ಪಾಲ್ ಕೂಡ ಸೇರ್ಪಡೆ ಆಗಿದ್ದಾರೆ. ‘ಭಾರತವು ವೈವಿಧ್ಯತೆಯಿಂದ ಕೂಡಿದ ಜಾತ್ಯಾತೀಯ ದೇಶ. ಇಲ್ಲಿ ಸಾಕಷ್ಟು ಭಿನ್ನವಾದ ಭಾಷೆ, ಧರ್ಮ, ಸಂಸ್ಕೃತಿ, ಹಬ್ಬಗಳು ಇವೆ. ನಾವೆಲ್ಲರೂ ಖುಷಿಯಾಗಿ, ಶಾಂತಿಯುತವಾಗಿ ಬಾಳುತ್ತಿದ್ದೇವೆ. ಭಾಷೆ ಎಂಬುದು ಮುಖ್ಯವಲ್ಲ. ಆದರೆ ಭಾವನೆಗಳು ಮುಖ್ಯ. ನನಗೆ ಅನಿಸಿದಂತೆ ಹಿಂದಿ ನಮ್ಮ ರಾಷ್ಟ್ರಭಾಷೆಯಾಗಿದೆ. ಅದಕ್ಕೆ ನಾವು ಗೌರವ ನೀಡಬೇಕು. ವೈವಿಧ್ಯತೆಯಿಂದ ಕೂಡಿದ ನಮ್ಮ ದೇಶದಲ್ಲಿ ಹಿಂದಿಯನ್ನು ಹೆಚ್ಚು ಜನರು ಮಾತನಾಡುತ್ತಾರೆ. ಹೆಚ್ಚು ಜನರು ಅರ್ಥ ಮಾಡಿಕೊಳ್ಳುತ್ತಾರೆ’ ಎಂದು ಅರ್ಜುನ್ ರಾಮ್ಪಾಲ್ ಹೇಳಿದ್ದಾರೆ.
ಇದನ್ನೂ ಓದಿ: ರಾಷ್ಟ್ರ ಭಾಷೆ ವಿವಾದದ ಬಳಿಕ ಗಲ್ಲಾ ಪೆಟ್ಟಿಗೆಯಲ್ಲೂ ಕಿಚ್ಚ ಸುದೀಪ್ ವರ್ಸಸ್ ಅಜಯ್ ದೇವಗನ್ ಪೈಪೋಟಿ
ಭಾರತದಲ್ಲಿ ಇರುವ ಎಲ್ಲ ಭಾಷೆ ಮತ್ತು ಸಂಸ್ಕೃತಿಯನ್ನು ಜನರು ಸೆಲೆಬ್ರೇಟ್ ಮಾಡಬೇಕು ಎಂಬುದು ಅರ್ಜುನ್ ರಾಮ್ಪಾಲ್ ಅಭಿಪ್ರಾಯ. ಆ ಕುರಿತು ತಮ್ಮ ನಿಲುವು ಏನು ಎಂಬುದನ್ನು ಅವರು ತಿಳಿಸಿದ್ದಾರೆ. ‘ಎಲ್ಲರ ಭಿನ್ನ ಸಂಸ್ಕೃತಿಯನ್ನು ಅರಿತುಕೊಳ್ಳುವುದು ಒಳ್ಳೆಯದು. ಸ್ವಲ್ಪ ತಮಿಳು, ಸ್ವಲ್ಪ ತೆಲುಗು ಕಲಿಯಿರಿ. ವಿದ್ಯಾಭಾಸ್ಯಕ್ಕಾಗಿ ನಾನು ತಮಿಳುನಾಡಿಗೆ ಹೋಗಿದ್ದೆ. ಅಲ್ಲಿದ್ದಾಗ ನಾನು ಸ್ವಲ್ಪ ತಮಿಳು ಕಲಿತಿದ್ದೆ. ಅದೇ ರೀತಿ ಪಂಜಾಬ್ಗೆ ಹೋದಾಗ.. ಅಲ್ಲಿ ಕೆಲವು ತಿಂಗಳುಗಳ ಕಾಲ ಉಳಿದುಕೊಂಡಾಗ ಸ್ವಲ್ಪ ಪಂಜಾಬಿ ಕಲಿಯಿರಿ. ನಾನು ಪಂಜಾಬ್ನಲ್ಲಿ ಶೂಟಿಂಗ್ ಮಾಡಿದ್ದೇನೆ. ಗುಜರಾಜ್ಗೆ ಹೋದಾಗ ಗುಜರಾತಿ, ಮಹಾರಾಷ್ಟ್ರಕ್ಕೆ ಹೋದಾಗ ಮರಾಠಿ ಹೀಗೆ ಎಲ್ಲವನ್ನೂ ಕಲಿಯಿರಿ. ಎಲ್ಲ ಭಾಷೆಯಲ್ಲೂ ಅಚ್ಚರಿಯ ವಿಚಾರಗಳು ಇವೆ. ಅದನ್ನು ನಾವು ಸೆಲೆಬ್ರೇಟ್ ಮಾಡಬೇಕು’ ಎಂದು ಅರ್ಜುನ್ ರಾಮ್ಪಾಲ್ ಹೇಳಿದ್ದಾರೆ.
ಇದನ್ನೂ ಓದಿ: ಹಿಂದಿ ರಾಷ್ಟ್ರ ಭಾಷೆ ಎಂಬ ಹೇಳಿಕೆಗೆ ರಿಯಾಕ್ಷನ್ ಕೊಟ್ಟ ಶಿವಣ್ಣ
‘ವೈವಿಧ್ಯತೆಯ ಕಾರಣದಿಂದಲೇ ಭಾರತ ವಿಶೇಷ ಎನಿಸಿಕೊಂಡಿದೆ. ಪ್ರಪಂಚದ ಬೇರೆಲ್ಲ ದೇಶಕ್ಕಿಂತಲೂ ನಮ್ಮದು ವಿಶಿಷ್ಠವಾಗಿದೆ. ನಮ್ಮನಮ್ಮಲ್ಲೇ ನಾವು ಕಿತ್ತಾಡಬಾರದು’ ಎಂಬುದು ಅರ್ಜುನ್ ರಾಮ್ಪಾಲ್ ಅಭಿಪ್ರಾಯ. ಮೇ 20ರಂದು ಬಿಡುಗಡೆ ಆಗುತ್ತಿರುವ ‘ಧಾಕಡ್’ ಸಿನಿಮಾದಲ್ಲಿ ಅವರು ನಟಿಸಿದ್ದಾರೆ. ಈ ಚಿತ್ರಕ್ಕೆ ಕಂಗನಾ ರಾಣಾವತ್ ನಾಯಕಿ. ಈ ಹಿಂದೆ ಕಂಗನಾ ಕೂಡ ರಾಷ್ಟ್ರ ಭಾಷೆಯ ವಾದದ ಬಗ್ಗೆ ತಮ್ಮ ಅನಿಸಿಕೆ ತಿಳಿಸಿದ್ದರು. ಸಂಸ್ಕೃತ ರಾಷ್ಟ್ರ ಭಾಷೆ ಆಗಬೇಕು ಎಂದು ಅವರು ಹೇಳಿದ್ದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.