ಡ್ರಗ್ ಕೇಸ್ನಲ್ಲಿ ಶಾರುಖ್ ಖಾನ್ ಮಗ ಆರ್ಯನ್ ಖಾನ್ ಅವರನ್ನು ಬಂಧಿಸಿದ ನಂತರ ಎನ್ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಯಾರೋ ಹಿಂಬಾಲಿಸುತ್ತಿರುವ ಬಗ್ಗೆ ಇತ್ತೀಚೆಗೆ ಅವರು ದೂರಿದ್ದರು. ಈಗ ಅವರ ತನಿಖೆಗೆ ಪದೇಪದೇ ತೊಂದರೆ ಕೊಡುವ ಕಾರ್ಯ ನಡೆಯುತ್ತಿದೆ. ಇವರಿಗೆ ಪಾಠ ಕಲಿಸೋಕೆ ಅವರು ಮುಂದಾಗಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿ ಅವರು ಕೋರ್ಟ್ ಮೆಟ್ಟಿಲೇರಿದ್ದಾರೆ.
ಆರ್ಯನ್ ಖಾನ್ ಎನ್ಸಿಬಿ ವಶದಲ್ಲಿದ್ದಾಗಲೇ ಕೆಪಿ ಗೋಸಾವಿ ಎಂಬುವವರು ಸೆಲ್ಫಿ ತೆಗೆದುಕೊಂಡಿದ್ದರು. ಈ ವ್ಯಕ್ತಿ ಈಗ ನಾಪತ್ತೆ ಆಗಿದ್ದಾರೆ. ಗೋಸಾವಿ ಆಪ್ತ ಎನ್ನಲಾದ ಪ್ರಭಾಕರ್ ಸೈಲ್ ಅವರು ಸಮೀರ್ ವಾಂಖೆಡೆ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ‘ಪಂಚನಾಮೆಯ ಖಾಲಿ ಹಾಳೆ ಮೇಲೆ ನಮ್ಮಿಂದ ಸಹಿ ಮಾಡಿಸಿಕೊಂಡರು. ಗೋಸಾವಿ ನಾಪತ್ತೆ ಆದ ಬಳಿಕ ಸಮೀರ್ ವಾಂಖೆಡೆ ಅವರಿಂದ ನನಗೂ ಜೀವ ಬೆದರಿಕೆ ಇದೆ. 18 ಕೋಟಿ ರೂ. ಡೀಲ್ ಬಗ್ಗೆ ನಾನು ಕೇಳಲ್ಪಟ್ಟಿದ್ದೇನೆ’ ಎಂದು ಪ್ರಭಾಕರ್ ಸೈಲ್ ಹೇಳಿದ್ದರು. ಈ ರೀತಿಯ ಆರೋಪಗಳಿಂದ ಸಮೀರ್ ಅವರ ತನಿಖೆಗೆ ತೊಂದರೆ ಆಗುತ್ತಿದೆ. ಜತೆಗೆ, ಅವರಿಗೆ ಕೆಟ್ಟ ಹೆಸರು ಬರುತ್ತಿದೆ. ಈ ಕಾರಣಕ್ಕೆ ಸಮೀರ್ ಮುಂಬೈನ ಸೆಷನ್ ಕೋರ್ಟ್ ಮೆಟ್ಟಿಲೇರಿದ್ದಾರೆ.
‘ನನ್ನ ಕುಟುಂಬದವರ ವಿರುದ್ಧ ಏಕೆ ಆರೋಪಗಳನ್ನು ಮಾಡಲಾಗುತ್ತಿದೆ? ನನ್ನ ಕೆಲಸಕ್ಕೆ ತೊಂದರೆ ಮಾಡಲು ಈ ರೀತಿ ಮಾಡಲಾಗುತ್ತಿದೆ. ಮೃತಪಟ್ಟಿರುವ ನನ್ನ ಅಮ್ಮ, ನನ್ನ ತಂಗಿಯನ್ನು ಟಾರ್ಗೆಟ್ ಮಾಡಿ ಬಯ್ಯಲಾಗುತ್ತಿದೆ’ ಎಂದು ಸಮೀರ್ ವಾಂಖೆಡೆ ಮುಂಬೈ ಸೆಷನ್ ಕೋರ್ಟ್ಗೆ ಹೇಳಿದ್ದಾರೆ.
‘ನಾನು ಯಾವುದೇ ರೀತಿಯ ತನಿಖೆ ಅಥವಾ ವಿಚಾರಣೆಗೆ ಸಿದ್ಧನಿದ್ದೇನೆ. ನಾನು 15 ವರ್ಷದ ಕೆಲಸದ ಅನುಭವ ಹೊಂದಿದ್ದೇನೆ. ಆದರೆ, ಈ ಅವಧಿಯಲ್ಲಿ ನನ್ನ ವೈಯಕ್ತಿಕ ಜೀವನ ಮತ್ತು ನಾನು ಮಾಡುತ್ತಿರುವ ಕೆಲಸವನ್ನು ಗುರಿಯಾಗಿಸಿಕೊಂಡು ಈ ರೀತಿಯ ಆರೋಪಗಳನ್ನು ಯಾರೂ ಮಾಡಿಲ್ಲ. ನನ್ನ ತನಿಖೆಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು’ ಎಂದು ಕೋರ್ಟ್ ಬಳಿ ಸಮೀರ್ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಹೀಗೆ ಆದ್ರೆ ಆರ್ಯನ್ ಖಾನ್ಗೆ ಸದ್ಯಕ್ಕೆ ಸಿಗಲ್ಲ ಜಾಮೀನು; ಸಮೀರ್ ವಾಂಖೆಡೆ ಸಿದ್ಧಪಡಿಸಿದ್ದಾರೆ ದೊಡ್ಡ ತಂತ್ರ
‘ಖಾಲಿ ಹಾಳೆಗೆ ಸಮೀರ್ ವಾಂಖೆಡೆ ಸಹಿ ಮಾಡಿಸಿಕೊಂಡ್ರು’: ಆರ್ಯನ್ ಬಂಧಿಸಿದ ಅಧಿಕಾರಿ ಮೇಲೆ ಗಂಭೀರ ಆರೋಪ