ಎಲ್ಲವನ್ನೂ ತ್ಯಾಗ ಮಾಡಿದ ಐಶ್ವರ್ಯಾಗೆ, ಬಚ್ಚನ್ ಕುಟುಂಬದಿಂದ ಸಿಕ್ಕಿದ್ದೇನು?
ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ಗಾಳಿ ಸುದ್ದಿ ಹರಿದಾಡುತ್ತಿದೆ. ನೆಟ್ಟಿಗರು ಐಶ್ವರ್ಯಾ ರೈ ಪರ ನಿಂತಿದ್ದು, ಕುಟುಂಬಕ್ಕಾಗಿ ತ್ಯಾಗ ಮಾಡಿರುವ ಐಶ್ವರ್ಯಾ ರೈಗೆ ಬಚ್ಚನ್ ಕುಟುಂಬ ಅವಮಾನ ಮಾಡಿದೆ ಎಂದಿದ್ದಾರೆ.
ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಮದುವೆ ಸಮಾರಂಭದಲ್ಲಿ ಇಡೀ ಬಾಲಿವುಡ್ ಚಿತ್ರರಂಗ ಭಾಗಿಯಾಗಿದೆ. ಚಿತ್ರರಂಗದ ಪ್ರಮುಖರಾಗಿರುವ ಅಮಿತಾಬ್ ಬಚ್ಚನ್ ಸಹ ಕುಟುಂಬ ಸಮೇತರಾಗಿ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ. ಆದರೆ ಈಗ ಅವರ ಕುಟುಂಬದಲ್ಲಿ ಐಶ್ವರ್ಯಾ ರೈಗೆ ಸ್ಥಾನ ಇದ್ದಂತಿಲ್ಲ. ಅಂಬಾನಿ ಮದುವೆಗೆ ಅಮಿತಾಬ್ ಬಚ್ಚನ್, ಜಯಾ ಬಚ್ಚನ್, ಅಭಿಷೇಕ್ ಬಚ್ಚನ್ ಇತರೆ ಕುಟುಂಬ ಸದಸ್ಯರು ಒಟ್ಟಿಗೆ ಆಗಮಿಸಿದ್ದರು. ಆದರೆ ಐಶ್ವರ್ಯಾ ಹಾಗೂ ಅವರ ಪುತ್ರಿ ಆರಾಧ್ಯ ಮಾತ್ರ ಪ್ರತ್ಯೇಕವಾಗಿ ಮದುವೆಗೆ ಬಂದಿದ್ದರು.
ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಕಳೆದ ಕೆಲವು ತಿಂಗಳುಗಳಿಂದಲೂ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಬಚ್ಚನ್ ಕುಟುಂಬ ಯಾವುದೇ ಸ್ಪಷ್ಟನೆ ನೀಡಿಲ್ಲ. ಆದರೆ ಅಂಬಾನಿ ಮದುವೆಗೆ ಐಶ್ವರ್ಯಾ ಹಾಗೂ ಅಭಿಷೇಕ್ ಪ್ರತ್ಯೇಕವಾಗಿ ಆಗಮಿಸಿದ್ದು ಗಮನಿಸಿರುವ ನೆಟ್ಟಿಗರು ಅಭಿಷೇಕ್ ಹಾಗೂ ಐಶ್ವರ್ಯಾರ ವಿಚ್ಛೇದನ ಖಾತ್ರಿ ಎಂದೇ ತೀರ್ಮಾನಿಸಿದಂತಿದೆ. ಇದರ ಜೊತೆಗೆ ನೆಟ್ಟಿಗರು ಐಶ್ವರ್ಯಾರನ್ನು ತಮ್ಮ ಕುಟುಂಬದಿಂದ ದೂರ ಇಟ್ಟಿದ್ದಕ್ಕೆ ಬಚ್ಚನ್ ಕುಟುಂಬವನ್ನು ತರಾಟೆಗೆ ಸಹ ತೆಗೆದುಕೊಂಡಿದ್ದಾರೆ.
ಅಭಿಷೇಕ್ ಬಚ್ಚನ್ ಅನ್ನು ಐಶ್ವರ್ಯಾ ರೈ ಮದುವೆ ಆದಾಗ ಐಶ್ವರ್ಯಾ ರೈ ಬಾಲಿವುಡ್ನ ಟಾಪ್ ತಾರೆ. ಐಶ್ವರ್ಯಾ ರೈ ಅಂಥಹ ಅಂದಗಾತಿ ಮತ್ತು ಪ್ರತಿಭಾವಂತ ನಟಿ ಇಡೀ ಬಾಲಿವುಡ್ನಲ್ಲಿ ಇರಲಿಲ್ಲ. ಆದರೆ ಅಭಿಷೇಕ್ ಬಚ್ಚನ್ ಅನ್ನು ಮದುವೆಯಾದ ಬಳಿಕ ತಮ್ಮ ನಟನಾ ವೃತ್ತಿಯನ್ನು ಪಕ್ಕಕ್ಕೆ ಸರಿಸಿ ಪತಿಗೆ ಬೆಂಬಲವಾಗಿ ನಿಂತರು ಐಶ್ವರ್ಯಾ, ಬಚ್ಚನ್ ಕುಟುಂಬಕ್ಕಾಗಿ ಐಶ್ವರ್ಯಾ ತಮ್ಮ ವೃತ್ತಿಯನ್ನೇ ತ್ಯಾಗ ಮಾಡಿದರು ಆದರೆ ಅವರಿಗೆ ಇಂದು ಸಿಕ್ಕಿದ್ದೇನು? ಅವಮಾನದ ಹೊರತಾಗಿ ಇನ್ನೇನನ್ನೂ ಬಚ್ಚನ್ ಕುಟುಂಬ ಐಶ್ವರ್ಯಾಗೆ ನೀಡಿಲ್ಲವೆಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ:ಎಷ್ಟು ಕ್ಯೂಟ್ ಆಗಿ ಕಾಣ್ತಿದ್ದಾರೆ ನೋಡಿ ಐಶ್ವರ್ಯಾ ರೈ ಮಗಳು
ಐಶ್ವರ್ಯಾ ರೈ ಮನಸ್ಸು ಮಾಡಿ ಚಿತ್ರರಂಗದಲ್ಲಿ ಮುಂದುವರೆದಿದ್ದರೆ ಅಮಿತಾಬ್ ಬಚ್ಚನ್, ಜಯಾ ಬಚ್ಚನ್, ಅಭಿಷೇಕ್ ಬಚ್ಚನ್ ಈ ಮೂವರಿಗಿಂತಲೂ ಚಿತ್ರರಂಗದಲ್ಲಿ ಹೆಚ್ಚು ಮಿಂಚಬಹುದಿತ್ತು, ದೊಡ್ಡ ಸ್ಟಾರ್ ಆಗಿ ಬೆಳಗಬಹುದಿತ್ತು ಆದರೆ ಅವರು ವೃತ್ತಿಗಿಂತಲೂ ಕುಟುಂಬ ಮುಖ್ಯವೆಂದು ಕುಟುಂಬವನ್ನು ಆರಿಸಿಕೊಂಡರು. ಆದರೆ ಬಚ್ಚನ್ ಕುಟುಂಬ ಐಶ್ವರ್ಯಾರ ತ್ಯಾಗಕ್ಕೆ ಬೆಲೆ ಕೊಟ್ಟಿಲ್ಲ, ಅವರನ್ನು ಒಂಟಿಯಾಗಿಸಲಾಗಿದೆ ಎಂದು ಕೆಲವು ನೆಟ್ಟಿಗರು ಆಕ್ಷೇಪ ಎತ್ತಿದ್ದಾರೆ.
ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ 2007 ರಲ್ಲಿ ವಿವಾಹವಾದರು. ಅವರಿಗೆ ಆರಾಧ್ಯ ಹೆಸರಿನ ಮಗಳಿದ್ದಾಳೆ. ಅಂಬಾನಿ ಕುಟುಂಬದ ಮದುವೆಗೆ ಪ್ರತ್ಯೇಕವಾಗಿ ಬಂದರೂ ಸಹ ಮದುವೆ ಸಮಾರಂಭದಲ್ಲಿ ಅಭಿಷೇಕ್ ಬಚ್ಚನ್ ಜೊತೆಗೆ ಐಶ್ವರ್ಯಾ ರೈ ಕುಳಿತಿದ್ದರು ಎನ್ನಲಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:07 am, Sun, 14 July 24