ಖ್ಯಾತ ನಟ ಸಿದ್ದಾರ್ಥ್ ಶುಕ್ಲಾ ಅವರ ಸಾವಿನ ಬಗ್ಗೆ ಹಲವು ಚರ್ಚೆಗಳು ನಡೆಯುತ್ತಿವೆ. ಜನರು ಸೋಶಿಯಲ್ ಮೀಡಿಯಾ ಮೂಲಕ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈ ವೇಳೆ ಸುಶಾಂತ್ ಸಿಂಗ್ ರಜಪೂತ್ ಅವರನ್ನೂ ನೆನಪಿಸಿಕೊಳ್ಳಲಾಗುತ್ತಿದೆ. 2020ರ ಜೂನ್ 14ರಂದು ಸುಶಾಂತ್ ಸಿಂಗ್ ರಜಪೂತ್ ನಿಧನರಾದ ಸುದ್ದಿ ಹೊರಬಿದ್ದಿತ್ತು. ಆಗ ಅಭಿಮಾನಿಗಳಿಗೆ ಆಘಾತ ಉಂಟಾಗಿತ್ತು. ಇಂದು ಸಿದ್ದಾರ್ಥ್ ಶುಕ್ಲಾ ಅಭಿಮಾನಿಗಳು ಕೂಡ ಅದೇ ಸ್ಥಿತಿಯಲ್ಲಿ ಇದ್ದಾರೆ. ಸಿದ್ದಾರ್ಥ್ ನಮ್ಮೊಂದಿಗೆ ಇಲ್ಲ ಎಂಬುದನ್ನು ಅಭಿಮಾನಿಗಳಿಂದ ನಂಬೋಕೆ ಸಾಧ್ಯವಾಗುತ್ತಿಲ್ಲ.
ಅನುಮಾನ ಮೂಡಿಸಿದ ಸಾವುಗಳು:
ಸುಶಾಂತ್ ಸಿಂಗ್ ರಜಪೂತ್ ತುಂಬ ಪಾಸಿಟಿವ್ ವಿಚಾರಗಳನ್ನು ಇಟ್ಟುಕೊಂಡಂತಹ ವ್ಯಕ್ತಿ ಆಗಿದ್ದರು. ಆದರೆ ಅಂಥ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡರು ಎಂದಾಗ ಜನರಿಗೆ ನಂಬೋದು ಕಷ್ಟ ಆಯಿತು. ಅದೇ ರೀತಿ ಸಿದ್ದಾರ್ಥ್ ಶುಕ್ಲಾ ಕೂಡ ಫಿಟ್ನೆಸ್ ಬಗ್ಗೆ ಹೆಚ್ಚು ಕಾಳಜಿ ವಹಿಸುವಂತಹ ವ್ಯಕ್ತಿ. ಅಂಥವರು ಹೃದಯಾಘಾತಕ್ಕೆ ಒಳಗಾಗಿದ್ದಾರೆ ಎಂಬುದನ್ನು ಜನರು ಅನುಮಾನದ ದೃಷ್ಟಿಯಿಂದ ನೋಡುತ್ತಿದ್ದಾರೆ. ಈ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ.
ಕೂಪರ್ ಆಸ್ಪತ್ರೆ ಮೇಲೆ ಅಸಮಾಧಾನ:
ಸುಶಾಂತ್ ಸಿಂಗ್ ರಜಪೂತ್ ಅವರ ಶವವನ್ನು ಮುಂಬೈನ ಕೂಪರ್ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿತ್ತು. ಅವರ ಮರಣೋತ್ತರ ಪರೀಕ್ಷೆ ಬಗ್ಗೆ ಇನ್ನೂ ಹಲವು ಅನುಮಾನಗಳಿವೆ. ಹೀಗಿರುವಾಗ ಸಿದ್ದಾರ್ಥ್ ಅವರನ್ನು ಕೂಡ ಮತ್ತದೇ ಕೂಪರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಯಾಕೆ ಎಂದು ಅನೇಕರು ಪ್ರಶ್ನಿಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿಗಾಗಿ ಎಲ್ಲರೂ ಕಾಯುತ್ತಿದ್ದಾರೆ.
ಪ್ರೇಯಸಿಯರಿಗೆ ಸಂಕಷ್ಟ:
ಸುಶಾಂತ್ ಸಿಂಗ್ ರಜಪೂತ್ ನಿಧನರಾದ ಬಳಿಕ ಅವರ ಪ್ರೇಯಸಿ ರಿಯಾ ಚಕ್ರವರ್ತಿಗೆ ಸಂಕಷ್ಟ ಶುರುವಾಗಿತ್ತು. ಸುಶಾಂತ್ ಸಾವಿಗೂ ರಿಯಾ ಚಕ್ರವರ್ತಿಗೂ ಏನಾದರೂ ಸಂಬಂಧ ಇದೆಯೇ ಎಂಬ ಅನುಮಾನ ಹುಟ್ಟುಕೊಂಡಿತ್ತು. ಈಗ ಸಿದ್ದಾರ್ಥ್ ಪ್ರೇಯಸಿ ಎನ್ನಲಾದ ಶೆಹನಾಜ್ ಗಿಲ್ ಅವರಿಗೂ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಸಿದ್ದಾರ್ಥ್ಗೆ ಹೃದಯಾಘಾತವಾದ ದಿನ ಶೆಹನಾಜ್ ಕೂಡ ಅವರ ಜೊತೆ ಇದ್ದರು ಎಂಬ ಮಾಹಿತಿ ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಸದ್ಯಕ್ಕೆ ಶೆಹನಾಜ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಅಜಾತಶತ್ರುಗಳಾಗಿದ್ದ ಹೀರೋಗಳು:
ಸಿದ್ದಾರ್ಥ್ ಶುಕ್ಲಾ ಮತ್ತು ಸುಶಾಂತ್ ಸಿಂಗ್ ರಜಪೂತ್ ನಡುವೆ ಹಲವು ಗುಣಗಳು ಒಂದೇ ರೀತಿ ಇದ್ದವು. ಸುಶಾಂತ್ ರೀತಿಯೇ ಸಿದ್ದಾರ್ಥ್ ಅವರನ್ನು ಕೂಡ ಎಲ್ಲರೂ ಇಷ್ಟಪಡುತ್ತಿದ್ದರು. ಅನಗತ್ಯವಾಗಿ ಅವರು ಯಾರೊಂದಿಗೂ ಕಾಲು ಕೆರೆದು ಜಗಳಕ್ಕೆ ಹೋಗುತ್ತಿರಲಿಲ್ಲ. ಬಾಲಿವುಡ್ನಲ್ಲಿ ಮಿಂಚಬೇಕಾಗಿದ್ದ ಈ ಪ್ರತಿಭಾವಂತರು ಅಕಾಲಿಕ ಮರಣ ಹೊಂದಿರುವುದು ಅವರ ಅಭಿಮಾನಿಗಳಿಗೆ ತೀವ್ರ ನೋವುಂಟು ಮಾಡಿದೆ.
ಇದನ್ನೂ ಓದಿ:
SSR Case: ಸುಶಾಂತ್ ಸಿಂಗ್ ರಜಪೂತ್ ನಿಧನರಾಗಿ ಒಂದು ವರ್ಷ ಕಳೆಯುವುದರೊಳಗೆ ಆದ 30 ಪ್ರಮುಖ ಘಟನೆಗಳೇನು?
ಪ್ರೇಯಸಿ ಮಡಿಲಲ್ಲೇ ಪ್ರಾಣ ಬಿಟ್ರಾ ಸಿದ್ದಾರ್ಥ್? ಹೃದಯಾಘಾತ ಆಗೋದಕ್ಕೂ ಮುನ್ನ ನಡೆದಿದ್ದೇನು? ಇಲ್ಲಿದೆ ವಿವರ