ಕಲಾ ನಿರ್ದೇಶಕನ ನಿಧನಕ್ಕೆ ಸಂತಾಪ ಸೂಚಿಸಲು ‘ಒಎಂಜಿ 2’ ಟ್ರೇಲರ್​ ಬಿಡುಗಡೆ ಮುಂದೂಡಿದ ಅಕ್ಷಯ್​ ಕುಮಾರ್​

OMG 2 Trailer: ಬುಧವಾರ (ಆಗಸ್ಟ್​ 2) ‘ಒಹ್​ ಮೈ ಗಾಡ್​ 2’ ಚಿತ್ರದ ಟ್ರೇಲರ್​ ಬಿಡುಗಡೆ ಮಾಡಲು ಸಿದ್ಧತೆ ನಡೆದಿತ್ತು. ಆದರೆ ಕೊನೇ ಕ್ಷಣದಲ್ಲಿ ಅಕ್ಷಯ್​ ಕುಮಾರ್​ ಅವರು ನಿರ್ಧಾರ ಬದಲಿಸಿದ್ದಾರೆ.

ಕಲಾ ನಿರ್ದೇಶಕನ ನಿಧನಕ್ಕೆ ಸಂತಾಪ ಸೂಚಿಸಲು ‘ಒಎಂಜಿ 2’ ಟ್ರೇಲರ್​ ಬಿಡುಗಡೆ ಮುಂದೂಡಿದ ಅಕ್ಷಯ್​ ಕುಮಾರ್​
ಅಕ್ಷಯ್​ ಕುಮಾರ್​, ನಿತಿನ್​ ದೇಸಾಯಿ

Updated on: Aug 02, 2023 | 6:22 PM

ಹಿಂದಿ ಚಿತ್ರರಂಗಕ್ಕೆ ಇಂದು (ಆಗಸ್ಟ್​ 2) ಆಘಾತಕಾರಿ ಸುದ್ದಿಯೊಂದು ಕೇಳಿಬಂತು. ಖ್ಯಾತ ಕಲಾ ನಿರ್ದೇಶಕ ನಿತಿನ್​ ದೇಸಾಯಿ (Nitin Desai) ಅವರು ಆತ್ಮಹತ್ಯೆ ಮಾಡಿಕೊಂಡರು. ತಮ್ಮದೇ ಸ್ಟುಡಿಯೋದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಶವ ಪತ್ತೆ ಆಯಿತು. ಅವರ ನಿಧನಕ್ಕೆ ಬಾಲಿವುಡ್​ ಸೆಲೆಬ್ರಿಟಿಗಳು ಸಂತಾಪ ಸೂಚಿಸಿದ್ದಾರೆ. ಭಾರತೀಯ ಚಿತ್ರರಂಗಕ್ಕೆ ನಿತಿನ್​ ದೇಸಾಯಿ ಅವರು ನೀಡಿದ್ದ ಕೊಡುಗೆ ಅಪಾರ. ಆ ಕಾರಣದಿಂದ ಅವರ ನಿಧನದಿಂದ ಚಿತ್ರರಂಗಕ್ಕೆ ದೊಡ್ಡ ನಷ್ಟ ಆಗಿದೆ. ನಟ ಅಕ್ಷಯ್​ ಕುಮಾರ್​ (Akshay Kumar) ಕೂಡ ನಿತಿನ್​ ದೇಸಾಯಿ ಅವರ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ. ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ‘ಒಎಂಜಿ 2’ ಸಿನಿಮಾದ ಟ್ರೇಲರ್​ (OMG 2 Trailer) ಬಿಡುಗಡೆಯನ್ನು ಮುಂದೂಡಲಾಗಿದೆ. ಸೋಶಿಯಲ್ ಮೀಡಿಯಾ ಮೂಲಕ ಅಕ್ಷಯ್​ ಕಮಾರ್​ ಅವರು ಈ ವಿಷಯವನ್ನು ತಿಳಿಸಿದ್ದಾರೆ.

‘ನಿತಿನ್​ ದೇಸಾಯಿ ಅವರ ನಿಧನವನ್ನು ನಂಬಲಾಗುತ್ತಿಲ್ಲ. ಪ್ರೊಡಕ್ಷನ್​ ಡಿಸೈನ್​ನಲ್ಲಿ ಅವರು ಪ್ರಮುಖ ವ್ಯಕ್ತಿ ಆಗಿದ್ದರು. ನಮ್ಮ ಚಿತ್ರರಂಗದ ದೊಡ್ಡ ಭಾಗವಾಗಿದ್ದರು. ನನ್ನ ಅನೇಕ ಸಿನಿಮಾಗಳಿಗೂ ಅವರು ಕೆಲಸ ಮಾಡಿದ್ದರು. ಅವರು ನಿಧನದಿಂದ ದೊಡ್ಡ ನಷ್ಟ ಉಂಟಾಗಿದೆ. ಅವರಿಗೆ ಗೌರವ ಸೂಚಿಸುವ ಸಲುವಾಗಿ ನಾವು ಇಂದು ಒಎಂಜಿ 2 ಸಿನಿಮಾದ ಟ್ರೇಲರ್​ ಬಿಡುಗಡೆ ಮಾಡುತ್ತಿಲ್ಲ. ನಾಳೆ (ಆಗಸ್ಟ್​ 3) ಬೆಳಗ್ಗೆ 11 ಗಂಟೆಗೆ ಬಿಡುಗಡೆ ಮಾಡುತ್ತೇವೆ. ಓಂ ಶಾಂತಿ’ ಎಂದು ಅಕ್ಷಯ್​ ಕುಮಾರ್​ ಅವರು ಟ್ವೀಟ್​ ಮಾಡಿದ್ದಾರೆ.

‘ಒಎಂಜಿ 2’ ಅಲಿಯಾಸ್​ ‘ಓಹ್​ ಮೈ ಗಾಡ್​ 2’ ಸಿನಿಮಾಗೆ ಅಮಿತ್​ ರೈ ನಿರ್ದೇಶನ ಮಾಡಿದ್ದಾರೆ. ಅಕ್ಷಯ್​ ಕುಮಾರ್​, ಪಂಕಜ್​ ತ್ರಿಪಾಠಿ, ಯಾಮಿ ಗೌತಮ್​ ಮುಂತಾದವರು ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ. ಈ ಸಿನಿಮಾದಲ್ಲಿ ಸಲಿಂಗಕಾಮಕ್ಕೆ ಸಂಬಂಧಿಸಿದ ಕತೆ ಇದೆ ಎಂದು ಹೇಳಲಾಗುತ್ತಿದೆ. ಆದರೆ ಆ ಕತೆಯನ್ನು ಹೇಳಲು ದೇವರ ಪಾತ್ರಗಳನ್ನು ಬಳಸಿಕೊಳ್ಳಲಾಗಿದೆ. ಹಾಗಾಗಿ ಸೆನ್ಸಾರ್​ ಮಂಡಳಿಯವರು ಈ ಚಿತ್ರಕ್ಕೆ ಪ್ರಮಾಣ ಪತ್ರ ನೀಡಲು ಹಿಂದೇಟು ಹಾಕಿದ್ದರು. ಈಗ ‘ಎ’ ಪ್ರಮಾಣಪತ್ರದೊಂದಿಗೆ ‘ಒಎಂಜಿ 2’ ಬಿಡುಗಡೆಗೆ ಸಜ್ಜಾಗಿದೆ.

ಇದನ್ನೂ ಓದಿ: 12 ವರ್ಷಗಳ ಬಳಿಕ ಅಕ್ಷಯ್​ ಕುಮಾರ್​ ಚಿತ್ರಕ್ಕೆ ಸಿಕ್ತು ‘ಎ’ ಪ್ರಮಾಣಪತ್ರ; ‘ಒಎಂಜಿ 2’ ಚಿತ್ರ ವಯಸ್ಕರಿಗೆ ಮಾತ್ರ

ಆಗಸ್ಟ್​ 11ರಂದು ‘ಒಎಂಜಿ 2’ ಸಿನಿಮಾ ರಿಲೀಸ್​ ಆಗಲಿದೆ. ಎಲ್ಲವೂ ಅಂದಕೊಂಡಂತೆ ಆಗಿದ್ದರೆ ಇಷ್ಟುಹೊತ್ತಿಗಾಗಲೇ ಈ ಸಿನಿಮಾದ ಟ್ರೇಲರ್​ ಬಿಡುಗಡೆ ಆಗಿರಬೇಕಿತ್ತು. ಆದರೆ ಸೆನ್ಸಾರ್​ ಸಮಸ್ಯೆ ಎದುರಾಗಿದ್ದರಿಂದ ಟ್ರೇಲರ್​ ರಿಲೀಸ್​ಗೆ ವಿಘ್ನ ಎದುರಾಗಿತ್ತು. ಈಗ ನಿತಿನ್​ ದೇಸಾಯಿ ಅವರ ಮರಣದಿಂದಾಗಿ ಟ್ರೇಲರ್​ ಬಿಡುಗಡೆಯನ್ನು ಮತ್ತೊಂದು ದಿನ ಮುಂದಕ್ಕೆ ಹಾಕಲಾಗಿದೆ. ಅಕ್ಷಯ್​ ಕುಮಾರ್​ ಅವರ ಈ ನಿರ್ಧಾರವನ್ನು ಅಭಿಮಾನಿಗಳು ಗೌರವಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us