12 ವರ್ಷಗಳ ಬಳಿಕ ಅಕ್ಷಯ್ ಕುಮಾರ್ ಚಿತ್ರಕ್ಕೆ ಸಿಕ್ತು ‘ಎ’ ಪ್ರಮಾಣಪತ್ರ; ‘ಒಎಂಜಿ 2’ ಚಿತ್ರ ವಯಸ್ಕರಿಗೆ ಮಾತ್ರ
OMG 2: ಅಕ್ಷಯ್ ಕುಮಾರ್ ಅವರ ಸಿನಿಮಾಗಳನ್ನು ಹೆಚ್ಚಾಗಿ ಫ್ಯಾಮಿಲಿ ಪ್ರೇಕ್ಷಕರು ಇಷ್ಟಪಡುತ್ತಾರೆ. ಆದರೆ ‘ಎ’ ಪ್ರಮಾಣ ಪತ್ರ ಸಿಕ್ಕಿರುವುದರಿಂದ ‘ಒಎಂಜಿ 2’ ಚಿತ್ರದ ಕಲೆಕ್ಷನ್ ತಗ್ಗಬಹುದು.
ನಟ ಅಕ್ಷಯ್ ಕುಮಾರ್ (Akshay Kumar) ಅವರು ಒಂದು ಗೆಲುವಿಗಾಗಿ ಕಾದಿದ್ದಾರೆ. ‘ಒಎಂಜಿ 2’ ಸಿನಿಮಾ (OMG 2 Movie) ಮೂಲಕ ಅವರು ಗೆಲ್ಲುತ್ತಾರೆ ಎಂಬ ನಂಬಿಕೆ ಅಭಿಮಾನಿಗಳಿಗೆ ಇದೆ. ಆದರೆ ಈ ಚಿತ್ರದ ರಿಲೀಸ್ಗೆ ಸೆನ್ಸಾರ್ ಸಮಸ್ಯೆ ಎದುರಾಗಿತ್ತು. ಸಲಿಂಗಕಾಮದ ವಿಷಯ ಇರುವ ಈ ಚಿತ್ರದಲ್ಲಿ ದೇವರ ಪಾತ್ರವನ್ನು ಬಳಸಿಕೊಳ್ಳಲಾಗಿದೆ ಎಂಬ ಕಾರಣಕ್ಕೆ ಸೆನ್ಸಾರ್ ಮಂಡಳಿಯವರು ಪ್ರಮಾಣಪತ್ರ ನೀಡಲು ಹಿಂದೇಟು ಹಾಕಿದ್ದರು. ಈಗ ರಿವೈಸಿಂಗ್ ಕಮಿಟಿಯಲ್ಲಿ ಈ ಚಿತ್ರಕ್ಕೆ ‘ಎ’ ಪ್ರಮಾಣ ಪತ್ರ (A Certificate) ಸಿಕ್ಕಿದೆ. ಅಂದರೆ, ವಯಸ್ಕರು ಮಾತ್ರ ‘ಒಎಂಜಿ 2’ ಸಿನಿಮಾ ವೀಕ್ಷಿಸಬಹುದು. 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಈ ಸಿನಿಮಾವನ್ನು ನೋಡುವಂತಿಲ್ಲ.
ಅಕ್ಷಯ್ ಕುಮಾರ್ ಅವರ ಸಿನಿಮಾಗೆ ಫ್ಯಾಮಿಲಿ ಪ್ರೇಕ್ಷಕರು ಇದ್ದಾರೆ. ಮಕ್ಕಳು ಕೂಡ ಅವರನ್ನು ಇಷ್ಟಪಡುತ್ತಾರೆ. ಆದರೆ ‘ಎ’ ಪ್ರಮಾಣ ಪತ್ರ ಸಿಕ್ಕರೆ ಮಕ್ಕಳನ್ನು ಕರೆದುಕೊಂಡು ಬಂದು ಚಿತ್ರಮಂದಿರದಲ್ಲಿ ಫ್ಯಾಮಿಲಿ ಸಮೇತರಾಗಿ ಸಿನಿಮಾ ನೋಡಲು ಪ್ರೇಕ್ಷಕರಿಗೆ ಸಾಧ್ಯವಾಗುವುದಿಲ್ಲ. ಇದರಿಂದ ಚಿತ್ರದ ಕಲೆಕ್ಷನ್ ತಗ್ಗಬಹುದು. ಕಳೆದ 12 ವರ್ಷಗಳಲ್ಲಿ ಅಕ್ಷಯ್ ಕುಮಾರ್ ಅವರ ಯಾವುದೇ ಸಿನಿಮಾಗೆ ‘ಎ’ ಪ್ರಮಾಣ ಪತ್ರ ಸಿಕ್ಕಿರಲಿಲ್ಲ. 2011ರಲ್ಲಿ ಬಂದ ‘ದೇಸಿ ಬಾಯ್ಸ್’ ಚಿತ್ರದ ಬಳಿಕ ‘ಒಎಂಜಿ 2’ ಸಿನಿಮಾಗೆ ‘ಎ’ ಪ್ರಮಾಣಪತ್ರ ನೀಡಲಾಗಿದೆ.
ಹೇಗಾದರೂ ಮಾಡಿ ‘ಯು/ಎ’ ಪ್ರಮಾಣಪತ್ರ ಪಡೆಯಬೇಕು ಎಂಬುದು ‘ಒಎಂಜಿ 2’ ಚಿತ್ರತಂಡದವರ ಉದ್ದೇಶ ಆಗಿತ್ತು. ಆದರೆ ಅದಕ್ಕೆ ಸೆನ್ಸಾರ್ ಮಂಡಳಿಯವರು ಒಪ್ಪಲಿಲ್ಲ. ಒಂದು ವೇಳೆ ‘ಯು/ಎ’ ಪ್ರಮಾಣಪತ್ರ ಬೇಕು ಎಂದಾದರೆ 20ಕ್ಕೂ ಅಧಿಕ ಕಡೆಗಳಿಗೆ ಕತ್ತರಿ ಹಾಕುವುದು ಅನಿವಾರ್ಯ ಆಗಿತ್ತು. ಹಾಗೆ ಮಾಡಿದರೆ ಚಿತ್ರದ ಕಥೆಯಲ್ಲಿ ವ್ಯತ್ಯಾಸ ಆಗುತ್ತದೆ ಎಂಬ ಕಾರಣಕ್ಕೆ ಚಿತ್ರತಂಡದವರು ಅದಕ್ಕೆ ಒಪ್ಪಿಕೊಳ್ಳಲಿಲ್ಲ. ಕತ್ತರಿ ಹಾಕುವ ಬದಲು ದೃಶ್ಯಗಳಲ್ಲಿ ಒಂದಷ್ಟು ಬದಲಾವಣೆಗಳನ್ನು ಮಾಡಿಕೊಂಡು ‘ಎ’ ಪ್ರಮಾಣಪತ್ರ ಪಡೆಯಲು ಒಪ್ಪಿಕೊಳ್ಳಲಾಗಿದೆ.
ಇದನ್ನೂ ಓದಿ: CBFC: ‘72 ಹೂರೇ’ಚಿತ್ರದ ಟ್ರೇಲರ್ಗೆ ಪ್ರಮಾಣಪತ್ರ ನೀಡಲು ಸೆನ್ಸಾರ್ ಮಂಡಳಿ ನಕಾರ; ವಿವಾದಿತ ಚಿತ್ರದಲ್ಲಿ ಅಂಥದ್ದೇನಿದೆ?
ಆಗಸ್ಟ್ 11ರಂದು ‘ಒಎಂಜಿ 2’ ಸಿನಿಮಾ ಬಿಡುಗಡೆ ಆಗಲಿದೆ. ಈಗತಾನೇ ಸೆನ್ಸಾರ್ ಪ್ರಮಾಣ ಪತ್ರ ಸಿಕ್ಕಿದ್ದು, ರಿಲೀಸ್ಗೆ ಕೆಲವೇ ದಿನಗಳು ಬಾಕಿ ಇರುವುದರಿಂದ ಪ್ರಚಾರ ಕಾರ್ಯಕ್ಕೆ ಭಾರಿ ಮಹತ್ವ ನೀಡುವ ಅನಿವಾರ್ಯತೆ ಇದೆ. ಶೀಘ್ರದಲ್ಲೇ ಈ ಚಿತ್ರದ ಟ್ರೇಲರ್ ಬಿಡುಗಡೆ ಆಗಲಿದೆ. ಅಕ್ಷಯ್ ಕುಮಾರ್ ಜೊತೆ ಪಂಕಜ್ ತ್ರಿಪಾಠಿ, ಯಾಮಿ ಗೌತಮ್ ಕೂಡ ಈ ಸಿನಿಮಾದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಅಮಿತ್ ರೈ ಅವರು ನಿರ್ದೇಶನ ಮಾಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.