ನೆಚ್ಚಿನ ಸೆಲೆಬ್ರಿಟಿಗಳ ಟ್ಯಾಟೂನ ದೇಹದ ಮೇಲೆ ಹಾಕಿಸಿಕೊಳ್ಳುವವರಿದ್ದಾರೆ. ಮನೆಯಲ್ಲಿ ನೆಚ್ಚಿನ ಸ್ಟಾರ್ನ ಫೋಟೋ ಹಾಕಿಕೊಳ್ಳುವವರೂ ಇದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಮಕ್ಕಳಿಗೆ ನೆಚ್ಚಿನ ಹೀರೋ ಹೆಸರನ್ನು ಇಟ್ಟವರಿದ್ದಾರೆ. ಆದರೆ, ಇಲ್ಲೋರ್ವ ವೃದ್ಧೆ ಸಾಯುವುದಕ್ಕೂ ಮುನ್ನ ತನ್ನ 72 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ನಟ ಸಂಜಯ್ ದತ್ (Sanjay Dutt) ಹೆಸರಿಗೆ ಬರೆದಿದ್ದರು. ಈ ಘಟನೆ ನಡೆದಿದ್ದು 2018ರಲ್ಲಿ. ಕೆಲ ಅಭಿಮಾನಿಗಳು ಈ ಘಟನೆಯನ್ನು ಈಗ ಸೋಶಿಯಲ್ ಮೀಡಿಯಾದಲ್ಲಿ (Social Media) ನೆನಪಿಸಿಕೊಂಡಿದ್ದಾರೆ.
ನಿಶಾ ಪಾಟೀಲ್ ಹೆಸರಿನ 62 ವರ್ಷದ ವೃದ್ಧೆ ಮುಂಬೈನಲ್ಲಿ ವಾಸವಾಗಿದ್ದರು. ಅವರು ಸಂಜಯ್ ದತ್ ಅವರ ಹುಚ್ಚು ಅಭಿಮಾನಿ. ಅವರು 2018ರ ಜನವರಿ 15ರಂದು ವಯೋಸಹಜ ಕಾಯಿಲೆಯಿಂದ ಮೃತಪಟ್ಟರು. ತಮ್ಮ ಆಸ್ತಿಯನ್ನು ಅವರು ಮಕ್ಕಳಿಗೆ ಬರೆದಿಟ್ಟಿರಬಹುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಅವರು ತಮ್ಮ ಎಲ್ಲಾ ಆಸ್ತಿಯನ್ನು ಸಂಜಯ್ ದತ್ಗೆ ನೀಡುವ ನಿರ್ಧಾರ ತೆಗೆದುಕೊಂಡಿದ್ದರು.
ನಿಶಾ ಮೃತಪಟ್ಟ ನಂತರದಲ್ಲಿ ಪೊಲೀಸರಿಗೆ ವಿಲ್ ವಿಚಾರ ಗೊತ್ತಾಗಿದೆ. ಹೀಗಾಗಿ, ಸಂಜಯ್ ದತ್ಗೆ ಕರೆ ಮಾಡಿ ಪೊಲೀಸರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಬ್ಯಾಂಕ್ನಲ್ಲಿರುವ ಹಣ, ಜ್ಯುವೆಲರಿ, ಮನೆ ಸೇರಿ 72 ಕೋಟಿ ಮೌಲ್ಯದ ಆಸ್ತಿಯನ್ನು ನಿಶಾ ಹೊಂದಿದ್ದರು. ಎಲ್ಲವೂ ಸಂಜಯ್ ದತ್ ಹೆಸರಿಗೆ ಅವರು ಬರೆದಿದ್ದರು.
ಈ ವಿಚಾರ ತಿಳಿದ ನಂತರದಲ್ಲಿ ಸಂಜಯ್ ದತ್ಗೆ ಶಾಕ್ ಆಗಿತ್ತು. ಅವರು ಈ ಹಣವನ್ನು ಮುಟ್ಟಿಲ್ಲ. ಬದಲಿಗೆ ನಿಶಾ ಪಾಟಿಲ್ ಅವರ ಮಕ್ಕಳ ಹೆಸರಿಗೆ ಇದನ್ನು ವರ್ಗಾವಣೆ ಮಾಡಿದ್ದರು. 2018ರಲ್ಲಿ ಈ ವಿಚಾರ ಸಾಕಷ್ಟು ಸೆನ್ಸೇಷನ್ ಸೃಷ್ಟಿ ಮಾಡಿತ್ತು.
ಸಂಜಯ್ ದತ್ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಸೇವೆ ಸಲ್ಲಿಸುತ್ತಾ ಬರುತ್ತಿದ್ದಾರೆ. ಅವರನ್ನು ಕಂಡರೆ ಅನೇಕರಿಗೆ ಇಷ್ಟ. ಅವರಿಗೆ ಈ ರೀತಿಯ ಹುಚ್ಚು ಅಭಿಮಾನ ತೋರುವವರೂ ಇದ್ದಾರೆ ಎಂಬುದು 2018ರಲ್ಲಿ ಗೊತ್ತಾಗಿತ್ತು.
ಇದನ್ನೂ ಓದಿ: ದಕ್ಷಿಣ ಭಾರತದ ಸಿನಿಮಾಗಳನ್ನು ಕೊಂಡಾಡಿದ ಸಂಜಯ್ ದತ್; ‘ಕೆಡಿ’ ವೇದಿಕೆ ಮೇಲೆ ಬಾಲಿವುಡ್ ಹೀರೋ ಹೇಳಿದ್ದಿಷ್ಟು
ಸಂಜಯ್ ದತ್ ಅವರು ‘ಕೆಜಿಎಫ್ 2’ ಚಿತ್ರದಿಂದ ಕನ್ನಡಕ್ಕೆ ಕಾಲಿಟ್ಟರು. ಪ್ರೇಮ್ ನಿರ್ದೇಶನದ, ಧ್ರುವ ಸರ್ಜಾ ನಟನೆಯ ‘ಕೆಡಿ’ ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ