ಶಾರುಖ್ ಖಾನ್ ಜೊತೆ ನಟಿಸುವ ಅವಕಾಶ ಸಿಕ್ಕರೆ ಬಹುತೇಕ ನಟಿಯರು ಕಣ್ಣು ಮುಚ್ಚಿಕೊಂಡು ಒಪ್ಪಿಕೊಳ್ಳುತ್ತಾರೆ. ಅಷ್ಟರಮಟ್ಟಿಗೆ ಇದೆ ಶಾರುಖ್ ಹವಾ. ಆದರೆ ನಟಿ ರವೀನಾ ಟಂಡನ್ ಅವರು ಈ ಮೊದಲು ಶಾರುಖ್ ಖಾನ್ ಜೊತೆಗಿನ ಒಂದು ಸಿನಿಮಾವನ್ನು ತಿರಸ್ಕರಿಸಿದ್ದರು. ಆ ಕುರಿತು ಅವರು ಈಗ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಶಾರುಖ್ ಖಾನ್ ಮತ್ತು ರವೀನಾ ಟಂಡನ್ ಅವರು ಜೊತೆಯಾಗಿ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಒಂದು ಸಿನಿಮಾದಿಂದ ರವೀನಾ ಟಂಡನ್ ಅವರು ಮುಲಾಜಿಲ್ಲದೇ ಹೊರಬಂದಿದ್ದರು.
ಅದು ಯಾವ ಸಿನಿಮಾ ಎಂಬುದನ್ನು ರವೀನಾ ಟಂಡನ್ ಅವರು ಬಹಿರಂಗಪಡಿಸಿಲ್ಲ. ಆದರೆ ಆದ ಘಟನೆ ಏನು ಎಂಬುದನ್ನು ವಿವರಿಸಿದ್ದಾರೆ. ಆ ಸಿನಿಮಾದ ಕಥೆಯನ್ನು ರವೀನಾ ಟಂಡನ್ ಅವರು ಕೇಳಿ ಇಷ್ಟಪಟ್ಟಿದ್ದರು. ಸಿನಿಮಾದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ಕೂಡ ನೀಡಿದ್ದರು. ಆದರೆ ಸಮಸ್ಯೆ ಆಗಿದ್ದು ಬಟ್ಟೆಯದ್ದು! ಹೌದು, ತಮಗೆ ಸರಿ ಎನಿಸದ ರೀತಿಯ ಕಾಸ್ಟ್ಯೂಮ್ ಧರಿಸಲು ಹೇಳಿದ್ದರಿಂದ ರವೀನಾ ಟಂಡನ್ ಅವರು ಆ ಸಿನಿಮಾದಿಂದ ಹೊರನಡೆದರು.
ಆ ಬಟ್ಟೆಯ ಮೂಲಕ ನಟಿಯನ್ನು ಒಂದು ವಸ್ತುವಿನ ರೀತಿಯಲ್ಲಿ ಬಿಂಬಿಸುವ ಉದ್ದೇಶ ಆ ಚಿತ್ರತಂಡದ್ದಾಗಿತ್ತು. ಅದಕ್ಕೆ ರವೀನಾ ಅವರಿಗೆ ಸಹಮತ ಇರಲಿಲ್ಲ. ಅಂಥ ಕಾಸ್ಟ್ಯೂಮ್ ಅವರಿಗೆ ವಿಚಿತ್ರ ಅಂತ ಎನಿಸಿತು ಕೂಡ. ಹಾಗಾಗಿ ಮುಲಾಜಿಲ್ಲದೇ ತಮ್ಮ ನಿರ್ಧಾರ ತಿಳಿಸಿದರು. ಬಳಿಕ ಶಾರುಖ್ ಖಾನ್ ಅವರಿಗೆ ಕರೆಮಾಡಿ ವಿಷಯ ತಿಳಿಸಿದರು. ಶಾರುಖ್ ಕೂಡ ಸಮಸ್ಯೆ ಅರ್ಥ ಮಾಡಿಕೊಂಡರು. ಹಾಗಾಗಿ ಶಾರುಖ್ ಖಾನ್ ಅವರನ್ನು ಜಂಟಲ್ಮ್ಯಾನ್ ಎಂದು ರವೀನಾ ಟಂಡನ್ ಕರೆದಿದ್ದಾರೆ.
ಇದನ್ನೂ ಓದಿ: ರವೀನಾ ಟಂಡನ್ ವಿಡಿಯೋ ವೈರಲ್ ಮಾಡಿದ ವ್ಯಕ್ತಿ ಮೇಲೆ ಮಾನನಷ್ಟ ಮೊಕದ್ದಮೆ
ಇನ್ನು, ಬೇರೆ ಕಾರಣಗಳಿಂದಲೂ ರವೀನಾ ಟಂಡನ್ ಅವರು ಶಾರುಖ್ ಜೊತೆಗಿನ ಸಿನಿಮಾವನ್ನು ರಿಜೆಕ್ಟ್ ಮಾಡಿದ್ದರು. ಶಾರುಖ್ ಖಾನ್ ನಟನೆಯ ‘ಡರ್’ ಸಿನಿಮಾ 1993ರಲ್ಲಿ ಮೂಡಿಬಂದಿತ್ತು. ಆ ಸಿನಿಮಾಗೆ ಯಶ್ ಚೋಪ್ರಾ ಅವರು ನಿರ್ದೇಶನ ಮಾಡಿದ್ದರು. ಆ ಚಿತ್ರದಲ್ಲಿ ನಟಿಸುವಂತೆ ರವೀನಾ ಟಂಡನ್ ಅವರಿಗೆ ಆಫರ್ ನೀಡಲಾಗಿತ್ತು. ಆದರೆ ಅದರಲ್ಲಿನ ಕೆಲವು ದೃಶ್ಯಗಳು ತಮಗೆ ಸರಿ ಎನಿಸುತ್ತಿಲ್ಲ ಎಂಬ ಕಾರಣಕ್ಕೆ ರವೀನಾ ಟಂಡನ್ ಅವರು ಆಫರ್ ತಿರಸ್ಕರಿಸಿದ್ದರು. ಬಳಿಕ ಆ ಪಾತ್ರವನ್ನು ಜೂಹಿ ಚಾವ್ಲಾ ಮಾಡಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.