ಆಸ್ಕರ್ ರೇಸ್‌ನಲ್ಲಿ ‘ಗೋಂಧಲ್’; ಅಸಮಾಧಾನ ಹೊರಹಾಕಿದ ಖ್ಯಾತ ನಿರ್ದೇಶಕ

2027ರ ಆಸ್ಕರ್ ಪ್ರಶಸ್ತಿಗೆ ಭಾರತದ ಅಧಿಕೃತ ಸ್ಪರ್ಧಿಯಾಗಿ 'ಗೋಂಧಾಲ್' ಚಿತ್ರ ಆಯ್ಕೆಯಾಗಿದೆ. ಈ ಆಯ್ಕೆಯನ್ನು ನಿರ್ದೇಶಕ ಅನುರಾಗ್ ಕಶ್ಯಪ್ ಪ್ರಶ್ನಿಸಿದ್ದು, ದೊಡ್ಡ ಮಟ್ಟದ ಚರ್ಚೆ ಆರಂಭವಾಗಿದೆ. ಕಶ್ಯಪ್ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿರುವ ಚಿತ್ರದ ನಿರ್ದೇಶಕ ಸಂತೋಷ್ ದಾವ್ಖರ್, ಸಿನಿಮಾ ನೋಡದೆ ಯಾವುದೇ ಅಭಿಪ್ರಾಯ ರೂಪಿಸಬೇಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಆಸ್ಕರ್ ರೇಸ್‌ನಲ್ಲಿ ಗೋಂಧಲ್; ಅಸಮಾಧಾನ ಹೊರಹಾಕಿದ ಖ್ಯಾತ ನಿರ್ದೇಶಕ
ಗೋಂಧಲ್
Edited By:

Updated on: Sep 24, 2026 | 7:59 AM

ಮುಖ್ಯಾಂಶಗಳು

  • ಆಸ್ಕರ್ ಅಂಗಳಕ್ಕೆ 'ಗೋಂಧಾಲ್' ಪ್ರವೇಶ
  • ನಾವು ತಪ್ಪು ಸಿನಿಮಾಗಳನ್ನೇ ಆಯ್ಕೆ ಮಾಡ್ತಿದ್ದೇವೆ
  • ಅನುರಾಗ್ ಕಶ್ಯಪ್ ತೀವ್ರ ಅಸಮಾಧಾನ

2027ರ ಆಸ್ಕರ್ ಪ್ರಶಸ್ತಿಗೆ ಭಾರತದ ಅಧಿಕೃತ ಸ್ಪರ್ಧಿಯಾಗಿ ‘ಗೋಂಧಲ್’ ಚಿತ್ರ ನಾಮನಿರ್ದೇಶನಗೊಂಡಿದೆ. 99ನೇ ಅಕಾಡೆಮಿ ಪ್ರಶಸ್ತಿಯ ‘ಅತ್ಯುತ್ತಮ ಅಂತರರಾಷ್ಟ್ರೀಯ ಚಲನಚಿತ್ರ’ ವಿಭಾಗಕ್ಕೆ ಆಯ್ಕೆಯಾಗಿರುವ ಏಕೈಕ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ ಇದಾಗಿದೆ. ಕಳೆದ ವರ್ಷ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಹಿನ್ನಡೆ ಅನುಭವಿಸಿತ್ತು. ಆದಾಗ್ಯೂ, ಈಗ ಜಾಗತಿಕ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸುವ ದೊಡ್ಡ ಅವಕಾಶವನ್ನು ಗಿಟ್ಟಿಸಿಕೊಂಡಿದೆ.

‘ಗೋಂಧಲ್’ ಆಸ್ಕರ್‌ಗೆ ಆಯ್ಕೆಯಾಗುತ್ತಿದ್ದಂತೆ ಪ್ರಸಿದ್ಧ ನಿರ್ದೇಶಕ ಅನುರಾಗ್ ಕಶ್ಯಪ್ ನೀಡಿದ ಹೇಳಿಕೆ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ. ಆಸ್ಕರ್ ಅಂಗಳದಲ್ಲಿ ಭಾರತ ಪದೇ ಪದೇ ವಿಫಲವಾಗಲು ನಾವು ತಪ್ಪು ಸಿನಿಮಾಗಳನ್ನು ಆಯ್ಕೆ ಮಾಡುವುದೇ ಮುಖ್ಯ ಕಾರಣ ಎಂದು ಅವರು ಪ್ರಶ್ನಿಸಿದ್ದಾರೆ. ಹಿಂದೆ ‘ದಿ ಲಂಚ್‌ಬಾಕ್ಸ್’ ಹಾಗೂ ಇತ್ತೀಚೆಗೆ ‘ಆಲ್ ವೀ ಇಮ್ಯಾಜಿನ್ ಆಸ್ ಲೈಟ್’ ನಂತಹ ಉತ್ತಮ ಸಿನಿಮಾಗಳನ್ನು ಕಳುಹಿಸುವ ಅವಕಾಶವಿದ್ದರೂ ಭಾರತೀಯ ಚಲನಚಿತ್ರ ಒಕ್ಕೂಟ ಅದನ್ನು ತಪ್ಪಿಸಿದೆ ಎಂದು ಕಶ್ಯಪ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬಾರಿ ಜಾಗತಿಕ ಮಟ್ಟದಲ್ಲಿ ತೀವ್ರ ಪೈಪೋಟಿ ಇದ್ದು, ಆಸ್ಕರ್ ತಲುಪಲು ಅಂತರರಾಷ್ಟ್ರೀಯ ಮಟ್ಟದ ಮಾನ್ಯತೆ ಅತ್ಯಗತ್ಯ ಎಂದು ಕಶ್ಯಪ್ ವಿವರಿಸಿದ್ದಾರೆ. ಸಿನಿಮಾವು ಭಾರತದ ಹೊರಗಿನ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿರಬೇಕು ಅಥವಾ ಅಮೆರಿಕನ್ ವಿತರಕರನ್ನು ಹೊಂದಿರಬೇಕು ಎಂಬ ನಿಯಮಗಳನ್ನು ಅವರು ನೆನಪಿಸಿದ್ದಾರೆ. ಆದರೆ, ತಾವು ಇನ್ನು ‘ಗೋಂಧಲ್’ ಚಿತ್ರವನ್ನು ನೋಡಿಲ್ಲವಾದ್ದರಿಂದ, ಈಗಲೇ ಚಿತ್ರದ ಭವಿಷ್ಯವನ್ನು ನಿರ್ಣಯಿಸುವುದು ಸೂಕ್ತವಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಅನುರಾಗ್ ಕಶ್ಯಪ್ ಅವರ ಈ ಹೇಳಿಕೆಗೆ ‘ಗೋಂಧಲ್’ ಚಿತ್ರದ ನಿರ್ದೇಶಕ ಸಂತೋಷ್ ದಾವ್ಖರ್ ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘವಾಗಿ ಸ್ಪಂದಿಸಿದ್ದಾರೆ. ‘ಏಪ್ರಿಲ್ 26ರಂದು ವಿಮಾನ ಪ್ರಯಾಣದ ವೇಳೆ ನಾನು ಅನುರಾಗ್ ಸರ್ ಅವರಿಗೆ ಈ ಚಿತ್ರದ ಬಗ್ಗೆ ತಿಳಿಸಿದ್ದೆ. ಅವರು ಸಿನಿಮಾ ನೋಡುವುದಾಗಿ ಹೇಳಿದ್ದರು. ಆ ಬಳಿಕ ಚಿತ್ರ ಎಲ್ಲೂ ಲಭ್ಯವಿರಲಿಲ್ಲ. ಸಿನಿಮಾ ನೋಡದೇ ಯಾವುದೇ ಅಭಿಪ್ರಾಯಕ್ಕೆ ಬರಬೇಡಿ’ ಎಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಆಸ್ಕರ್ ಪ್ರವೇಶಿಸಿದ  ಗೋಂಧಲ್  ಒಟಿಟಿಯಲ್ಲಿ ಲಭ್ಯವಿದೆಯೇ? ಇಲ್ಲಿದೆ ಮಾಹಿತಿ

ಮರಾಠಿ ಸಂಸ್ಕೃತಿಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಉದ್ದೇಶದಿಂದ ಈ ಸೈಕಲಾಜಿಕಲ್ ಥ್ರಿಲ್ಲರ್ ಅನ್ನು ದೊಡ್ಡ ಪರದೆಗಾಗಿ ನಿರ್ಮಿಸಲಾಗಿದೆ. ಚಿತ್ರರಂಗಕ್ಕೆ ಹೊಸಬರಾದ ನಾವು ದೇಶವನ್ನು ಪ್ರತಿನಿಧಿಸುವ ಜವಾಬ್ದಾರಿಯನ್ನು ಚೆನ್ನಾಗಿ ಅರಿತಿದ್ದೇವೆ ಮತ್ತು ದೇಶದ ಮಾನ ಎತ್ತಿಹಿಡಿಯುತ್ತೇವೆ ಎಂಬ ಭರವಸೆಯನ್ನು ಸಂತೋಷ್ ನೀಡಿದ್ದಾರೆ. ಶೀಘ್ರದಲ್ಲೇ ಚಿತ್ರವನ್ನು ಮರು-ಬಿಡುಗಡೆ ಮಾಡಲಾಗುತ್ತಿದ್ದು, ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದು ಬೆಂಬಲಿಸಬೇಕಾಗಿ ವಿನಂತಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:41 am, Thu, 24 September 26

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Loading...
Unable to load recommendations.
Follow Us