ಪಾಕಿಸ್ತಾನಿ ನಟ ಫವಾದ್​ ಖಾನ್​ಗೆ ಭಾರತದ ಸಿನಿಮಾದಲ್ಲಿ ಮತ್ತೆ ಸಿಕ್ಕಿದೆ ಅವಕಾಶ

|

Updated on: Jul 03, 2024 | 5:06 PM

ಭಾರತದಲ್ಲಿ ಕಲಾವಿದರಿಗೆ ಕೊರತೆ ಇದೆಯೇ? ಖಂಡಿತಾ ಇಲ್ಲ. ಹಾಗಿದ್ದರೂ ಕೂಡ ಪಾಕಿಸ್ತಾನಿ ಕಲಾವಿದರನ್ನು ಕರೆದು ಬಾಲಿವುಡ್​ ಸಿನಿಮಾದಲ್ಲಿ ಅವಕಾಶ ನೀಡಲಾಗುತ್ತಿದೆ. ಬ್ಯಾನ್​ ಕಾರಣದಿಂದ ಪಾಕ್​ ನಟ ಫವಾದ್​ ಖಾನ್​ ಅವರನ್ನು ಹಿಂದಿ ಸಿನಿಮಾಗಳಿಂದ ದೂರ ಇಡಲಾಗಿತ್ತು. ಆದರೆ ಈಗ ಮತ್ತೆ ಅವರಿಗೆ ಬಾಲಿವುಡ್​ ಮಂದಿ ಆಫರ್​ ನೀಡಿದ್ದಾರೆ ಎನ್ನಲಾಗಿದೆ. ಆ ಬಗ್ಗೆ ಸುದ್ದಿ ಹೊರಬಿದ್ದಿದೆ.

ಪಾಕಿಸ್ತಾನಿ ನಟ ಫವಾದ್​ ಖಾನ್​ಗೆ ಭಾರತದ ಸಿನಿಮಾದಲ್ಲಿ ಮತ್ತೆ ಸಿಕ್ಕಿದೆ ಅವಕಾಶ
ಪಾಕ್​ ನಟ ಫವಾದ್​ ಖಾನ್​
Follow us on

ಪಾಕಿಸ್ತಾನಿ ನಟ ಫವಾದ್​ ಖಾನ್​ (Fawad Khan) ಅವರು ಹಿಂದಿ ಸಿನಿಮಾ ಮತ್ತು ಪಾಕಿಸ್ತಾನದ ಸೀರಿಯಲ್​ಗಳಲ್ಲಿ ನಟಿಸಿ ಹೆಸರು ಮಾಡಿದ್ದಾರೆ. ಕಳೆದ ಒಂದಷ್ಟು ವರ್ಷಗಳಿಂದ ಅವರನ್ನು ಬ್ಯಾನ್​ ಮಾಡಲಾಗಿತ್ತು. ಅವರನ್ನು ಮಾತ್ರವಲ್ಲದೇ ಪಾಕಿಸ್ತಾನದ ಎಲ್ಲ ಕಲಾವಿದರು, ಗಾಯಕರು, ಸಂಗೀತಗಾರರನ್ನು ಬಾಲಿವುಡ್​ ಸಿನಿಮಾಗಳಿಂದ ಹೊರಗೆ ಇಡಲಾಗಿತ್ತು. ಆದರೆ ಈಗ ಫವಾದ್​ ಖಾನ್​ ಅವರಿಗೆ ಮತ್ತೆ ಬಾಲಿವುಡ್​ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಹೊಸ ಸಿನಿಮಾದಲ್ಲಿ ಫವಾದ್​ ಖಾನ್​ಗೆ ಜೋಡಿಯಾಗಿ ವಾಣಿ ಕಪೂರ್ (Vaani Kapoor) ನಟಿಸುತ್ತಾರೆ ಎಂದು ಸುದ್ದಿ ಆಗಿದೆ.

2016ರಲ್ಲಿ ಉರಿ ಭಯೋತ್ಪಾದಕ ದಾಳಿ ಬಳಿಕ ಪಾಕಿಸ್ತಾನದ ಜೊತೆ ಭಾರತದ ಸಂಬಂಧ ಸಂಪೂರ್ಣ ಹದಗೆಟ್ಟಿತು. ಆ ಘಟನೆ ಬಳಿಕ ಪಾಕಿಸ್ತಾನದ ಯಾರೊಂದಿಗೂ ಸಿನಿಮಾ, ಸೀರಿಯಲ್​, ಮ್ಯೂಸಿಕ್​ ವಿಡಿಯೋ ಇತ್ಯಾದಿ ಮನರಂಜನಾ ಕಾಂಟೆಂಟ್​ ಮಾಡಬಾರದು ಎಂದು ಭಾರತದ ನಿರ್ಮಾಪಕರು ನಿರ್ಧರಿಸಿದರು. ‘ಭಾರತೀಯ ಚಲನಚಿತ್ರ ನಿರ್ಮಾಪಕರ ಸಂಘ’ವು ಪಾಕ್​ ಮಂದಿಯ ಜೊತೆ ಕೆಲಸ ಮಾಡುವುದಿಲ್ಲ ಎಂದು ಘೋಷಣೆ ಹೊರಡಿಸಿತ್ತು.

ಆ ಬ್ಯಾನ್​ ಬಳಿಕ ಪಾಕಿಸ್ತಾನದ ಸೆಲೆಬ್ರಿಟಿಗಳಾದ ಫವಾದ್​ ಖಾನ್​, ಮಹೀರಾ ಖಾನ್​, ಅತೀಫ್​ ಅಸ್ಲಂ, ರಾಹತ್​ ಫತೇ ಅಲಿ ಖಾನ್​ ಮುಂತಾದವರು ಭಾರತದ ಸಿನಿಮಾಗಳಿಂದ ಹೊರಗೆ ಉಳಿದರು. ಆದರೆ ಕಳೆದ ವರ್ಷ ನವೆಂಬರ್​ನಲ್ಲಿ ಈ ಬ್ಯಾನ್​ ಸೂಕ್ತವಲ್ಲ ಎಂದು ಭಾರತದ ಸುಪ್ರೀಂ ಕೋರ್ಟ್​ ತೀರ್ಪು ನೀಡಿತ್ತು. ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ಕಲಾವಿದರು ಭಾರತದ ಸಿನಿಮಾಗಳಲ್ಲಿ ಮತ್ತೆ ಕೆಲಸ ಮಾಡಲು ಆರಂಭಿಸಿದ್ದಾರೆ.

ಇದನ್ನೂ ಓದಿ: ಶಾರುಖ್​, ಆಮಿರ್​, ಸಲ್ಲು ಬಗ್ಗೆ ಪಾಕ್​ ನಟಿಯ ಹೇಳಿಕೆ ವೈರಲ್​; ಏನಿದೆ ಈ ವಿಡಿಯೋದಲ್ಲಿ?

ಸದ್ಯಕ್ಕೆ ಫವಾದ್​ ಖಾನ್​ ಒಪ್ಪಿಕೊಂಡಿರುವ ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ಹೊರಬಿದ್ದಿಲ್ಲ. ಈ ಚಿತ್ರಕ್ಕೆ ವಾಣಿ ಕಪೂರ್​ ನಾಯಕಿ ಎಂಬುದಷ್ಟೇ ಸುದ್ದಿ ಆಗಿದೆ. ಸದ್ಯಕ್ಕೆ ಈ ಸಿನಿಮಾದ ಪ್ರೀ-ಪ್ರೊಡಕ್ಷನ್​ ಕೆಲಸಗಳು ನಡೆಯುತ್ತಿವೆ. ಶೀಘ್ರವೇ ಲಂಡನ್​ನಲ್ಲಿ ಈ ಸಿನಿಮಾದ ಚಿತ್ರೀಕರಣ ಆರಂಭ ಆಗಲಿದೆ. 2014ರಲ್ಲಿ ‘ಖೂಬ್​ಸೂರತ್​’ ಸಿನಿಮಾ ಮೂಲಕ ಫವಾದ್​ ಖಾನ್ ಅವರು ಬಾಲಿವುಡ್​ಗೆ ಕಾಲಿಟ್ಟಿದ್ದರು. ಬಳಿಕ ‘ಕಪೂರ್​ ಆ್ಯಂಡ್​ ಸನ್ಸ್​’, ‘ಏ ದಿಲ್​ ಹೈ ಮುಷ್ಕಿಲ್​’ ಚಿತ್ರಗಳಲ್ಲಿ ಅವರು ನಟಿಸಿದರು. ಬ್ಯಾನ್​ ಕಾರಣದಿಂದ ಕಳೆದ 8 ವರ್ಷಗಳಿಂದ ಅವರಿಗೆ ಬಾಲಿವುಡ್​ನಲ್ಲಿ ಯಾವುದೇ ಅವಕಾಶ ಸಿಕ್ಕಿರಲಿಲ್ಲ. ಆದರೆ ಈಗ ಮತ್ತೆ ಹೊಸ ಸಿನಿಮಾಗೆ ಅವರು ಸಹಿ ಮಾಡಿದ್ದಾರೆ ಎಂದು ‘ಫಿಲ್ಮ್​ಫೇರ್​’ ವರದಿ ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.