
ಬಾಲಿವುಡ್ ಚಿತ್ರರಂಗದಲ್ಲಿ ಇಂದು ಪಂಕಜ್ ತ್ರಿಪಾಠಿ ಅತ್ಯಂತ ಗೌರವಾನ್ವಿತ ಮತ್ತು ಅದ್ಭುತ ನಟರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಆದರೆ, ಈ ಯಶಸ್ಸಿನ ಹಿಂದಿರುವುದು ಸುದೀರ್ಘ ವರ್ಷಗಳ ಕಠಿಣ ಹೋರಾಟ ಮತ್ತು ಅವಮಾನಗಳ ಕಥೆ. ತಮ್ಮ ನಟನಾ ಕನಸನ್ನು ಹೊತ್ತು 2001ರಲ್ಲಿ ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ (NSD) ಸೇರಿದಾಗ ತಾವು ಎದುರಿಸಿದ ಸಾಂಸ್ಕೃತಿಕ ಆಘಾತ ಮತ್ತು ಭಾಷಾ ತಾರತಮ್ಯದ ಬಗ್ಗೆ ಪಂಕಜ್ ಇತ್ತೀಚಿನ ಸಂದರ್ಶನವೊಂದರಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ.
ಯೂಟ್ಯೂಬ್ ಚಾನೆಲ್ ‘ಯುವಾ’ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ಪಂಕಜ್, ‘2001ರಲ್ಲಿ ನಾನು ದೆಹಲಿಗೆ ಬಂದಾಗ ನನಗೆ ದೊಡ್ಡ ಕಲ್ಚರಲ್ ಶಾಕ್ ಎದುರಾಗಿತ್ತು. ಅಲ್ಲಿ ಮೊದಲ ಬಾರಿಗೆ ಹುಡುಗಿಯರು ಸಿಗರೇಟ್ ಸೇದುವುದನ್ನು ನೋಡಿದಾಗ, ‘ಇವರು ಎಂತಹ ಹುಡುಗಿಯರು?’ ಎಂದು ಆಶ್ಚರ್ಯಪಟ್ಟುಕೊಂಡಿದ್ದೆ. ಆದರೆ, ಒಂದು 15 ದಿನಗಳ ನಂತರ ನನ್ನ ಆಲೋಚನಾ ಶೈಲಿ ತಪ್ಪಾಗಿತ್ತು ಮತ್ತು ಯಾರನ್ನೂ ಹಾಗೆ ಅಳೆಯಬಾರದು ಎಂಬ ಸತ್ಯ ನನಗೆ ಅರ್ಥವಾಯಿತು’ ಎಂದು ತಮ್ಮ ಹಳೆಯ ನೆನಪನ್ನು ಹಂಚಿಕೊಂಡಿದ್ದಾರೆ.
ಹಿಂದಿ ಮಾಧ್ಯಮದ ಹಿನ್ನೆಲೆಯಿಂದ ಬಂದಿದ್ದ ಪಂಕಜ್ ಅವರಿಗೆ ಭಾಷೆಯೇ ದೊಡ್ಡ ಸವಾಲಾಗಿತ್ತು. ‘ನನ್ನ ಭಾಷೆಯನ್ನು ನೋಡಿ ಜನರು ತಕ್ಷಣವೇ ನನ್ನನ್ನು ಜಡ್ಜ್ ಮಾಡುತ್ತಿದ್ದರು. ಒಬ್ಬ ವ್ಯಕ್ತಿಗೆ ಸರಾಗವಾಗಿ ಇಂಗ್ಲಿಷ್ ಮಾತನಾಡಲು ಬರುವುದಿಲ್ಲ ಎಂದರೆ, ಅವನು ತುಂಬಾ ಬಡ ಹಿನ್ನೆಲೆಯಿಂದ ಬಂದಿದ್ದಾನೆ ಅಥವಾ ಅವನಿಗೆ ಜ್ಞಾನದ ಕೊರತೆ ಇದೆ ಎಂದೇ ಜನರು ಭಾವಿಸುತ್ತಾರೆ. ಇಂದಿಗೂ ಜನರು ನಿಮ್ಮ ಸಾಮರ್ಥ್ಯವನ್ನು ನೀವು ಮಾತನಾಡುವ ಭಾಷೆಯ ಆಧಾರದ ಮೇಲೆ ಅಳೆಯುತ್ತಾರೆ. ಆದರೆ ವಾಸ್ತವದಲ್ಲಿ, ಭಾಷೆಗೂ ಮತ್ತು ಒಬ್ಬರ ಸಾಮರ್ಥ್ಯಕ್ಕೂ ಯಾವುದೇ ಸಂಬಂಧವಿರುವುದಿಲ್ಲ,’ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಇಂತಹ ಅನುಭವಗಳು ಯಾರನ್ನಾದರೂ ಕೀಳರಿಮೆಗೆ ತಳ್ಳಬಹುದು. ಆದರೆ ಪಂಕಜ್ ಮಾತ್ರ ಇದಕ್ಕೆ ಧೃತಿಗೆಡಲಿಲ್ಲ. ‘ಇಂತಹ ಪರಿಸ್ಥಿತಿಯನ್ನು ಎದುರಿಸಲು ಎರಡೇ ದಾರಿ ಇರುತ್ತದೆ. ಒಂದೋ ನೀವು ಕೀಳರಿಮೆಗೆ ಒಳಗಾಗಬೇಕು, ಇಲ್ಲವೇ ಅದನ್ನೆಲ್ಲ ಮೀರಿ ಬೆಳೆಯಬೇಕು. ಅದೃಷ್ಟವಶಾತ್ ನಾನು ಎಂದಿಗೂ ಕೀಳರಿಮೆಯ ಸುಳಿಗೆ ಸಿಲುಕಲಿಲ್ಲ ಮತ್ತು ನನ್ನ ಅಸ್ತಿತ್ವದ ಬಗ್ಗೆ ನನಗೆ ಗೊಂದಲವಿರಲಿಲ್ಲ. ಅದೇ ನನ್ನನ್ನು ಆ ಕಷ್ಟದ ದಿನಗಳಲ್ಲಿ ಕಾಪಾಡಿತು’ ಎಂದಿದ್ದಾರೆ.
ಇದನ್ನೂ ಓದಿ: ‘ನಿನಗೆ ಸರಿಯಾಗಿ ಏಟು ಬೀಳುತ್ತೆ’; ಪಂಕಜ್ ತ್ರಿಪಾಠಿಗೆ ನಾನಾ ಪಾಟೇಕರ್ ಬೆದರಿಕೆವೊಡ್ಡಿದ್ದೇಕೆ?
ಸುದೀರ್ಘ ಹೋರಾಟದ ನಂತರ 2012ರ ‘ಗ್ಯಾಂಗ್ಸ್ ಆಫ್ ವಾಸೇಪುರ್’ ಸಿನಿಮಾ ಪಂಕಜ್ ತ್ರಿಪಾಠಿ ಅವರ ವೃತ್ತಿಜೀವನಕ್ಕೆ ದೊಡ್ಡ ಬ್ರೇಕ್ ನೀಡಿತು. ಆದರೆ ಮುಂಬೈನಲ್ಲಿ ಅವಕಾಶಗಳಿಗಾಗಿ ಅಲೆಯುತ್ತಿದ್ದ ದಿನಗಳಲ್ಲಿ ಇವರ ಇಡೀ ಕುಟುಂಬವನ್ನು ಮುನ್ನಡೆಸಿದ್ದು ಅವರ ಪತ್ನಿ ಮೃದುಲಾ. ಪಂಕಜ್ ಅವರ ಕನಸಿಗಾಗಿ ಮೃದುಲಾ ಅವರೊಬ್ಬರೇ ದುಡಿದು ಮನೆ ನಡೆಸುತ್ತಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.