ಗಾಯಕ ಪಂಕಜ್​ ಉಧಾಸ್​ ನಿಧನ; ಅಂತ್ಯಕ್ರಿಯೆಯ ಸ್ಥಳ, ಸಮಯದ ಬಗ್ಗೆ ಇಲ್ಲಿದೆ ಮಾಹಿತಿ..

|

Updated on: Feb 27, 2024 | 11:24 AM

ಅನಾರೋಗ್ಯದಿಂದ ನಿಧನರಾದ ಗಝಲ್​ ಗಾಯಕ ಪಂಕಜ್​ ಉಧಾಸ್​ ಅವರಿಗೆ ಅನೇಕ ಗಣ್ಯರು ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ಮುಂಬೈನ ವರ್ಲಿಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಇಂದು (ಫೆ.27) ಮಧ್ಯಾಹ್ನ 3 ಗಂಟೆಯಿಂದ ಸಂಜೆ 5ರ ಒಳಗೆ ಪಂಕಜ್​ ಉಧಾಸ್​ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದವರು ಮಾಹಿತಿ ನೀಡಿದ್ದಾರೆ.

ಗಾಯಕ ಪಂಕಜ್​ ಉಧಾಸ್​ ನಿಧನ; ಅಂತ್ಯಕ್ರಿಯೆಯ ಸ್ಥಳ, ಸಮಯದ ಬಗ್ಗೆ ಇಲ್ಲಿದೆ ಮಾಹಿತಿ..
ಪಂಕಜ್​ ಉಧಾಸ್​
Follow us on

ಖ್ಯಾತ ಗಾಯಕ ಪಂಕಜ್​ ಉಧಾಸ್​ (Pankaj Udhas) ಅವರು 73ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಕ್ಯಾನ್ಸರ್​ನಿಂದ ಬಳಲುತ್ತಿದ್ದ ಅವರು ಹಲವು ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿ ಆಗದೇ ಸೋಮವಾರ (ಫೆ.26) ಬೆಳಿಗ್ಗೆ 11 ಗಂಟೆ ಸುಮಾರಿಗೆ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಅವರು ಇಹಲೋಕ ತ್ಯಜಿಸಿದರು. ಅವರ ನಿಧನಕ್ಕೆ (Pankaj Udhas Death) ಪ್ರಧಾನಿ ನರೇಂದ್ರ ಮೋದಿ, ಗಾಯಕ ಸೋನು ನಿಗಮ್​ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಇಂದು (ಫೆಬ್ರವರಿ 27) ಪಂಕಜ್​ ಉಧಾಸ್​ ಅವರ ಅಂತ್ಯಕ್ರಿಯೆ (Pankaj Udhas Funeral) ನಡೆಯಲಿದೆ. ಸಮಯ ಮತ್ತು ಸ್ಥಳದ ಬಗ್ಗೆ ಅವರ ಕುಟುಂಬದವರು ಮಾಹಿತಿ ಹಂಚಿಕೊಂಡಿದ್ದಾರೆ.

ಪಂಕಜ್ ಉಧಾಸ್​ ಅವರ ಮಗಳು ನಯಾಬ್​ ಉಧಾಸ್​ ಅವರು ತಂದೆಯ ಅಂತ್ಯಕ್ರಿಯೆ ಕುರಿತು ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದಾರೆ. ‘ಪದ್ಮಶ್ರೀ ಪಂಕಜ್​ ಉಧಾಸ್ ಅವರು ದೀರ್ಘಕಾಲದ ಅನಾರೋಗ್ಯದಿಂದ ಫೆಬ್ರವರಿ 26ರಂದು ನಿಧನರಾದರು ಎಂಬ ಸುದ್ದಿಯನ್ನು ತಿಳಿಸಲು ನೋವಾಗುತ್ತಿದೆ. ಮುಂಬೈನ ವರ್ಲಿಯಲ್ಲಿ ಇರುವ ಹಿಂದೂ ರುದ್ರಭೂಮಿಯಲ್ಲಿ ಫೆಬ್ರವರಿ 27ರಂದು ಮಧ್ಯಾಹ್ನ 3ರಿಂದ ಸಂಜೆ 5 ಗಂಟೆ ಒಳಗೆ ಅಂತ್ಯಕ್ರಿಯೆ ನಡೆಯಲಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ಪಂಕಜ್​ ಉಧಾಸ್​ ಅವರು 80ರ ದಶಕದಲ್ಲಿ ಗಝಲ್​ ಗಾಯನದಿಂದ ಬಹಳ ಜನಪ್ರಿಯತೆ ಗಳಿಸಿದ್ದರು. ನಂತರ ಅವರು ಬಾಲಿವುಡ್​ ಸಿನಿಮಾಗಳಲ್ಲಿ ಹಾಡಲು ಆರಂಭಿಸಿದರು. ಸಂಜಯ್​ ದತ್​ ಅಭಿನಯದ ‘ನಾಮ್​’ ಚಿತ್ರದಲ್ಲಿನ ‘ಚಿಟ್ಟಿ ಆಯಿ ಹೈ..’ ಗೀತೆಗೆ ಧ್ವನಿ ನೀಡುವ ಮೂಲಕ ಪಂಕಜ್​ ಉಧಾಸ್​ ಮನೆಮಾತಾದರು. ಕನ್ನಡದ ‘ಸ್ಪರ್ಶ’ ಸಿನಿಮಾದ ‘ಚಂದಕಿಂತ ಚಂದ ನೀನೇ ಸುಂದರ..’ ಹಾಗೂ ‘ಬರೆಯದ ಮೌನದ ಕವಿತೆ ಹಾಡಾಯಿತು..’ ಗೀತೆಯನ್ನು ಪಂಕಜ್​ ಉಧಾಸ್​ ಹಾಡಿದ್ದರು.

ಸೋಮವಾರ ಪಂಕಜ್ ಉಧಾಸ್​ ಅವರ ನಿಧನದ ಸುದ್ದಿ ತಿಳಿದು ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದರು. ‘ಪಂಕಜ್​ ಉಧಾಸ್​ ಅವರ ಅಗಲಿಕೆಯು ನೋವು ತಂದಿದೆ. ಭಾವನೆಗಳು ತುಂಬಿದ ಅವರ ಗಾಯನವು ಕೇಳುಗರ ಮನಸ್ಸುಗಳನ್ನು ಮುಟ್ಟುತ್ತಿತ್ತು. ಭಾರತೀಯ ಸಂಗೀತ ಲೋಕದಲ್ಲಿ ಅವರು ದಾರಿದೀಪವಾಗಿದ್ದರು. ಎಲ್ಲ ತಲೆಮಾರಿನ ಕೇಳುಗರನ್ನು ಅವರ ಸುಮಧುರ ಗಾಯನ ತಲುಪಿದೆ. ಅವರ ಜೊತೆಗಿನ ಮಾತುಕಥೆಗಳನ್ನು ನಾನು ಸ್ಮರಿಸುತ್ತೇನೆ’ ಎಂದು ಮೋದಿ ಟ್ವೀಟ್​ ಮಾಡಿದ್ದಾರೆ.

ದಿಗ್ಗಜ ರೇಡಿಯೋ ನಿರೂಪಕ ಅಮೀನ್​ ಸಯಾನಿ ನಿಧನ; ‘ಬಿನಾಕಾ ಗೀತ್​ ಮಾಲಾ’ ಹಿಂದಿನ ಧ್ವನಿ ಇನ್ನಿಲ್ಲ

‘ನನ್ನ ಬಾಲ್ಯದ ಬಹುದೊಡ್ಡ ಭಾಗವಾಗಿದ್ದವರನ್ನು ಇಂದು ಕಳೆದುಕೊಂಡೆ. ಶ್ರೀ ಪಂಕಜ್​ ಉಧಾಸ್​ ಅವರನ್ನು ನಾನು ಎಂದೆಂದಿಗೂ ಮಿಸ್​ ಮಾಡಿಕೊಳ್ಳುತ್ತೇನೆ. ನೀವು ಇಲ್ಲ ಎಂಬುದನ್ನು ತಿಳಿದು ನಮ್ಮ ಹೃದಯ ಕಂಬನಿ ಮಿಡಿಯುತ್ತಿದೆ. ಓಂ ಶಾಂತಿ’ ಎಂದು ಸೋನು ನಿಗಮ್​ ಅವರು ಇನ್​ಸ್ಟಾಗ್ರಾಮ್​ನಲ್ಲಿ ಸಂತಾಪ ಸೂಚಿಸಿದ್ದಾರೆ. ಅನೇಕ ಸೆಲೆಬ್ರಿಟಿಗಳು, ಆಪ್ತರು ಹಾಗು ಅಭಿಮಾನಿಗಳು ಪಂಕಜ್​ ಉಧಾಸ್​ ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.