ಬಾಲಿವುಡ್ನ (Bollywood) ಪ್ರತಿ ಚಿತ್ರಗಳು ಸತತ ಸೋಲು ಕಾಣುತ್ತಿವೆ. ಇದಕ್ಕೆ ಕಾರಣ ಏನು ಎಂಬುದನ್ನು ತಿಳಿದುಕೊಳ್ಳಲು ಬಾಲಿವುಡ್ ಮಂದಿ ಹರಸಾಹಸ ಪಡುತ್ತಿದ್ದಾರೆ. ಆಮಿರ್ ಖಾನ್ (Aamir Khan) ಚಿತ್ರ ‘ಲಾಲ್ ಸಿಂಗ್ ಚಡ್ಡಾ’ಗೆ ಬೈಕಾಟ್ ಬಿಸಿ ತಟ್ಟಿದರೆ, ಅಕ್ಷಯ್ ಕುಮಾರ್ ನಟನೆಯ ‘ರಕ್ಷಾ ಬಂಧನ್’ ಸಿನಿಮಾ ಮೊದಲ ದಿನ ಮೆಚ್ಚುಗೆ ಪಡೆದಕೊಂಡ ಹೊರತಾಗಿಯೂ ಐದು ದಿನಕ್ಕೆ ಕೇವಲ 28 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಕುರಿತು ನಿರ್ದೇಶಕ ಅನುರಾಗ್ ಕಶ್ಯಪ್ ಮಾತನಾಡಿದ್ದಾರೆ. ಜನರ ಬಳಿ ದುಡ್ಡಿಲ್ಲ ಎಂಬ ಮಾತನ್ನು ಅವರು ಒತ್ತಿ ಹೇಳಿದ್ದಾರೆ.
ಅನುರಾಗ್ ಕಶ್ಯಪ್ ನಿರ್ದೇಶನ, ನಿರ್ಮಾಣ ಮಾಡಿರುವ ‘ದೋಬಾರಾ’ ಸಿನಿಮಾ ಈ ವಾರ ರಿಲೀಸ್ ಆಗುತ್ತಿದೆ. ಈ ಚಿತ್ರದ ಪ್ರಚಾರದಲ್ಲಿ ಅವರು ತೊಡಗಿಕೊಂಡಿದ್ದಾರೆ. ಈ ವೇಳೆ ಬಾಲಿವುಡ್ ಸಿನಿಮಾಗಳು ಏಕೆ ಸೋಲುತ್ತಿವೆ ಎಂದು ಅವರಿಗೆ ಪ್ರಶ್ನೆ ಮಾಡಲಾಯಿತು. ಇದಕ್ಕೆ ಉತ್ತರಿಸುವಾಗ ಅವರು ತಮ್ಮದೇ ವಾದ ಮುಂದಿಟ್ಟಿದ್ದಾರೆ. ಬಾಲಿವುಡ್ ಮಾತ್ರವಲ್ಲ ದಕ್ಷಿಣ ಭಾರತದ ಸಿನಿಮಾಗಳೂ ಯಶಸ್ಸು ಕಾಣುತ್ತಿಲ್ಲ ಎಂದಿದ್ದಾರೆ ಅವರು.
‘ದಕ್ಷಿಣದ ಸಿನಿಮಾಗಳು ಒಳ್ಳೆಯ ಕಲೆಕ್ಷನ್ ಮಾಡುತ್ತಿವೆ ಎಂದು ಹೇಗೆ ಹೇಳುತ್ತೀರಿ? ಕನ್ನಡ ಹಾಗೂ ತಮಿಳಿನಲ್ಲಿ ತಲಾ ಒಂದು ಚಿತ್ರ, ಹಿಂದಿ ಹಾಗೂ ತೆಲುಗಿನಲ್ಲಿ ತಲಾ ಎರಡು ಚಿತ್ರ ಗೆದ್ದಿವೆ. ಕಳೆದ ಕೆಲವು ವಾರಗಳಲ್ಲಿ ಬಿಡುಗಡೆಯಾದ ತಮಿಳು, ತೆಲುಗು ಮತ್ತು ಕನ್ನಡ ಚಿತ್ರಗಳ ಹೆಸರನ್ನು ಹೇಳಲು ಸಾಧ್ಯವೇ? ಅದು ಆಗುವುದಿಲ್ಲ. ಅದಕ್ಕೆ ಕಾರಣ ಅಲ್ಲಿಯೂ ಚಿತ್ರಗಳು ಒಳ್ಳೆಯ ಗಳಿಕೆ ಮಾಡುತ್ತಿಲ್ಲ’ ಎಂದಿದ್ದಾರೆ ಅನುರಾಗ್ ಕಶ್ಯಪ್.
‘ಜನರ ಬಳಿ ಹಣ ಇಲ್ಲ. ಜನರು ಪನೀರ್ ಹಾಗೂ ಇತರ ಆಹಾರ ಪದಾರ್ಥಗಳ ಮೇಲೆ ಜಿಎಸ್ಟಿ ಪಾವತಿ ಮಾಡುತ್ತಿದ್ದಾರೆ. ಬೈಕಾಟ್ ವಿಚಾರ ನಿಜವಾದ ಸಮಸ್ಯೆಯಿಂದ ವಿಚಲಿತರಾಗುವಂತೆ ಮಾಡುತ್ತದೆ. ಈಗಿನ ದಿನಗಳಲ್ಲಿ ಸಿನಿಮಾ ಚೆನ್ನಾಗಿದೆ ಎಂಬ ಖಚಿತತೆ ಇದ್ದರೆ ಮಾತ್ರ ಜನರು ಥಿಯೇಟರ್ಗೆ ಹೋಗುತ್ತಾರೆ. ಇಲ್ಲದಿದ್ದರೆ ಬಹುನಿರೀಕ್ಷಿತ ಸಿನಿಮಾ ಎಂದಾಗ ಮಾತ್ರ ಅದನ್ನು ನೋಡ ಬಯಸುತ್ತಾರೆ. ಉದಾಹರಣೆಗೆ ‘ಆರ್‌ಆರ್‌ಆರ್’, ‘ಬಾಹುಬಲಿ’ ಅಂತಹ ಚಿತ್ರಗಳನ್ನು ಜನರು ನೋಡ ಬಯಸಿದ್ದರು. ‘ಕೆಜಿಎಫ್’ ತೆರೆಕಂಡ ಬಳಿಕ ಕೆಜಿಎಫ್ನ ಎರಡನೇ ಚಾಪ್ಟರ್ಗಾಗಿ ಪ್ರೇಕ್ಷಕರು ಕಾದಿದ್ದರು’ ಎಂದಿದ್ದಾರೆ ಅನುರಾಗ್ ಕಶ್ಯಪ್.
ಇದನ್ನೂ ಓದಿ: ‘ತಾಪ್ಸಿ ಪನ್ನುಗಿಂತ ನನ್ನ ಸ್ತ* ದೊಡ್ಡದಿದೆ’; ವೈರಲ್ ಆಯ್ತು ಸ್ಟಾರ್ ಡೈರೆಕ್ಟರ್ ಹೇಳಿಕೆ
‘ಭೂಲ್ ಭುಲಯ್ಯಾ ಚಿತ್ರ ಹಿಟ್ ಆಗಿತ್ತು. ಈ ಕಾರಣಕ್ಕೆ ಸೀಕ್ವೆಲ್ ನೋಡಲು ಜನರು ಕಾದಿದ್ದರು. ಸಂಜಯ್ ಲೀಲಾ ಬನ್ಸಾಲಿ ಅವರ ನಿರ್ದೇಶನದ ‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರಕ್ಕೆ ಒಳ್ಳೆಯ ಟಾಕ್ ಶುರುವಾಯಿತು. ಹೀಗಾಗಿ, ಪ್ರೇಕ್ಷಕರು ಸಿನಿಮಾ ವೀಕ್ಷಿಸಿದರು. ಜನರ ಬಳಿ ಹೆಚ್ಚು ಹಣವಿಲ್ಲ. ನಮ್ಮ ದೇಶದ ಆರ್ಥಿಕ ಕುಸಿತದ ಬಗ್ಗೆ ನಾವು ಮಾತನಾಡಬೇಕಿದೆ. ಆದರೆ, ನಾವು ಇವುಗಳ ಬಗ್ಗೆ ಚರ್ಚೆ ಮಾಡುತ್ತಿಲ್ಲ. ಬದಲಿಗೆ, ಬಾಲಿವುಡ್ ಹಾಗೂ ಕ್ರಿಕೆಟ್‌ಗೆ ಅಂಟಿಕೊಂಡಿದ್ದೇವೆ’ ಎಂದಿದ್ದಾರೆ ಅನುರಾಗ್ ಕಶ್ಯಪ್.
Published On - 10:31 pm, Tue, 16 August 22