ಸಿನಿಮಾಗಳನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವ ಸಂಪ್ರದಾಯ ಭಾರತಕ್ಕೆ ಬಹಳ ಹಳೆಯದ್ದು, ಆದರೆ ಇತ್ತೀಚೆಗಿನ ಕೆಲ ವರ್ಷಗಳಲ್ಲಿ ಈ ದುಶ್ಪದ್ಧತಿ ತುಸು ಅತಿಯಾಗಿದೆ. ಒಂದು ಐಡಿಯಾಲಜಿಯನ್ನು ಪ್ರಚಾರ ಮಾಡುವ ಭರದಲ್ಲಿ ಸುಳ್ಳುಗಳನ್ನು, ದ್ವೇಷಗಳನ್ನೂ ಹರಡುವ ಪ್ರಕ್ರಿಯೆಯೂ ನಡೆಯುತ್ತಿದೆ. ಬಲ ಮತ್ತು ಎಡ ಎರಡೂ ಪಂಥಗಳವರೂ ಜಿದ್ದಿಗೆ ಬಿದ್ಧಂತೆ ಸಿನಿಮಾಗಳ ಮೂಲಕ ತಮ್ಮ-ತಮ್ಮ ಐಡಿಯಾಲಜಿಗಳ ಪ್ರಚಾರವನ್ನು ಜೋರಾಗಿಯೇ ನಡೆಸಿವೆ. ಅದೇ ಸಾಲಿಗೆ ಸೇರುವ ‘ಜೆಎನ್ಯು’ ಹೆಸರಿನ ಸಿನಿಮಾ ಈಗಾಗಲೇ ಬಿಡುಗಡೆ ಆಗಿದೆ. ಆದರೆ ನಟರೊಬ್ಬರು ಈ ಸಿನಿಮಾದಲ್ಲಿ ನಟಿಸಿದಕ್ಕೆ ಬಹಿರಂಗವಾಗಿ ಕ್ಷಮೆ ಕೋರಿದ್ದಾರೆ.
ದೆಹಲಿಯ ಜವಾಹರ್ಲಾಲ್ ನೆಹರು ಯೂನಿವರ್ಸಿಟಿ ಕುರಿತಾದ ಸಿನಿಮಾ ಇದಾಗಿದ್ದು, ಸಿನಿಮಾಕ್ಕೆ ‘ಜಹಾಂಗೀರ್ ನ್ಯಾಷನಲ್ ಯೂನಿವರ್ಸಿಟಿ’ ಎಂದು ಹೆಸರಿಡಲಾಗಿತ್ತು. ಸಿನಿಮಾದಲ್ಲಿ ಜೆಎನ್ಯು ನಲ್ಲಿನ ಎಡಪಂಥೀಯ ವಿದ್ಯಾರ್ಥಿ ಸಂಘಟನೆಯನ್ನು ವಿಲನ್ ರೀತಿ ತೋರಿಸಿ, ಬಿಜೆಪಿಯ ಅಂಗಸಂಸ್ಥೆ ಎಬಿವಿಪಿಯ ವಿದ್ಯಾರ್ಥಿಗಳನ್ನು ನಾಯಕರನ್ನಾಗಿ ತೋರಿಸಲಾಗಿತ್ತು. ಈ ಸಿನಿಮಾದಲ್ಲಿ ಜನಪ್ರಿಯ ನಟ ಪಿಯೂಷ್ ಮಿಶ್ರಾ ಸಹ ನಟಿಸಿದ್ದರು. ಆದರೆ ಈಗ ಪ್ರೊಪಾಗಾಂಡಾ ಸಿನಿಮಾದಲ್ಲಿ ನಟಿಸಿದ್ದಕ್ಕೆ ಬೇಷರತ್ ಕ್ಷಮೆ ಯಾಚಿಸಿದ್ದಾರೆ.
‘ಆ ಸಿನಿಮಾದಲ್ಲಿ ನಟಿಸಿದ್ದಕ್ಕೆ ನಾನು ಬೇಷರತ್ ಕ್ಷಮೆಯಾಚಿಸುತ್ತೇನೆ. ನನ್ನ ಮನಸ್ಸಿನಲ್ಲಿ ಲಿಬರಲ್ ಬಗ್ಗೆ ಇದ್ದ ಸಿಟ್ಟಿನಿಂದ ನಾನು ಆ ಸಿನಿಮಾದಲ್ಲಿ ನಟಿಸಿಬಿಟ್ಟೆ, ನನ್ನನ್ನು ಕ್ಷಮಿಸಿ ಎಂದಿದ್ದಾರೆ. ‘ನಾವೆಲ್ಲರೂ ತಪ್ಪುಗಳನ್ನು ಮಾಡುತ್ತೇವೆ, ನಾವು ಯಾರು ಅಥವಾ ಎಷ್ಟು ವಯಸ್ಸಾಗಿದ್ದೇವೆ ಎಂಬುದು ಮುಖ್ಯವಲ್ಲ. ಅದು ಮೂರ್ಖತನದ ಕ್ಷಣ, ಮತ್ತು ನಾನು ಮೂರ್ಖತನದ ನಿರ್ಧಾರವನ್ನು ಮಾಡಿದೆ. ನಾನು ಸ್ಕ್ರಿಪ್ಟ್ ಓದದೇ ಒಪ್ಪಿಕೊಂಡ ಮೊದಲ ಸಿನಿಮಾ ಅದು. ಆ ಸಿನಿಮಾವನ್ನು ನನ್ನ ಹೆಸರು ಹೇಳಿಕೊಂಡು ಪ್ರಚಾರ ಮಾಡಲು ಅವರು ಯತ್ನಿಸಿದರು. ಆದರೆ ಸಿನಿಮಾದಲ್ಲಿ ನನ್ನದು ಇರುವುದು ಒಂದೇ ದೃಶ್ಯ. ನನ್ನಲ್ಲಿ ಇದ್ದ ಅಸಮಾಧಾನ ನನ್ನನ್ನು ಕಹಿ ವ್ಯಕ್ತಿಯನ್ನಾಗಿ ಮಾಡುತ್ತದೆ ಎಂಬುದನ್ನು ನಾನು ಅರಿತುಕೊಂಡೆ’ ಎಂದಿದ್ದಾರೆ ಮಿಶ್ರಾ.
ಇದನ್ನೂ ಓದಿ:ಬರ್ತಿದೆ ‘ಜೆಎನ್ಯು’ ಸಿನಿಮಾ; ಶಿಕ್ಷಣ ಸಂಸ್ಥೆ ಬಗ್ಗೆ ಇರಲಿದೆಯೇ ಕಥೆ?
ಮುಂದುವರೆದು ಮಾತನಾಡಿರುವ ಪಿಯೂಶ್ ಮಿಶ್ರ, ‘ಈಗಲೂ ನನಗೆ ಎಡ ಪಂಥೀಯರೊಂದಿಗೆ ಭಿನ್ನಾಭಿಪ್ರಾಯ ಇದೆ. ನನಗೆ ಅವರು ಇಷ್ಟವಾಗುವುದಿಲ್ಲ. ಅವರು ನನ್ನೊಂದಿಗೆ ಏನು ಮಾಡಿದರು ಎಂಬುದು ನನಗೆ ನೆನಪಿದೆ. ಆದರೂ ಸಹ ನಾನು ಆ ಸಿನಿಮಾದಲ್ಲಿ ನಟಿಸಬಾರದಿತ್ತು’ ಎಂದಿದ್ದಾರೆ. ಸಿನಿಮಾಕ್ಕೆ ಬರುವ ಮುಂಚೆ ಪಿಯೂಶ್ ಮಿಶ್ರಾ ಕಮ್ಯುನಿಸ್ಟ್ ವಿಚಾರಧಾರೆಯ ಅನುಯಾಯಿಗಳಾಗಿದ್ದರು. ಆದರೆ 2003 ರಲ್ಲಿ ಅದನ್ನು ಬಿಟ್ಟು ಕ್ಯಾಪಿಟಲಿಸ್ಟ್ ಆದರು.
‘ಜೆಎನ್ಯು’ ಸಿನಿಮಾನಲ್ಲಿ ಊರ್ವಶಿ ರೌಟೆಲಾ, ವಿಜಯ್ ರಾಜ್, ಬಿಜೆಪಿ ಸಂಸದ ರವಿಕಿಶನ್ ಸಹ ನಟಿಸಿದ್ದಾರೆ. ಸಿನಿಮಾ ಜೂನ್ 13 ಕ್ಕೆ ಬಿಡುಗಡೆ ಆಗಿತ್ತು. ಆದರೆ ಬಾಕ್ಸ್ ಆಫೀಸ್ನಲ್ಲಿ ಧಾರುಣವಾಗಿ ಸೋತಿತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ