ನಟ ಶಾರುಖ್ ಖಾನ್ (Shah Rukh Khan) ಅವರು ಐಪಿಎಲ್ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಒಡೆತನ ಹೊಂದಿದ್ದಾರೆ. ಮ್ಯಾಚ್ ವೀಕ್ಷಿಸಲು ಅವರು ಸ್ಟೇಡಿಯಂಗೆ ಆಗಮಿಸುತ್ತಾರೆ. ಇತ್ತೀಚೆಗೆ ಅವರು ಪಂದ್ಯ ವೀಕ್ಷಿಸಲು ಬಂದಾಗ ಅವರ ಜೊತೆ ಮಹಿಳೆಯೊಬ್ಬರು ಇದ್ದರು. ಇದು ಯಾರು ಎನ್ನುವ ಪ್ರಶ್ನೆ ಅನೇಕರಿಗೆ ಮೂಡಿತ್ತು. ಇವರು ಪೂಜಾ ದದ್ಲಾನಿ. ಶಾರುಖ್ ಅವರ ಮ್ಯಾನೇಜರ್. ಶಾರುಖ್ ಖಾನ್ ಅವರ ಎಲ್ಲ ವಿಚಾರವನ್ನು ಇವರೇ ನೋಡಿಕೊಳ್ಳುತ್ತಾರೆ. ಅವರ ಸಂಭಾವನೆ ವಿಚಾರ ಕೂಡ ಭರ್ಜರಿ ಚರ್ಚೆ ಆಗುತ್ತಿದೆ.
ಶಾರುಖ್ ಖಾನ್ ಅವರು ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ತೊಂದರೆ ಅನುಭವಿಸಿದ್ದರು. ಈಗ ಅವರಿಗೆ ಎಲ್ಲವೂ ಒಳ್ಳೆಯದೇ ಆಗುತ್ತಿದೆ. ‘ಪಠಾಣ್’, ‘ಜವಾನ್’ ಹಾಗೂ ‘ಡಂಕಿ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಗೆಲುವು ಕಂಡಿವೆ. ಅವರ ಮಗ ಆರ್ಯನ್ ಖಾನ್ ಆರಂಭಿಸಿದ ಬಟ್ಟೆ ಬಿಸ್ನೆಸ್ ಒಳ್ಳೆಯ ರೀತಿಯಲ್ಲಿ ಸಾಗುತ್ತಿದೆ. ಸುಹಾನಾ ಖಾನ್ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಇದಕ್ಕೆ ಇವರ ಮ್ಯಾನೇಜರ್ ಪೂಜಾ ಕೊಡುಗೆಯೂ ಇದೆ. ಶಾರುಖ್ ಖಾನ್ ಅವರು ಸಾವಿರಾರು ಕೋಟಿಯ ಆಸ್ತಿ ಹೊಂದಿದ್ದಾರೆ. ಶಾರುಖ್ ಖಾನ್ ಅವರು ತಮ್ಮ ಮ್ಯಾನೇಜರ್ ಪೂಜಾ ದದ್ಲಾನಿಯನ್ನು ಸಾಕಷ್ಟು ನಂಬುತ್ತಾರೆ.
ಶಾರುಖ್ ಖಾನ್ ಮ್ಯಾನೇಜರ್ ಆಗಿರುವ ಪೂಜಾ ಕೇವಲ ಮ್ಯಾನೇಜರ್ ಕೆಲಸ ಮಾಡುತ್ತಿಲ್ಲ. ಅವರು ಶಾರುಖ್ ಕುಟುಂಬದಲ್ಲಿ ಒಬ್ಬರಾಗಿದ್ದಾರೆ. ಅವರು ಯಾವಾಗಲೂ ಶಾರುಖ್ ಜೊತೆ ಇರುತ್ತಾರೆ. ಶಾರುಖ್ ಖಾನ್ ಮ್ಯಾನೇಜ್ ಮಾಡಬೇಕಾದ ವಿಷಯಗಳನ್ನು ಪೂಜಾ ನೋಡಿಕೊಳ್ಳುತ್ತಾರೆ. ಶಾರುಖ್ ಅವರು ಪೂಜಾ ಮೇಲೆ ಅಷ್ಟು ವಿಶ್ವಾಸ ಇಟ್ಟುಕೊಂಡಿದ್ದಾರೆ. ಇದಕ್ಕೆ ಪ್ರತಿಯಾಗಿ ಅವರಿಗೆ ವರ್ಷಕ್ಕೆ ದೊಡ್ಡ ಸಂಭಾವನೆ ಸಿಗುತ್ತಿದೆ. ಪ್ರತಿ ವರ್ಷ ಪೂಜಾ ಸಂಭಾವನೆ ಆಗಿ 7-9 ಕೋಟಿ ರೂಪಾಯಿ ಪಡೆಯುತ್ತಾರೆ. ಅವರ ಒಟ್ಟೂ ಆಸ್ತಿ 45 ಕೋಟಿ ರೂಪಾಯಿಗೂ ಅಧಿಕವಾಗಿದೆ.
2021ರಲ್ಲಿ ಆರ್ಯನ್ ಖಾನ್ ಅವರು ಡ್ರಗ್ ಕೇಸ್ನಲ್ಲಿ ಸಿಕ್ಕಿ ಬಿದ್ದರು. ಇದರಿಂದ ಶಾರುಖ್ ಸಾಕಷ್ಟು ನೊಂದರು. ಆರ್ಯನ್ ಖಾನ್ಗೆ ಜಾಮೀನು ಕೊಡಿಸಬೇಕು ಎಂದು ಪೂಜಾ ಸಾಕಷ್ಟು ಪ್ರಯತ್ನಪಟ್ಟಿದ್ದರು. ಎಲ್ಲಾ ಸಂದರ್ಭದಲ್ಲೂ ಶಾರುಖ್ ಖಾನ್ಗೆ ಕೋರ್ಟ್ ಹಾಗೂ ಪೊಲೀಸ್ ಠಾಣೆಗೆ ಹೋಗೋಕೆ ಸಾಧ್ಯವಾಗುತ್ತಿರಲಿಲ್ಲ. ಆಗ ಶಾರುಖ್ ಬದಲು ಪೂಜಾ ದದ್ಲಾನಿ ಕೋರ್ಟು-ಕಚೇರಿ ಓಡಾಡಿದ್ದರು.
ಶಾರುಖ್ ಖಾನ್ ಅವರು ಹಲವು ಬ್ರ್ಯಾಂಡ್ಗಳಿಗೆ ಪ್ರಚಾರ ರಾಯಭಾರಿ ಆಗಿದ್ದಾರೆ. ಈ ಕಂಪನಿಗಳ ಜೊತೆ ಪೂಜಾ ಸಂಪರ್ಕ ಇಟ್ಟುಕೊಂಡಿದ್ದಾರೆ. ಜಾಹೀರಾತು ಶೂಟಿಂಗ್ ಮತ್ತಿತ್ಯಾದಿ ವಿಚಾರಗಳ ಬಗ್ಗೆ ಪೂಜಾ ಅವರೇ ಡೇಟ್ಸ್ ಹೊಂದಿಸುತ್ತಾರೆ. ಶಾರುಖ್ ಖಾನ್ ಆಯೋಜಿಸುವ ಎಲ್ಲಾ ಪಾರ್ಟಿಗಳಿಗೆ ಪೂಜಾ ಹಾಜರಿ ಹಾಕುತ್ತಾರೆ.
ಇದನ್ನೂ ಓದಿ: ಈ ಹಾಟ್ ಚೆಲುವೆಯೇ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ರ ಗರ್ಲ್ಫ್ರೆಂಡ್
ಇತ್ತೀಚೆಗೆ ಪೂಜಾ ಬಾಂದ್ರಾದಲ್ಲಿ ಮನೆ ಖರೀದಿಸಿದ್ದಾರೆ. ಈ ಮನೆಯ ಇಂಟೀರಿಯರ್ನ ಶಾರುಖ್ ಖಾನ್ ಪತ್ನಿ ಗೌರಿ ಖಾನ್ ಅವರೇ ಡಿಸೈನ್ ಮಾಡಿದ್ದರು. ಪೂಜಾ ಬಳಿ ಐಷಾರಾಮಿ ಕಾರು ಕೂಡ ಇದೆ. ಪೂಜಾ ಅವರು 2008ರಲ್ಲಿ ಹಿತೇಶ್ ಅವರನ್ನು ಮದುವೆ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ