ಪಂಜಾಬ್ ತಂಡಕ್ಕಾಗಿ 120 ಆಲೂ ಪರಾಟ ಮಾಡಿದ್ದ ಪ್ರೀತಿ ಝಿಂಟಾ, ಹೆಚ್ಚು ತಿಂದಿದ್ದು ಯಾರು?

|

Updated on: Apr 29, 2023 | 7:23 PM

Punjab Kings Eleven: ಪಂಜಾಬ್ ತಂಡದ ಸಹ ಒಡತಿ ನಟಿ ಪ್ರೀತಿ ಝಿಂಟಾ, ಬಹಳ ವರ್ಷಗಳ ಹಿಂದೊಮ್ಮೆ ಪಂಜಾಬ್ ತಂಡದ ಆಟಗಾರರಿಗಾಗಿ 120 ಆಲೂ ಪರಾಟ ಮಾಡಿಕೊಟ್ಟಿದ್ದಾಗಿ ಹೇಳಿದ್ದಾರೆ. ಅಂದಹಾಗೆ, ಹೆಚ್ಚು ತಿಂದವರು ಯಾರು?

ಪಂಜಾಬ್ ತಂಡಕ್ಕಾಗಿ 120 ಆಲೂ ಪರಾಟ ಮಾಡಿದ್ದ ಪ್ರೀತಿ ಝಿಂಟಾ, ಹೆಚ್ಚು ತಿಂದಿದ್ದು ಯಾರು?
ಪ್ರೀತಿ ಝಿಂಟಾ
Follow us on

ಐಪಿಎಲ್ 2023 (IPL 2023) ಚಾಲ್ತಿಯಲ್ಲಿದೆ, ಕೆಲವು ತಂಡಗಳು ಉತ್ತಮ ಪ್ರದರ್ಶನ ತೋರುತ್ತಿವೆ ಕೆಲವು ತಂಡಗಳು ಕಳಪೆ ಪ್ರದರ್ಶನ ತೋರಿವೆ, ಕೆಲವು ತಂಡಗಳು ಕೊಸರಾಡುತ್ತಿವೆ. ಅವುಗಳಲ್ಲಿ ಪಂಜಾಬ್ ಸಹ ಒಂದು. ಆರ್​ಸಿಬಿಯಂತೆಯೇ (RCB) ಪಂಜಾಬ್ ಕಿಂಗ್ಸ್ ಇಲೆವೆನ್ (Punjab Kings Eleven) ಸಹ ಈ ವರೆಗೆ ಒಮ್ಮೆಯೂ ಕಪ್ ಗೆದ್ದಿಲ್ಲ. ಈ ತಂಡದ ಮಾಲಕಿ ಪ್ರೀತಿ ಝಿಂಟಾ (Preity Zinta) ಪ್ರತಿಬಾರಿಯೂ ತಂಡಕ್ಕೆ ಬೆಂಬಲ ನೀಡಲು ಬರುತ್ತಾರೆ ನಿರಾಶರಾಗಿ ಹೋಗುತ್ತಾರೆ. ಆದರೆ ತಂಡದ ಮೇಲೆ ವಿಶ್ವಾಸ ಕಳೆದುಕೊಂಡಿಲ್ಲ. ಮಾತ್ರವಲ್ಲ, ಮಾಲಕಿಯಾಗಿ ತಂಡ ಉತ್ತಮ ಪ್ರದರ್ಶನ ನೀಡುವಂತೆ ಬೇಕಾದ ಸೌಲಭ್ಯಗಳನ್ನು ಕಲ್ಪಿಸಿಕೊಡುವುದರಲ್ಲಿ ಹಿಂದುಳಿದಿಲ್ಲ. ಯಾವ ಮಟ್ಟಿಗೆಂದರೆ ಒಮ್ಮೆಯಂತೂ ಸ್ವತಃ ಅವರೇ ತಂಡದ ಸದಸ್ಯರಿಗೆ ಅಡುಗೆಯನ್ನು ಮಾಡಿ ಬಡಿಸಿದ್ದರಂತೆ.

2009 ರಲ್ಲಿ ಲೋಕಸಭೆ ಚುನಾವಣೆಗಳ ಕಾರಣ ಐಪಿಎಲ್ ಪಂದ್ಯಗಳನ್ನು ಮೊದಲ ಬಾರಿಗೆ ದಕ್ಷಿಣ ಆಫ್ರಿಕಾದಲ್ಲಿ ಆಡಿಸಲು ನಿಶ್ಚಯಿಸಲಾಯಿತು. ತಿಂಗಳಿಗೂ ಹೆಚ್ಚು ಕಾಲ ಎಲ್ಲ ಐಪಿಎಲ್ ತಂಡಗಳ ಸದಸ್ಯರು, ಕೋಚ್ ಹಾಗೂ ಇನ್ನಿತರೆ ಸಹಾಯಕ ಸದಸ್ಯರು ದಕ್ಷಿಣ ಆಫ್ರಿಕಾದಲ್ಲಿರಬೇಕಾಯಿತು. ಹೀಗಿದ್ದ ಐಪಿಎಲ್ ತಂಡಗಳ ಹಲವು ಸದಸ್ಯರಿಗೆ ಆಹಾರದ ಸಮಸ್ಯೆ ಎದುರಾಯಿತು. ಭಾರತೀಯ ಆಹಾರ ಸಿಗದಂತಾಯಿತು, ಸಿಕ್ಕರೂ ಸರಿಯಾಗಿರುತ್ತಿರಲಿಲ್ಲ. ಮುಂಬೈ, ಆರ್​ಸಿಬಿ ಇನ್ನಿತರೆ ಕೆಲವು ತಂಡಗಳು ತಮ್ಮದೇ ಆದ ಶೆಫ್​ಗಳನ್ನು ಕರೆದುಕೊಂಡು ಹೋಗಿತ್ತು ಆದರೆ ಕೆಲವು ತಂಡಗಳು ಆ ಸಾಹಸ ಮಾಡಿರಲಿಲ್ಲ.

ಪಂಜಾಬ್ ತಂಡದ ಸದಸ್ಯರು ಭಾರತೀಯ ಆಹಾರ ಸಿಗದೆ ಪರದಾಡುತ್ತಿದ್ದರು. ಒಮ್ಮೆ ಅವರಿಗೆ ಸಿಕ್ಕಿದ್ದ ಆಲೂ ಪರಾಟಗಳು ಏನೇನೂ ಚೆನ್ನಾಗಿರಲಿಲ್ಲವಂತೆ, ಈ ಬಗ್ಗೆ ತಂಡದ ಕೆಲವು ಸದಸ್ಯರು ಪ್ರೀತಿ ಝಿಂಟಾ ಬಳಿ ದೂರು ಹೇಳಿದ್ದಾರೆ. ಸರಿ, ಮುಂದಿನ ಪಂದ್ಯ ಗೆದ್ದರೆ ನಾನೇ ಆಲೂ ಪರಾಟ ಮಾಡಿ ಬಡಿಸುತ್ತೇನೆ ಎಂದಿದ್ದಾರೆ ಪ್ರೀತಿ, ಮುಂದಿನ ಪಂದ್ಯ ಗೆದ್ದಿದ್ದಾರೆ ಪಂಜಾಬ್ ತಂಡ. ಸರಿ ಕೊಟ್ಟ ಮಾತಿನಂತೆ ಆಲೂ ಪರಾಟ ಮಾಡಿಕೊಟ್ಟಿದ್ದಾರೆ ಪ್ರೀತಿ, ಅಂದು ತಾವು 120 ಆಲೂ ಪರೋಟ ಮಾಡಿದ್ದಾಗಿ ಪ್ರೀತಿ ಝಿಂಟಾ ಹೇಳಿದ್ದಾರೆ. ಮಾತ್ರವಲ್ಲ ಅಂದೇ ಅವರಿಗೆ ಗೊತ್ತಾಗಿದ್ದಂತೆ ಕ್ರೀಡಾಪಟುಗಳು ಎಷ್ಟು ಆಹಾರ ತಿನ್ನುತ್ತಾರೆಂದು, ತಂಡದ ಸದಸ್ಯರು ತಿನ್ನುವ ರೀತಿ ನೋಡಿ ಗಾಬರಿಯೂ ಆಯಿತಂತೆ.

ಪ್ರೀತಿ ಝಿಂಟಾ ಈ ಸಂಗತಿ ವಿವರಿಸಿದಾಗ ಅಲ್ಲಿಯೇ ಇದ್ದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್, ಆ 120 ಆಲೂ ಪರಾಟನಲ್ಲಿ 20 ಪರಾಟಗಳನ್ನು ಇರ್ಫಾನ್ ಪಠಾಣ್ ಒಬ್ಬನೇ ಖಾಲಿ ಮಾಡಿರುತ್ತಾನೆ ಎಂದು ಹಾಸ್ಯ ಮಾಡಿದರು. ಪ್ರೀತಿ ಸಹ ನಗುತ್ತಾ ಹೌದೆಂದು ತಲೆ ಆಡಿಸಿದ್ದಾರೆ.

ಇದನ್ನೂ ಓದಿ:‘ಡ್ಯಾನ್ಸ್ ಮಾಡುತ್ತ ನಿನ್ನ ಒಳ ಉಡುಪುಗಳನ್ನು ತೆಗೆದುಬಿಡು ಎಂದಿದ್ದ ಆ ಸಿನಿಮಾ ನಿರ್ಮಾಪಕ’- ಪ್ರಿಯಾಂಕಾ ಚೋಪ್ರಾ ಬಿಚ್ಚಿಟ್ಟ ಸ್ಫೋಟಕ ವಿಷಯ

2009 ರ ಐಪಿಎಲ್​ನಲ್ಲಿ ಪಂಜಾಬ್ ಐದನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಆ ಪಂದ್ಯಾವಳಿಯಲ್ಲಿ ಆರ್​ಸಿಬಿ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿತ್ತು, ಅದೂ ಚೆನ್ನೈ ತಂಡವನ್ನು ಸೆಮಿಫೈನಲ್​ನಲ್ಲಿ ಸೋಲಿಸಿ. ಆದರೆ ಡೆಕ್ಕನ್ ಚಾರ್ಜಸ್ ಎದುರು ಸೋತು ರನ್ನರ್ ಅಪ್ ಆಯಿತು. ಇದೀಗ ಐಪಿಎಲ್ ಪಂದ್ಯಗಳು ಚಾಲ್ತಿಯಲ್ಲಿದ್ದು ಅಂಕಪಟ್ಟಿಯಲ್ಲಿ ಪಂಜಾಬ್ ಪ್ರಸ್ತುತ ಆರನೇ ಸ್ಥಾನದಲ್ಲಿದೆ, ಆರ್​ಸಿಬಿ ಐದನೇ ಸ್ಥಾನದಲ್ಲಿದೆ. ಅಂದಹಾಗೆ ಕಿಂಗ್ಸ್ ಇಲೆವೆನ್ ಪಂಜಾಬ್​ನ ಪೂರ್ಣ ಒಡತಿ ಪ್ರೀತಿ ಝಿಂಟಾ ಅಲ್ಲ. ಅವರ ಬಳಿ 23% ಒಡೆತನವಿದೆ. ನೆಸ್ ವಾಡಿಯಾ ಬಳಿ 23%, 46% ಷೇರು ಮೋಹಿತ್ ಬರ್ಮನ್ ಹಾಗೂ ಉಳಿಕೆ 8% ಷೇರುಗಳು ಡೇ ಆಂಡ್ ಡೇ ಗ್ರೂಪ್​ನ ಸಪ್ತರ್ಷಿ ಅವರ ಬಳಿ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ