ಸಿನಿಮಾ ಕೆಲಸಗಳಲ್ಲಿ ನಟ ಅಕ್ಷಯ್ ಕುಮಾರ್ (Akshay Kumar) ಅವರು ಸದಾ ಕಾಲ ಬ್ಯುಸಿ ಆಗಿರುತ್ತಾರೆ. ಆ ಕಾರಣದಿಂದಲೇ ಅವರ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ತೆರೆ ಕಾಣುತ್ತಿವೆ. ನ.5ರಂದು ಬಿಡುಗಡೆ ಆಗಿದ್ದ ‘ಸೂರ್ಯವಂಶಿ’ (Sooryavanshi) ಸಿನಿಮಾ ಗೆದ್ದು ಬೀಗಿದೆ. ಅದರ ಬೆನ್ನಲ್ಲೇ ಅವರ ‘ಪೃಥ್ವಿರಾಜ್’ ಚಿತ್ರ (Prithviraj Movie) ಕೂಡ ಬಿಡುಗಡೆಗೆ ಸಜ್ಜಾಗುತ್ತಿದೆ. ಈಗಾಗಲೇ ಆ ಸಿನಿಮಾದ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಅದರ ಮೊದಲ ಹಂತವಾಗಿ ಟೀಸರ್ (Prithviraj Teaser:) ಬಿಡುಗಡೆ ಮಾಡಲಾಗಿದೆ. ‘ಪೃಥ್ವಿರಾಜ್’ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಜೊತೆ ಸಂಜಯ್ ದತ್ ಮತ್ತು ಸೋನು ಸೂದ್ ಕೂಡ ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ. ಈ ಟೀಸರ್ ಮೂಲಕ ಅವರೆಲ್ಲರ ಪಾತ್ರಗಳ ಗೆಟಪ್ ಬಹಿರಂಗ ಆಗಿದೆ. ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಕ್ರೇಜ್ ಹೆಚ್ಚಲು ಈ ಟೀಸರ್ ಕಾರಣ ಆಗಿದೆ.
ಡಾ. ಚಂದ್ರಪ್ರಕಾಶ್ ದ್ವಿವೇದಿ ನಿರ್ದೇಶನ ಮಾಡಿರುವ ‘ಪೃಥ್ವಿರಾಜ್’ ಸಿನಿಮಾದಲ್ಲಿ ಅಕ್ಷಯ್ ಕುಮಾರ್ಗೆ ಜೋಡಿಯಾಗಿ ಮಾನುಷಿ ಚಿಲ್ಲರ್ ನಟಿಸಿದ್ದಾರೆ. ಮಾನುಷಿ ಚಿಲ್ಲರ್ ಅವರಿಗೆ ಇದು ಮೊದಲ ಸಿನಿಮಾ. ಈ ಚಿತ್ರಕ್ಕೆ ಯಶ್ ರಾಜ್ ಫಿಲ್ಮ್ಸ್ ಬಂಡವಾಳ ಹೂಡಿದೆ. ಈ ಪ್ರತಿಷ್ಠಿತ ಬ್ಯಾನರ್ನಲ್ಲಿ ಮೂಡಿಬರುತ್ತಿರುವ ಮೊದಲ ಐತಿಹಾಸಿಕ ಕಥಾಹಂದರದ ಸಿನಿಮಾ ಇದಾಗಿದೆ. ಈ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಅವರು ಸಾಮ್ರಾಟ್ ಪೃಥ್ವಿರಾಜ್ ಚೌಹಾಣ್ ಪಾತ್ರವನ್ನು ನಿಭಾಯಿಸಿದ್ದಾರೆ. ಯುದ್ಧದ ದೃಶ್ಯಗಳನ್ನು ಈ ಟೀಸರ್ನಲ್ಲಿ ತೋರಿಸಲಾಗಿದೆ. ಪೃಥ್ವಿರಾಜ್ ಪಾತ್ರದಲ್ಲಿ ಅಕ್ಷಯ್ ಕುಮಾರ್ ಹೇಗೆ ಕಾದಾಡಿದ್ದಾರೆ ಎಂಬುದರ ಝಲಕ್ ಈ ಟೀಸರ್ನಲ್ಲಿದೆ.
ಅದ್ದೂರಿ ಬಜೆಟ್ನಲ್ಲಿ ‘ಪೃಥ್ವಿರಾಜ್’ ಚಿತ್ರ ಮೂಡಿಬಂದಿದೆ. ಯುದ್ಧದ ಸನ್ನಿವೇಶಗಳಿಗಾಗಿ ಅತ್ಯಾಧುನಿಕ ಗ್ರಾಫಿಕ್ಸ್ ತಂತ್ರಜ್ಞಾನ ಬಳಕೆ ಮಾಡಿಕೊಳ್ಳಲಾಗಿದೆ. ಟೀಸರ್ನಲ್ಲಿ ಅದರ ಝಲಕ್ ನೋಡಿದ ಸಿನಿಪ್ರಿಯರಿಗೆ ಸಿನಿಮಾ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ. ಯೂಟ್ಯೂಬ್ನಲ್ಲಿ ಟೀಸರ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ 15 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ ಕಂಡಿದೆ. 2022ರ ಜನವರಿ 21ರಂದು ಈ ಚಿತ್ರ ಬಿಡುಗಡೆ ಆಗಲಿದೆ. ‘ಸೂರ್ಯವಂಶಿ’ ರೀತಿ ಈ ಚಿತ್ರ ಕೂಡ ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಯಶಸ್ಸು ಕಾಣುವ ನಿರೀಕ್ಷೆ ಇದೆ. ಇದಲ್ಲದೇ, ‘ಬಚ್ಚನ್ ಪಾಂಡೆ’, ‘ರಕ್ಷಾ ಬಂಧನ್’, ‘ಗೋರ್ಕಾ’, ‘ರಾಮ್ ಸೇತು’ ಮುಂತಾದ ಸಿನಿಮಾಗಳಲ್ಲಿ ಅಕ್ಷಯ್ ಕುಮಾರ್ ನಟಿಸುತ್ತಿದ್ದಾರೆ.
ಇದನ್ನೂ ಓದಿ:
ಯಾವ ಖಾನ್ಗೂ ಕಮ್ಮಿ ಇಲ್ಲ ಅಕ್ಷಯ್ ಕುಮಾರ್; ವಿಶ್ವಾದ್ಯಂತ 200 ಕೋಟಿ ಬಾಚಿದ ‘ಸೂರ್ಯವಂಶಿ’