ಯಾವ ಖಾನ್ಗೂ ಕಮ್ಮಿ ಇಲ್ಲ ಅಕ್ಷಯ್ ಕುಮಾರ್; ವಿಶ್ವಾದ್ಯಂತ 200 ಕೋಟಿ ಬಾಚಿದ ‘ಸೂರ್ಯವಂಶಿ’
Sooryavanshi box office collection: ಅಕ್ಷಯ್ ಕುಮಾರ್ ನಟನೆಯ ‘ಸೂರ್ಯವಂಶಿ’ ಸಿನಿಮಾ ಕೇವಲ 9 ದಿನದಲ್ಲಿ ವಿಶ್ವಾದ್ಯಂತ 209 ಕೋಟಿ ರೂ. ಗಳಿಸಿದೆ. ಭಾರತೀಯ ಮಾರುಕಟ್ಟೆಯಲ್ಲಿ 164.10 ಕೋಟಿ ಹಾಗೂ ವಿದೇಶಿ ಬಾಕ್ಸ್ ಆಫೀಸ್ನಲ್ಲಿ 45.40 ಕೋಟಿ ರೂ. ಆದಾಯ ಹರಿದುಬಂದಿದೆ.
ಬಾಲಿವುಡ್ ಬಾಕ್ಸ್ ಆಫೀಸ್ನಲ್ಲಿ ಶಾರುಖ್ ಖಾನ್, ಆಮಿರ್ ಖಾನ್ ಮತ್ತು ಸಲ್ಮಾನ್ ಖಾನ್ ಸಿನಿಮಾಗಳು ಉತ್ತಮ ಕಲೆಕ್ಷನ್ (Box office collection) ಮಾಡುತ್ತವೆ ಎಂಬುದು ಎಲ್ಲ ನಿರ್ಮಾಪಕರ ನಂಬಿಕೆ ಆಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಆ ನಂಬಿಕೆ ಯಾಕೋ ಸುಳ್ಳಾಗುತ್ತಲೇ ಇದೆ. ಶಾರುಖ್ ಖಾನ್ ಸಿನಿಮಾಗಳು ಗೆಲ್ಲದೇ ಹಲವು ವರ್ಷ ಆಯಿತು. ಸಲ್ಮಾನ್ ಖಾನ್ ಕೂಡ ಸೋಲುಂಡಿದ್ದಾರೆ. ಆಮಿರ್ ಖಾನ್ ಅವರ ಚಾರ್ಮ್ ಮೊದಲಿನಂತಿಲ್ಲ. ಈ ನಡುವೆ ಅಕ್ಷಯ್ ಕುಮಾರ್ (Akshay Kumar) ಅವರು ಗೆಲ್ಲುವ ಕುದುರೆ ಆಗಿದ್ದಾರೆ. ಇತ್ತೀಚೆಗೆ ತೆರೆಕಂಡಿರುವ ‘ಸೂರ್ಯವಂಶಿ’ (Sooryavanshi) ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ದೀಪಾವಳಿ ಹಬ್ಬದ ಪ್ರಯುಕ್ತ ನ.5ರಂದು ಬಿಡುಗಡೆಯಾದ ಈ ಸಿನಿಮಾ ಈಗ ವಿಶ್ವಾದ್ಯಂತ 200 ಕೋಟಿ ರೂಪಾಯಿ ಕಮಾಯಿ ಮಾಡಿದೆ. ಆ ಮೂಲಕ ಅಕ್ಷಯ್ ಕುಮಾರ್ ಅವರು ಯಾವ ಖಾನ್ಗೂ ಕಮ್ಮಿ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
‘ಸೂರ್ಯವಂಶಿ’ ಸಿನಿಮಾ ಕೇವಲ 9 ದಿನದಲ್ಲಿ ವಿಶ್ವಾದ್ಯಂತ 209 ಕೋಟಿ ರೂ. ಗಳಿಸಿದೆ. ಭಾರತೀಯ ಮಾರುಕಟ್ಟೆಯಲ್ಲಿ 164.10 ಕೋಟಿ ಹಾಗೂ ವಿದೇಶಿ ಬಾಕ್ಸ್ ಆಫೀಸ್ನಲ್ಲಿ 45.40 ಕೋಟಿ ರೂ. ಆದಾಯ ಹರಿದುಬಂದಿದೆ. ಎರಡೂ ಸೇರಿದರೆ 209 ಕೋಟಿ ರೂ. ಆಗಲಿದೆ. ಇದು ಅಕ್ಷಯ್ ಕುಮಾರ್ ಅಭಿಮಾನಿಗಳ ಸಂತಸಕ್ಕೆ ಕಾರಣ ಆಗಿದೆ. ಈ ಗೆಲುವನ್ನು ಅಕ್ಕಿ ಫ್ಯಾನ್ಸ್ ಸಂಭ್ರಮಿಸುತ್ತಿದ್ದಾರೆ.
‘ಸೂರ್ಯವಂಶಿ’ ಬಿಡುಗಡೆಯಾಗಿ 10 ದಿನ ಕಳೆದಿದೆ. ಇಂದಿಗೂ ಅನೇಕ ಕಡೆಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಹಾಗಾಗಿ ಗಲ್ಲಾಪೆಟ್ಟಿಗೆಯಲ್ಲಿ ಕಲೆಕ್ಷನ್ ಈಗಲೂ ಮುಂದುವರಿದಿದೆ. ಈ ಹಿಂದೆ ತೆರೆಕಂಡಿದ್ದ ‘ಬೆಲ್ ಬಾಟಂ’ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್ ಮಾಡಿರಲಿಲ್ಲ. ಆ ಬೇಸರವನ್ನು ಮರೆಸುವ ರೀತಿಯಲ್ಲಿ ಅಕ್ಷಯ್ ಕುಮಾರ್ಗೆ ‘ಸೂರ್ಯವಂಶಿ’ ಚಿತ್ರ ಗೆಲುವು ತಂದುಕೊಟ್ಟಿದೆ.
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಹಲವು ತಿಂಗಳ ಹಿಂದೆಯೇ ‘ಸೂರ್ಯವಂಶಿ’ ತೆರೆಕಾಣಬೇಕಿತ್ತು. ಆದರೆ ಕೊರೊನಾ ವೈರಸ್ ಲಾಕ್ಡೌನ್ ಕಾರಣದಿಂದ ಪದೇಪದೇ ಚಿತ್ರದ ಬಿಡುಗಡೆ ದಿನಾಂಕ ಮುಂದೂಡಲ್ಪಟ್ಟಿತ್ತು. ಈ ನಡುವೆ ಓಟಿಟಿಯಲ್ಲಿ ರಿಲೀಸ್ ಮಾಡಲು ಆಫರ್ ಬಂದಿದ್ದರೂ ಕೂಡ ಅದಕ್ಕೆ ನಿರ್ಮಾಪಕರು ಒಪ್ಪಿಕೊಂಡಿರಲಿಲ್ಲ. ಅಂತಿಮವಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿದ್ದಕ್ಕೆ ಸೂಕ್ತ ಪ್ರತಿಫಲ ಸಿಗುತ್ತಿದೆ.
ಈ ಸಿನಿಮಾದ ಗೆಲುವಿಗೆ ಹಲವು ಕಾರಣಗಳಿವೆ. ಬಹುದಿನಗಳ ಬಳಿಕ ಚಿತ್ರಮಂದಿರದಲ್ಲಿ ಒಂದು ಬಿಗ್ ಬಜೆಟ್ ಸಿನಿಮಾ ರಿಲೀಸ್ ಆಗಿರುವುದರಿಂದ ಉತ್ತರ ಭಾರತದ ಮಂದಿ ಮುಗಿಬಿದ್ದು ನೋಡಿದ್ದಾರೆ. ಅಕ್ಷಯ್ ಕುಮಾರ್ ಮತ್ತು ಕತ್ರಿನಾ ಕೈಫ್ ಕಾಂಬಿನೇಷನ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಆ್ಯಕ್ಷನ್ ಸಿನಿಮಾಗಳ ಮೂಲಕ ಜನಮೆಚ್ಚುಗೆ ಗಳಿಸಿದ್ದ ನಿರ್ದೇಶಕ ರೋಹಿತ್ ಶೆಟ್ಟಿ ಅವರು ಜನರ ನಿರೀಕ್ಷೆಗೆ ತಕ್ಕಂತೆ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಸಾಹಸ ದೃಶ್ಯಗಳು ಅದ್ದೂರಿಯಾಗಿ ಮೂಡಿಬಂದಿವೆ. ಈ ಎಲ್ಲ ಕಾರಣಗಳಿಂದ ‘ಸೂರ್ಯವಂಶಿ’ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಬಂಪರ್ ಬೆಳೆ ತೆಗೆಯುತ್ತಿದೆ.
ಇದನ್ನೂ ಓದಿ:
2 ಬಾರಿ ಅಕ್ಷಯ್ ಕುಮಾರ್ ಕೆನ್ನೆಗೆ ಬಾರಿಸಿದ ಕತ್ರಿನಾ ಕೈಫ್; ಇದನ್ನೆಲ್ಲ ಅಕ್ಕಿ ಸಹಿಸಿಕೊಂಡಿದ್ದೇಕೆ?
ಕತ್ರಿನಾ-ವಿಕ್ಕಿ ವಿವಾಹ: ವೈರಲ್ ಆಗಿದ್ದ ಸಲ್ಮಾನ್-ಕತ್ರಿನಾ ಮದುವೆ ವಿಡಿಯೋದ ಅಸಲಿಯತ್ತೇನು?