ಎಫ್​ಟಿಐಐಗೆ ನಟ, ನಿರ್ದೇಶಕ ಆರ್ ಮಾಧವನ್ ಅಧ್ಯಕ್ಷ

|

Updated on: Sep 01, 2023 | 9:06 PM

R Madhavan: ಭಾರತದ ಪ್ರಮುಖ ಸಿನಿಮಾ, ಟಿವಿ ಶಿಕ್ಷಣ ಸಂಸ್ಥೆಯಾದ ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ (ಎಫ್​ಟಿಐಐ) ಗೆ ತಮಿಳಿನ ಜನಪ್ರಿಯ ನಟ, ನಿರ್ದೇಶಕ ಆರ್ ಮಾಧವನ್ ಅವರನ್ನು ಅಧ್ಯಕ್ಷರನ್ನಾಗಿ ನಾಮನಿರ್ದೇಶನ ಮಾಡಲಾಗಿದೆ.

ಎಫ್​ಟಿಐಐಗೆ ನಟ, ನಿರ್ದೇಶಕ ಆರ್ ಮಾಧವನ್ ಅಧ್ಯಕ್ಷ
ಆರ್ ಮಾಧವನ್
Follow us on

ಭಾರತೀಯ ಚಲನಚಿತ್ರ ಹಾಗೂ ದೂರದರ್ಶನ ಸಂಸ್ಥೆಗೆ (FTII) ಅಧ್ಯಕ್ಷರನ್ನಾಗಿ ತಮಿಳು ನಟ, ನಿರ್ದೇಶಕ ಆರ್ ಮಾಧವನ್ (R Madhavan) ಅವರನ್ನು ನಾಮನಿರ್ದೇಶನಗೊಳಿಸಲಾಗಿದೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಅವರು ಎಕ್ಸ್ (ಟ್ವಿಟ್ಟರ್) ಮೂಲಕ ಈ ವಿಷಯವನ್ನು ಘೋಷಿಸಿದ್ದಾರೆ. ಆರ್.ಮಾಧವನ್ ನಟಿಸಿ, ನಿರ್ದೇಶನ ಮಾಡಿರುವ ‘ರಾಕೆಟ್ರಿ; ದಿ ನಂಬಿ ಎಫೆಕ್ಟ್’ ಸಿನಿಮಾಕ್ಕೆ ಕೆಲವು ದಿನಗಳ ಹಿಂದಷ್ಟೆ ರಾಷ್ಟ್ರಪ್ರಶಸ್ತಿ ಘೋಷಣೆ ಆಗಿತ್ತು. ಇದೀಗ ಮತ್ತೊಂದು ಸಿಹಿ ಸುದ್ದಿ ನಟನ ಅರಸಿ ಬಂದಿದೆ.

”ಭಾರತೀಯ ಚಲನಚಿತ್ರ ಹಾಗೂ ದೂರದರ್ಶನ ಸಂಸ್ಥೆಯ ಅಧ್ಯಕ್ಷರಾಗಿ ನಾಮನಿರ್ದೇಶನಗೊಂಡಿರುವ ಆರ್ ಮಾಧವನ್​ಗೆ ಅಭಿನಂದನೆಗಳು. ನಿಮ್ಮ ಅಪಾರ ಅನುಭವ ಹಾಗೂ ಬಲವಾದ ನೈತಿಕತೆಯಿಂದ ಈ ಸಂಸ್ಥೆಯನ್ನು ಎತ್ತರಕ್ಕೆ ಕೊಂಡೊಯ್ಯುತ್ತೀರೆಂಬ ವಿಶ್ವಾಸವಿದೆ. ಧನಾತ್ಮಕ ಬದಲಾವಣೆಗಳನ್ನು ಸಂಸ್ಥೆಯಲ್ಲಿ ತನ್ನಿ ಸಂಸ್ಥೆಯನ್ನು ಪ್ರಗತಿಯತ್ತ ಕೊಂಡೊಯ್ಯಿರಿ. ನಿಮಗೆ ನನ್ನ ಅಭಿನಂದನೆಗಳು” ಎಂದು ಸಚಿವ ಅನುರಾಗ್ ಠಾಕೂರ್ ಟ್ವೀಟ್ ಮಾಡಿದ್ದಾರೆ. ಅನುರಾಗ್ ಠಾಕೂರ್ ಅವರ ಟ್ವಿಟ್​ಗೆ ಪ್ರತಿಕ್ರಿಯೆ ನೀಡಿರುವ ಆರ್ ಮಾಧವನ್, ”ಈ ಗೌರವ ಹಾಗೂ ಶುಭ ಹಾರೈಕೆಗಳಿಗೆ ಧನ್ಯವಾದಗಳು. ಎಲ್ಲರ ನಿರೀಕ್ಷೆಗಳನ್ನು ಸಾಕಾರಗೊಳಿಸಲು ಶಕ್ತಿ ಮೀರಿ ಯತ್ನಿಸುತ್ತೇನೆ” ಎಂದಿದ್ದಾರೆ.

ಆರ್ ಮಾಧವನ್ ಗೂ ಮುನ್ನ, ಶೇಖರ್ ಕಪೂರ್ ಅವರು ಎಫ್​ಟಿಐಐ ಅಧ್ಯಕ್ಷರಾಗಿದ್ದರು. ಇದೀಗ ಮಾಧವನ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಆ ಮೂಲಕ ದಕ್ಷಿಣ ಭಾರತ ಚಿತ್ರರಂಗಕ್ಕೆ ಪ್ರಾತಿನಿಧ್ಯ ನೀಡಿದಂತಾಗಿದೆ. ಪುಣೆಯಲ್ಲಿರುವ ಎಟಿಐಐ ಭಾರತದ ಅಗ್ರಗಣ್ಯ ಸಿನಿಮಾ ಹಾಗೂ ದೂರದರ್ಶನ ಸಂಸ್ಥೆಯಾಗಿದೆ. 1961 ರಲ್ಲಿ ಪ್ರಾರಂಭವಾದ ಈ ಸಂಸ್ಥೆಗೆ 63 ವರ್ಷದ ಇತಿಹಾಸವಿದೆ. ದಕ್ಷಿಣ ಭಾರತ ಚಿತ್ರರಂಗದವರು ಈ ಸಂಸ್ಥೆಯ ಅಧ್ಯಕ್ಷರಾಗಿರುವುದು ಬಹಳ ಕಡಿಮೆ. ಮಲಯಾಳಂ ಸಿನಿಮಾ ನಿರ್ದೇಶಕ ಅಡೂರು ಗೋಪಾಲಕೃಷ್ಣನ್, ಕನ್ನಡದ ಗಿರೀಶ್ ಕಾರ್ನಾಡ್, ಯುಆರ್ ಅನಂತಮೂರ್ತಿ ಅವರುಗಳು ಈ ಸಂಸ್ಥೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಆರ್​.ಕೆ.ಲಕ್ಷ್ಮಣ್, ಶ್ಯಾಮ್ ಬೆನಗಲ್, ಮೃಣಾಲ್ ಸೇನ್, ಇತ್ತೀಚೆಗೆ ಅನುಪಮ್ ಖೇರ್, ಶೇಕರ್ ಕಪೂರ್ ಅವರುಗಳು ಸಹ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ಇದನ್ನೂ ಓದಿ:ನಟ ಆರ್​. ಮಾಧವನ್​ ಇಂಗ್ಲಿಷ್​ ಉಚ್ಚಾರಣೆ ಕೇಳಿದ್ರಾ?; ವೈರಲ್​ ಆಯ್ತು ಹಳೆಯ ವಿಡಿಯೋ

ಅಡೂರು ಗೋಪಾಲಕೃಷ್ಣನ್, ಜಯಾ ಬಚ್ಚನ್, ಓಂ ಪುರಿ, ಸಂಜಯ್ ಲೀಲಾ ಬನ್ಸಾಲಿ, ಸತೀಶ್ ಕೌಶಿಕ್, ನಾಸಿರುದ್ದೀನ್ ಶಾ, ಮಿಥುನ್ ಚಕ್ರವರ್ತಿ, ಅನುಪಮ್ ಖೇರ್, ಈಗಿನ ಬಾಲಿವುಡ್ ನಟ ರಾಜ್​ಕುಮಾರ್ ರಾವ್ ಇನ್ನೂ ಹಲವರು ಇದೇ ಸಂಸ್ಥೆಯಲ್ಲಿ ಅಭಿನಯ ಸೇರಿದಂತೆ ಸಿನಿಮಾ ಹಾಗೂ ಟೆಲಿವಿಷನ್​ನ ಪಠ್ಯಗಳನ್ನು ಕಲಿತಿದ್ದಾರೆ.

ಭಾರತದ ಪ್ರಮುಖ ಸಿನಿಮಾ ಹಾಗೂ ಟಿವಿ ಸಂಸ್ಥೆಯ ಅಧ್ಯಕ್ಷರಾಗಿರುವ ಆರ್ ಮಾಧವನ್, ತಮಿಳು ಚಿತ್ರರಂಗದ ಜನಪ್ರಿಯ ನಟ. ಜೊತೆಗೆ ಬಾಲಿವುಡ್​ನ ಕೆಲವು ಹಿಟ್ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಉತ್ತರ ಭಾರತ ಹಾಗೂ ದಕ್ಷಿಣ ಭಾರತ ಚಿತ್ರರಂಗದ ಆಳ ಪರಿಚಯ ಹಾಗೂ ಜ್ಞಾನ ಮಾಧವನ್​ ಅವರಿಗಿದೆ. ಇತ್ತೀಚೆಗೆ ಅವರೇ ನಿರ್ದೇಶಿಸಿ, ನಟಿಸಿ, ಸಹ ನಿರ್ಮಾಣವನ್ನೂ ಮಾಡಿರುವ ‘ರಾಕೆಟ್ರಿ; ದಿ ನಂಬಿ ಎಫೆಕ್ಟ್’ ಸಿನಿಮಾಕ್ಕೆ ರಾಷ್ಟ್ರಪ್ರಶಸ್ತಿ ಸಹ ಲಭಿಸಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ