ನಟ ಆಮಿರ್ ಖಾನ್ (Aamir Khan) ಅವರು ಒಂದು ಕಾಲದಲ್ಲಿ ಗಮನಾರ್ಹ ಸಿನಿಮಾಗಳನ್ನು ನೀಡಿದ್ದರು. ಆ ಪೈಕಿ ‘3 ಈಡಿಯಟ್ಸ್’, ‘ಪಿಕೆ’ ಚಿತ್ರಗಳಿಗೆ ಪ್ರೇಕ್ಷಕರು ಫಿದಾ ಆಗಿದ್ದರು. ಆ ಎರಡೂ ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದು ರಾಜ್ಕುಮಾರ್ ಹಿರಾನಿ. ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ವಿಶೇಷ ಏನೆಂದರೆ, ಈಗ ಮತ್ತೆ ಆಮಿರ್ ಖಾನ್ ಮತ್ತು ರಾಜ್ಕುಮಾರ್ ಹಿರಾನಿ (Rajkumar Hirani) ಅವರು ಜೊತೆಯಾಗಿ ಒಂದು ಬಯೋಪಿಕ್ (Biopic) ಮಾಡುತ್ತಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಬಾಲಿವುಡ್ ಅಂಗಳಲ್ಲಿ ಗಾಸಿಪ್ ಕೇಳಿಬರುತ್ತಿದೆ. ಆದರೆ ಯಾರೂ ಕೂಡ ಅಧಿಕೃತವಾಗಿ ಮಾತನಾಡಿಲ್ಲ. ಒಂದು ವೇಳೆ ಈ ಸಕ್ಸಸ್ಫುಲ್ ನಟ-ನಿರ್ದೇಶಕರ ಕಾಂಬಿನೇಷನ್ನಲ್ಲಿ ಹೊಸ ಸಿನಿಮಾ ಬರುವುದು ನಿಜವೇ ಹೌದಾದರೆ ಅಭಿಮಾನಿಗಳಿಗೆ ಸಖತ್ ಖುಷಿ ಆಗುವುದು ಗ್ಯಾರಂಟಿ.
ರಾಜ್ಕುಮಾರ್ ಹಿರಾನಿ ಅವರು ಬಾಲಿವುಡ್ನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಅವರು ಮುಟ್ಟಿದ್ದೆಲ್ಲವೂ ಚಿನ್ನ ಆಗಿದೆ. ‘ಮುನ್ನಾಭಾಯ್ ಎಂಬಿಬಿಎಸ್’, ‘ಲಗೇ ರಹೋ ಮುನ್ನಾಭಾಯ್’, ‘3 ಈಡಿಯಟ್ಸ್’, ‘ಪಿಕೆ’, ‘ಸಂಜು’ ಸಿನಿಮಾಗಳನ್ನು ನೀಡಿದ ಅವರು ಈಗ ಶಾರುಖ್ ಖಾನ್ ಜೊತೆ ‘ಡಂಕಿ’ ಸಿನಿಮಾ ಮಾಡುತ್ತಿದ್ದಾರೆ. ಆ ಚಿತ್ರ ಮುಗಿದ ಬಳಿಕ ಅವರು ಆಮಿರ್ ಖಾನ್ ಜೊತೆ ಕೈ ಜೋಡಿಸಲಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.
ಇದನ್ನೂ ಓದಿ: Aamir Khan: ಎಲ್ಲರ ಎದುರು ಆಮಿರ್ ಖಾನ್ ಕಾಲಿಗೆ ನಮಸ್ಕರಿಸಿದ ಕಪಿಲ್ ಶರ್ಮಾ; ಇಬ್ಬರ ನಡುವಿನ ಒಡನಾಟ ಹೇಗಿದೆ?
ಆಮಿರ್ ಖಾನ್ ಅವರು ‘ಲಾಲ್ ಸಿಂಗ್ ಚಡ್ಡಾ’ ಚಿತ್ರದ ಮೇಲೆ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದರು. ಹಾಲಿವುಡ್ನ ‘ಫಾರೆಸ್ಟ್ ಗಂಪ್’ ಚಿತ್ರದ ಹಿಂದಿ ರಿಮೇಕ್ ಆಗಿ ಆ ಸಿನಿಮಾ ಮೂಡಿಬಂದಿತ್ತು. ಗಲ್ಲಾಪೆಟ್ಟಿಗೆಯಲ್ಲಿ ಈ ಚಿತ್ರ ಗೆಲ್ಲಲಿಲ್ಲ. ಆ ಸೋಲಿನ ಬಳಿಕ ಆಮಿರ್ ಖಾನ್ ಅವರು ಯಾವುದೇ ಹೊಸ ಸಿನಿಮಾ ಅನೌನ್ಸ್ ಮಾಡಲಿಲ್ಲ. ನಟನೆಯಿಂದ ಅವರು ಬ್ರೇಕ್ ಪಡೆದುಕೊಂಡಿದ್ದಾರೆ. ಮುಂದಿನ ಸಿನಿಮಾವನ್ನು ಬಹಳ ಲೆಕ್ಕಾಚಾರ ಹಾಕಿ ಒಪ್ಪಿಕೊಳ್ಳಲಿದ್ದಾರೆ.
ಇದನ್ನೂ ಓದಿ: Aamir Khan: ‘ಮಗಳ ವಯಸ್ಸಿನ ಫಾತಿಮಾ ಜತೆ ಆಮಿರ್ ಖಾನ್ ಮದುವೆ ಆಗ್ತಾರೆ’; ಬ್ರೇಕಿಂಗ್ ನ್ಯೂಸ್ ನೀಡಿದ ಕೆಆರ್ಕೆ
ರಾಜ್ಕುಮಾರ್ ಹಿರಾನಿ ಜೊತೆ ಸಿನಿಮಾ ಮಾಡಿದರೆ ಗೆಲುವು ಸಿಗಲಿದೆ ಎಂದು ಆಮಿರ್ ಖಾನ್ ಅವರಿಗೆ ಅನಿಸಿದಂತಿದೆ. ಇಬ್ಬರ ನಡುವೆ ಒಳ್ಳೆಯ ಬಾಂಧವ್ಯ ಇದೆ. ಈಗ ಅವರು ವ್ಯಕ್ತಿಯೊಬ್ಬರ ಜೀವನದ ಕಥೆಯನ್ನು ಆಧರಿಸಿ ಸಿನಿಮಾ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ಸಂಜಯ್ ದತ್ ಅವರ ಜೀವನಾಧಾರಿತ ‘ಸಂಜು’ ಚಿತ್ರವನ್ನು ರಾಜ್ಕುಮಾರ್ ಹಿರಾನಿ ನಿರ್ದೇಶಿಸಿದ್ದರು. ಈ ಬಾರಿ ಅವರು ಯಾರ ಕಥೆಯನ್ನು ಬೆಳ್ಳಿಪರದೆಗೆ ತರಲಿದ್ದಾರೆ ಎಂಬುದನ್ನು ಕಾದುನೋಡಬೇಕು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.