Saharasri: ಮತ್ತೊಂದು ವಿವಾದಿತ ಸಿನಿಮಾ ಘೋಷಿಸಿದ ‘ದಿ ಕೇರಳ ಸ್ಟೋರಿ’ ನಿರ್ದೇಶಕ ಸುದೀಪ್ತೋ ಸೇನ್; ಈ ಬಾರಿ ಬಯೋಪಿಕ್
Subrata Roy Biopic: ಸುದೀಪ್ತೋ ಸೇನ್ ನಿರ್ದೇಶಿಸಿದ ‘ದಿ ಕೇರಳ ಸ್ಟೋರಿ’ ಸಿನಿಮಾ ಸಾಕಷ್ಟು ವಿವಾದಕ್ಕೆ ಕಾರಣ ಆಗಿತ್ತು. ಈಗ ಅವರು ಕೈಗೆತ್ತಿಕೊಂಡಿರುವ ಹೊಸ ಚಿತ್ರದ ಕಥೆಯಲ್ಲೂ ಒಂದಷ್ಟು ವಿವಾದಗಳು ಇವೆ.
ರಿಯಲ್ ಲೈಫ್ ಘಟನೆಗಳನ್ನು ಇಟ್ಟುಕೊಂಡು ಸಿನಿಮಾ ಮಾಡುವ ಮೂಲಕ ನಿರ್ದೇಶಕ ಸುದೀಪ್ತೋ ಸೇನ್ (Sudipto Sen) ಅವರು ಫೇಮಸ್ ಆಗಿದ್ದಾರೆ. ಅವರು ನಿರ್ದೇಶಿಸಿದ ‘ದಿ ಕೇರಳ ಸ್ಟೋರಿ’ (The Kerala Story) ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಮಾಡಿದ ಸಾಧನೆ ಏನು ಎಂಬುದನ್ನು ಹೊಸದಾಗಿ ಹೇಳಬೇಕಾಗಿದ್ದಿಲ್ಲ. ಬಾಕ್ಸ್ ಆಫೀಸ್ನಲ್ಲಿ ಈ ಚಿತ್ರ 237 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ನಟಿ ಅದಾ ಶರ್ಮಾ ಅವರಿಗೆ ಈ ಸಿನಿಮಾದಿಂದ ದೊಡ್ಡ ಯಶಸ್ಸು ಸಿಕ್ಕಿದೆ. ಈ ಸಿನಿಮಾ ಸೂಪರ್ ಹಿಟ್ ಆದ ಬಳಿಕ ನಿರ್ದೇಶಕ ಸುದೀಪ್ತೋ ಸೇನ್ ಅವರಿಗೆ ಬೇಡಿಕೆ ಹೆಚ್ಚಾಗಿದೆ. ಅವರು ನಿರ್ದೇಶಿಸಲಿರುವ ಹೊಸ ಸಿನಿಮಾ ಯಾವುದು ಎಂಬ ಬಗ್ಗೆ ಎಲ್ಲರಿಗೂ ಕುತೂಹಲ ಇತ್ತು. ಅದಕ್ಕೆ ಈಗ ಉತ್ತರ ಸಿಕ್ಕಿದೆ. ಈ ಬಾರಿ ಸುದೀಪ್ತೋ ಸೇನ್ ಅವರು ಬಯೋಪಿಕ್ ಆರಿಸಿಕೊಂಡಿದ್ದಾರೆ. ಭಾರತದ ಯಶಸ್ವಿ ಉದ್ಯಮಿಗಳಲ್ಲಿ ಒಬ್ಬರಾದ ಸುಬ್ರತಾ ರಾಯ್ (Subrata Roy) ಜೀವನದ ಕುರಿತು ಸಿನಿಮಾ ಮಾಡಲು ಅವರು ತೀರ್ಮಾನಿಸಿದ್ದಾರೆ.
ಎಲ್ಲ ಉದ್ಯಮಿಗಳ ಬದುಕಿನಲ್ಲೂ ಏಳು-ಬೀಳುಗಳು ಇರುತ್ತವೆ. ಸಹರಾ ಕಂಪನಿಯ ಸಂಸ್ಥಾಪಕರಾದ ಸುಬ್ರತಾ ರಾಯ್ ಬದುಕು ಕೂಡ ಅದಕ್ಕೆ ಹೊರತಾಗಿಲ್ಲ. ಉದ್ಯಮದಲ್ಲಿ ಯಶಸ್ವಿಯಾಗಿದ್ದು ಒಂದು ಕಡೆಯಾದರೆ, ಅನೇಕ ಆರೋಪಗಳನ್ನು ಎದುರಿಸಿದ್ದು ಮತ್ತೊಂದು ಕಡೆ. ಅವರ ಜೀವನದ ಕಥೆಯನ್ನು ಈಗ ಸಿನಿಮಾ ಮಾಡಲಾಗುತ್ತಿದೆ. ಈ ಚಿತ್ರಕ್ಕೆ ‘ಸಹರಾಶ್ರೀ’ ಎಂದು ಶೀರ್ಷಿಕೆ ಇಡಲಾಗಿದೆ. ಈ ಸಿನಿಮಾದ ಮೋಷನ್ ಪೋಸ್ಟರ್ ಕೂಡ ಬಿಡುಗಡೆ ಆಗಿದೆ.
ಇದನ್ನೂ ಓದಿ: Sudipto Sen: ಆಸ್ಪತ್ರೆ ಸೇರಿದ್ದ ‘ದಿ ಕೇರಳ ಸ್ಟೋರಿ’ ನಿರ್ದೇಶಕ ಸುದೀಪ್ತೋ ಸೇನ್ ಆರೋಗ್ಯ ಈಗ ಹೇಗಿದೆ?
ಸುದೀಪ್ತೋ ಸೇನ್ ನಿರ್ದೇಶಿಸಿದ ‘ದಿ ಕೇರಳ ಸ್ಟೋರಿ’ ಸಿನಿಮಾ ಸಾಕಷ್ಟು ವಿವಾದಕ್ಕೆ ಕಾರಣ ಆಗಿತ್ತು. ಈಗ ಅವರು ಕೈಗೆತ್ತಿಕೊಂಡಿರುವ ಹೊಸ ಸಿನಿಮಾದ ಕಥೆಯಲ್ಲೂ ಒಂದಷ್ಟು ವಿವಾದ ಇದೆ. ಸುಬ್ರತಾ ರಾಯ್ ಜೀವನವನ್ನು ಅವರು ಹೇಗೆ ತೋರಿಸಲಿದ್ದಾರೆ ಎಂಬ ಪ್ರಶ್ನೆ ಮೂಡಿದೆ. ಸುಬ್ರತಾ ರಾಯ್ ಅವರನ್ನು ಸಹರಾಶ್ರೀ ಎಂದು ಕರೆಯಲಾಗುತ್ತಿತ್ತು. ಹಾಗಾಗಿ ಅದೇ ಹೆಸರನ್ನು ಈ ಸಿನಿಮಾಗೆ ಶೀರ್ಷಿಕೆಯಾಗಿಸಲಾಗಿದೆ. ಆದರೆ ಈ ಸಿನಿಮಾದಲ್ಲಿ ಯಾರು ಮುಖ್ಯ ಭೂಮಿಕೆ ನಿಭಾಯಿಸುತ್ತಾರೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಚಿತ್ರರಂಗದ ಟಾಪ್ ನಟರೊಬ್ಬರು ಸುಬ್ರತಾ ರಾಯ್ ಪಾತ್ರಕ್ಕೆ ಜೀವ ತುಂಬಲಿದ್ದಾರೆ ಎಂದು ಹೇಳಲಾಗುತ್ತಿದೆ.
ಅಂದಹಾಗೆ, ‘ಸಹರಾಶ್ರೀ’ ಸಿನಿಮಾಗೆ ಬಂಡವಾಳ ಹೂಡಲಿರುವುದು ನಿರ್ಮಾಪಕ ಸಂದೀಪ್ ಸಿಂಗ್. ಪ್ರಸ್ತುತ ಅವರು ‘ಸ್ವಾತಂತ್ರವೀರ್ ಸಾವರ್ಕರ್’ ಹಾಗೂ ‘ಮೈ ಅಟಲ್ ಹೂ’ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಆ ಸಿನಿಮಾಗಳು ಕೂಡ ಬಯೋಪಿಕ್ ಎಂಬುದು ಗಮನಿಸಬೇಕಾದ ವಿಷಯ. ಸುಬ್ರತಾ ರಾಯ್ ಜೀವನದ ವಿವರಗಳನ್ನು ತಿಳಿದುಕೊಳ್ಳಲು ಜನರಿಗೆ ಆಸಕ್ತಿ ಇದೆ. ಹಾಗಾಗಿ ಇದನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿದೆ. ಹಿಂದಿ, ಬೆಂಗಾಲಿ, ಕನ್ನಡ, ಮಲಯಾಳಂ, ತಮಿಳು, ತೆಲುಗು ಭಾಷೆಗಳಲ್ಲಿ ಈ ಸಿನಿಮಾ ಮೂಡಿಬರಲಿದೆ. ಎ.ಆರ್. ರೆಹಮಾನ್ ಅವರು ಸಂಗೀತ ನೀಡಲಿದ್ದು, ಗುಲ್ಜಾರ್ ಸಾಹಿತ್ಯ ಬರೆಯಲಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.