
ಖ್ಯಾತ ಬಾಲಿವುಡ್ ನಿರ್ದೇಶಕ ಸಂಜಯ್ ಗುಪ್ತಾ ಅವರ ಅಕಾಲಿಕ ನಿಧನವು ಅವರ ಕುಟುಂಬಕ್ಕೆ ಮತ್ತು ಚಿತ್ರರಂಗದ ಆತ್ಮೀಯರಿಗೆ ತೀವ್ರ ಆಘಾತವನ್ನುಂಟುಮಾಡಿದೆ. ಪ್ರತಿಯೊಬ್ಬರೂ ಈ ದುಃಖದ ವಾತಾವರಣದಲ್ಲಿದ್ದಾಗ, ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ನೆಟ್ಟಿಗರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ನಟ ಹೃತಿಕ್ ರೋಷನ್ ಅವರ ತಂದೆ ಹಾಗೂ ಹಿರಿಯ ನಿರ್ಮಾಪಕ-ನಿರ್ದೇಶಕ ರಾಕೇಶ್ ರೋಷನ್ ಅವರು ಅಂತ್ಯಕ್ರಿಯಲ್ಲಿ ನಗುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ನೆಟ್ಟಿಗರು ಅವರನ್ನು ತೀವ್ರವಾಗಿ ಟ್ರೋಲ್ ಮಾಡುತ್ತಿದ್ದಾರೆ.
ಸಂಜಯ್ ಗುಪ್ತಾ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ರಾಕೇಶ್ ರೋಷನ್ ಅವರು ಸಾಂತ್ವನ ಹೇಳಲು ಅವರ ನಿವಾಸಕ್ಕೆ ಆಗಮಿಸಿದ್ದರು. ಆದರೆ ಅಲ್ಲಿ ನೆರೆದಿದ್ದ ವೇಳೆಯಲ್ಲಿ ನಡೆದ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದಕ್ಕೆ ಕಮೆಂಟ್ ಮಾಡಿದ ಅನೇಕರು ರಾಕೇಶ್ ರೋಷನ್ ಅವರ ವರ್ತನೆ ಕಂಡು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
‘ಇನ್ಸ್ಟಂಟ್ ಬಾಲಿವುಡ್’ ಹಂಚಿಕೊಂಡಿರುವ ವಿಡಿಯೋವೊಂದರಲ್ಲಿ, ಸಂಜಯ್ ಗುಪ್ತಾ ಅವರ ಅಗಲಿಕೆಯಿಂದ ಭಾವುಕರಾಗಿ ಕಣ್ಣೀರು ಹಾಕುತ್ತಿದ್ದ ನಿರ್ದೇಶಕ ಮಿಲಾಪ್ ಝವೇರಿ ಅವರ ಪಕ್ಕದಲ್ಲೇ ರಾಕೇಶ್ ರೋಷನ್ ನಿಂತಿರುವುದು ಕಂಡುಬಂದಿದೆ. ಮಿಲಾಪ್ ತಮ್ಮ ಗುರುವನ್ನು ನೆನೆದು ಕಣ್ಣೀರಿಡುತ್ತಿದ್ದರೆ, ಇನ್ನೊಂದೆಡೆ ರಾಕೇಶ್ ರೋಷನ್ ಅವರು ಚಿತ್ರರಂಗದ ಮತ್ತೊಬ್ಬ ಹಿರಿಯ ವ್ಯಕ್ತಿಯೊಂದಿಗೆ ಮಾತಡುತ್ತಾ ನಗುತ್ತಿರುವುದು ಸೆರೆಯಾಗಿದೆ.
57ನೇ ವಯಸ್ಸಿನಲ್ಲಿ ಮನೆಯಲ್ಲಿ ಆಕಸ್ಮಿಕವಾಗಿ ಬಿದ್ದು ನಿಧನರಾದ ಸಂಜಯ್ ಗುಪ್ತಾ ಅವರ ಅಂತಿಮ ದರ್ಶನದ ವೇಳೆ ಈ ರೀತಿ ಅಸಂವೇದನಾಶೀಲವಾಗಿ ವರ್ತಿಸಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ರಾಕೇಶ್ ರೋಷನ್ ವಿರುದ್ಧ ಕಠಿಣ ವಿಮರ್ಶೆಗಳು ವ್ಯಕ್ತವಾಗುತ್ತಿವೆ. ‘ಒಬ್ಬ ಕಣ್ಣೀರಿಡುತ್ತಿದ್ದಾನೆ, ಇನ್ನೊಬ್ಬ ನಗುತ್ತಿದ್ದಾನೆ, ಎಂತಹ ಕಾಲ ಬಂತು’ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ನಿರ್ದೇಶಕ ಸಂಜಯ್ ಗುಪ್ತಾ ನಿಧನ: ‘ಕಾಬಿಲ್’ ಸಿನಿಮಾ ನೆನೆದು ಹೃತಿಕ್ ರೋಷನ್ ಶ್ರದ್ಧಾಂಜಲಿ
‘ಇದು ಸಾಂತ್ವನ ಹೇಳುವ ಜಾಗ. ನಗಲು ಇಲ್ಲಿಗೇಕೆ ಬಂದಿದ್ದೀರಿ’ ಎಂದು ರಾಕೇಶ್ ರೋಷನ್ ಅವರನ್ನು ಕಮೆಂಟ್ ಮೂಲಕ ಜನರು ಪ್ರಶ್ನಿಸಿದ್ದಾರೆ. ‘ಅಂತ್ಯಕ್ರಿಯೆಯ ವಾತಾವರಣದಲ್ಲಿ ಯಾರಾದರೂ ನಗುತ್ತಾರೆಯೇ? ಇದು ಕಾಮಿಡಿ ಶೋ ಅಂದುಕೊಂಡಿದ್ದಾರಾ? ಕಲಿಯುಗದ ಪರಮಾವಧಿ ಇದು’ ಎಂದು ಹಲವರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.