ನಟಿ ರಾಖಿ ಸಾವಂತ್ (Rakhi Sawant) ವಿವಾದಿಂದಲೇ ಸದಾ ಸುದ್ದಿಯಲ್ಲಿರುತ್ತಾರೆ. ಪತಿ ಆದಿಲ್ ಖಾನ್ ದುರಾನಿಯೊಂದಿಗೆ ಭಾರಿ ಗಲಾಟೆ ಮಾಡಿಕೊಂಡಿದ್ದ ಅವರು ಈಗ ಮತ್ತೆ ಅದೇ ಕಾರಣದಿಂದ ಚರ್ಚೆಗೆ ಒಳಗಾಗುತ್ತಿದ್ದಾರೆ. ಆದಿಲ್ ಖಾನ್ (Adil Khan) ಜೊತೆಗಿನ ಕಿರಿಕ್ ತಿಳಿಯಾಗುವುದಕ್ಕೂ ಮುನ್ನವೇ ಅವರು ಇಸ್ಲಾಂನ ಪವಿತ್ರ ಸ್ಥಳ ಮೆಕ್ಕಾಗೆ ಇತ್ತೀಚೆಗೆ ಭೇಟಿ ನೀಡಿದ್ದರು. ಇಂದು (ಆಗಸ್ಟ್ 31) ಮೆಕ್ಕಾದಿಂದ (Mecca) ವಾಪಸ್ಸಾಗಿದ್ದಾರೆ. ಈ ವೇಳೆ ರಾಖಿ ಸಾವಂತ್ ಬಿಳಿ ಬಣ್ಣದ ಬುರ್ಕಾ ಧರಿಸಿದ್ದು, ಮುಂಬೈನಲ್ಲಿ ಫ್ಯಾನ್ಸ್ ಅವರನ್ನು ಸ್ವಾಗತಿಸಿದ್ದಾರೆ. ಈ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ರಾಖಿ ಮಾತಾನಾಡಿದ್ದಾರೆ. ಮೆಕ್ಕಾದ ಉಮ್ರಾ ಯಾತ್ರೆಯ ಬಗ್ಗೆ ಅನುಭವವನ್ನು ತಿಳಿಸಿದ್ದಾರೆ. ಈ ವೇಳೆ ತಮ್ಮನ್ನು ರಾಖಿ ಎಂದು ಕರೆಯುವ ಬದಲು ಫಾತಿಮಾ ಅಂತ ಕರೆಯಬೇಕು ಅವರು ಹೇಳಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ರಾಖಿ ಸಾವಂತ್ ಅವರು ಅಧಿಕೃತ ದಾಖಲೆಗಳಲ್ಲೂ ತಮ್ಮ ಹೆಸರು ಬದಲಾಯಿಸಿಕೊಂಡಿದ್ದಾರಾ? ಮಾಧ್ಯಮದವರಿಂದ ಈ ಪ್ರಶ್ನೆ ಎದುರಾಯಿತು. ಅದಕ್ಕೆ ಉತ್ತರಿಸಿದ ರಾಖಿ, ‘ದೇವರಿಗೆ ನಾನು ಇರುವ ಹಾಗೆಯೇ ಇಷ್ಟ. ಅದಕ್ಕಾಗಿ ಯಾವುದೇ ದಾಖಲೆಗಳಲ್ಲಿ ಹೆಸರನ್ನು ಬದಲಾಯಿಸುವ ಅವಶ್ಯಕತೆಯಿಲ್ಲ’ ಎಂದಿದ್ದಾರೆ. ಆದರೆ ಇನ್ಮುಂದೆ ಫಾತಿಮಾ ಎಂದು ಕರೆಯಿರಿ ಎಂದಿದ್ದಾರೆ. ದಿಢೀರನೇ ಅವರು ಹೆಸರು ಬದಲಿಸಿಕೊಂಡಿರುವುದು ನೆಟ್ಟಿಗರಿಗೆ ಅಚ್ಚರಿ ಮೂಡಿಸಿದೆ. ಈ ಸಂದರ್ಭದಲ್ಲಿ ಅಭಿಮಾನಿಯೊಬ್ಬ ಹಾರ ಹಾಕಲು ಬಂದಾಗ ಆತನನ್ನು ತಡೆದಿದ್ದಾರೆ. ಹಾರವನ್ನು ತೆಗೆದುಕೊಂಡು, ನಂತರ ಅದೇ ಹಾರವನ್ನು ಮಹಿಳೆಯೊಬ್ಬರಿಂದ ಹಾಕಿಸಿಕೊಂಡಿದ್ದಾರೆ.
ಮೆಕ್ಕಾ ಭೇಟಿಯ ಹಲವು ವಿಡಿಯೋಗಳನ್ನು ರಾಖಿ ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರು ದೇವರ ಎದುರು ನಿಂತು ಅಳುತ್ತಿರುವ ಫೋಟೋ ಕೂಡ ವೈರಲ್ ಆಗಿದೆ. ಇದೆಲ್ಲಾ ಕೇವಲ ಪ್ರಚಾರಕ್ಕಾಗಿ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಈ ಮೊದಲು ಅವರು ನಮಾಜ್ ಮಾಡುವ ವಿಡಿಯೋ ಒಂದಕ್ಕೂ ಟ್ರೋಲ್ ಆಗಿದ್ದರು. ಹಾಗಂತ ಅವರಿಗೆ ಟ್ರೋಲ್ ಕಾಟ ಹೊಸದೇನೂ ಅಲ್ಲ. ರಾಖಿ ಮದುವೆಯ ಸಂದರ್ಭದಲ್ಲಿ ಇಸ್ಲಾಂಗೆ ಮತಾಂತರವಾಗಿದ್ದರು. ನಂತರ ಆದಿಲ್ ದೌರ್ಜನ್ಯ ಎಸಗಿದ್ದಾರೆ ಎಂದು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು. ಇವರು ಫೆಬ್ರವರಿಯಲ್ಲಿ ಅತ್ಯಾಚಾರದ ಆರೋಪದ ಮೇಲೆ ಬಂಧಿತರಾಗಿದ್ದರು. ನಂತರ ಸಾಮಾಜಿಕ ಜಾಲತಾಣದಲ್ಲಿ ಒಬ್ಬರ ಮೇಲೊಬ್ಬರು ಕೆಸರೆರೆಚಾಡಿಕೊಂಡಿದ್ದರು.
ಇದನ್ನೂ ಓದಿ: 50 ಲಕ್ಷ ರೂಪಾಯಿಗೆ ರಾಖಿ ಸಾವಂತ್ ಬೆತ್ತಲೆ ವಿಡಿಯೋ ಮಾರಾಟ ಮಾಡಿದ ಗಂಡ? ವಿಚ್ಛೇದನಕ್ಕೆ ನಟಿ ನಿರ್ಧಾರ
ರಾಖಿ ಸಾವಂತ್ ಅವರು 1997ರಲ್ಲಿ ‘ಅಗ್ನಿಚಕ್ರ’ ಸಿನಿಮಾದ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದರು. ‘ಬಿಗ್ ಬಾಸ್ ಸೀಸನ್ 1’ ಹಾಗೂ ಸೀಸನ್ 14ರಲ್ಲಿ ಸ್ಪರ್ಧಿಯಾಗಿದ್ದರು. ಡಾನ್ಸರ್, ಮಾಡೆಲ್, ನಟಿಯಾಗಿ ಅವರು ಕನ್ನಡ, ಮರಾಠಿ, ಒಡಿಯಾ, ತೆಲುಗು, ತಮಿಳು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. 2014ರ ಲೋಕಸಭಾ ಚುನಾವಣೆಯಲ್ಲಿಯೂ ಸ್ಪರ್ಧಿಸಿದ್ದರು. ಸಿನಿಮಾಗಿಂತ ವಿವಾದದ ಮೂಲಕವೇ ರಾಖಿ ಹೆಚ್ಚು ಪರಿಚಿತರಾಗಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.