ರಾಮಾಯಣ ಹಾಗೂ ಮಹಾಭಾರತವನ್ನು ಆಧರಿಸಿ ಈಗಾಗಲೇ ಸಾಕಷ್ಟು ಧಾರಾವಾಹಿಗಳು ಹಾಗೂ ಸಿನಿಮಾಗಳು ಸಿದ್ಧವಾಗಿವೆ. ಈ ಮಹಾಕಾವ್ಯಗಳ ಕಥೆಯ ಒಂದೆಳೆ ಇಟ್ಟುಕೊಂಡು ಸಿನಿಮಾ ಸಿದ್ಧಪಡಿಸಿದ ಉದಾಹರಣೆಯೂ ಇದೆ. ಇತ್ತೀಚಿನ ವರ್ಷಗಳಲ್ಲಿ ಸ್ಟಾರ್ ನಟರನ್ನು ಇಟ್ಟುಕೊಂಡು ಈ ರೀತಿಯ ಸಿನಿಮಾಗಳನ್ನು ಮಾಡಲಾಗುತ್ತಿದೆ. ಈಗ ಬಾಲಿವುಡ್ ಅಂಗಳದಲ್ಲಿ ಅಂಥದ್ದೇ ಸಿನಿಮಾ ರೆಡಿ ಆಗುತ್ತಿದೆ. ಇದರ ಬಜೆಟ್ ಬರೋಬ್ಬರಿ 750 ಕೋಟಿ ರೂಪಾಯಿ ಅನ್ನೋದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.
ನಿತೇಶ್ ತಿವಾರಿ ಅವರು ರಾಮಾಯಣ ಕಥೆ ಆಧರಿಸಿ ಸಿನಿಮಾ ನಿರ್ದೇಶನ ಮಾಡೋಕೆ ರೆಡಿ ಆಗಿದ್ದಾರೆ. ಮಧು ಮಂತೆನಾ ಅವರು ಇದನ್ನು ನಿರ್ಮಾಣ ಮಾಡುತ್ತಿದ್ದಾರೆ. ಮೂರು ಪಾರ್ಟ್ಗಳಲ್ಲಿ ಈ ಸಿನಿಮಾ ತೆರೆಗೆ ಬರುತ್ತಿದೆ. ಈ ಚಿತ್ರದ ಬಜೆಟ್ 750 ಕೋಟಿ ಮೀರಲಿದೆ ಎನ್ನಲಾಗಿದೆ.
ಹೃತಿಕ್ ರೋಷನ್ ಹಾಗೂ ರಣಬೀರ್ ಕಪೂರ್ಗೆ ಬಾಲಿವುಡ್ನಲ್ಲಿ ಭಾರೀ ಬೇಡಿಕೆ ಇದೆ. ಇವರು ದಕ್ಷಿಣ ಭಾರತದ ಸಿನಿಪ್ರಿಯರಿಗೂ ಪರಿಚಯ. ರಾಮಾಯಣ ಸಿನಿಮಾ ಹಿಂದಿ ಮಾತ್ರವಲ್ಲದೆ, ದಕ್ಷಿಣ ಭಾರತದ ಭಾಷೆಗಳಿಗೂ ಡಬ್ ಆಗಿ ತೆರೆಕಾಣಲಿದೆ. ಹೀಗಾಗಿ, ಹೃತಿಕ್ ಹಾಗೂ ರಣಬೀರ್ ಅವರನ್ನು ಅನುಕ್ರಮವಾಗಿ ರಾವಣ ಮತ್ತು ರಾಮನ ಪಾತ್ರಕ್ಕೆ ಆಯ್ಕೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಇದರ ಜತೆಗೆ ಕೆಲ ದಕ್ಷಿಣ ಭಾರತದ ಕಲಾವಿದರೂ ಈ ಸಿನಿಮಾದಲ್ಲಿ ನಟಿಸುವ ಸಾಧ್ಯತೆ ಇದೆ.
ಹಾಗಾದರೆ ಈ ಸಿನಿಮಾದ ಬಜೆಟ್ ಇಷ್ಟೊಂದು ಹೆಚ್ಚಾಗಲು ಕಾರಣವೇನು? ಆ ಪ್ರಶ್ನೆಗೂ ಉತ್ತರವಿದೆ. ಈ ಸಿನಿಮಾದಲ್ಲಿ ರಾಮನ ಪಾತ್ರ ಮಾಡುತ್ತಿರುವ ರಣಬೀರ್ಗೆ ಹಾಗೂ ರಾವಣನ ಪಾತ್ರ ಮಾಡುತ್ತಿರುವ ಹೃತಿಕ್ಗೆ ಚಿತ್ರತಂಡ ಬರೋಬ್ಬರಿ 75 ಕೋಟಿ ರೂಪಾಯಿ ಸಂಭಾವನೆ ಆಫರ್ ಮಾಡಿದೆ. ಇನ್ನು, ಅದ್ದೂರಿ ಸೆಟ್ ಹಾಗೂ ಗ್ರಾಫಿಕ್ ಕೆಲಸಗಳಿಗೆ ಹೆಚ್ಚಿನ ಹಣ ಹಿಡಿಯಲಿದೆ. ಈ ಕಾರಣಕ್ಕೆ ಸಿನಿಮಾ ಬಜೆಟ್ ಈ ಮಟ್ಟಕ್ಕೆ ಏರಿಕೆ ಆಗಿದೆ.
ರಾಮಾಯಣ ಎಂದರೆ ಅಲ್ಲಿ ಸೀತೆಯ ಪಾತ್ರ ಬಹಳ ಮಹತ್ವ ಪಡೆದುಕೊಳ್ಳಲಿದೆ. ಈ ಕಾರಣಕ್ಕೆ ಈ ಪಾತ್ರಕ್ಕಾಗಿ ನಿರ್ಮಾಪಕರು ಹುಡುಕಾಟ ನಡೆಸಿದ್ದಾರೆ. ಇದರ ಜತೆಗೆ ಇನ್ನೂ ಕೆಲ ಪ್ರಮುಖ ಪಾತ್ರಗಳಿಗೆ ಆಯ್ಕೆ ಪ್ರಕ್ರಿಯೆ ನಡೆಯಬೇಕಿದೆ.
ರಾಮಾಯಣದ ಕಥೆ ಆಧರಿಸಿ ತೆಲುಗಿನಲ್ಲಿ ಆದಿಪುರುಷ್ ಸಿನಿಮಾ ತೆರೆಗೆ ಬರುತ್ತಿದೆ. ಈ ಚಿತ್ರದಲ್ಲಿ ರಾಮನ ಪಾತ್ರದಲ್ಲಿ ಪ್ರಭಾಸ್ ಕಾಣಿಸಿಕೊಂಡಿದ್ದಾರೆ. ರಾವಣನ ಪಾತ್ರಕ್ಕೆ ಸೈಫ್ ಅಲಿ ಖಾನ್ ಬಣ್ಣ ಹಚ್ಚಿದ್ದಾರೆ.
ಇದನ್ನೂ ಓದಿ: Kareena Kapoor: ಸೀತೆಯ ಪಾತ್ರಕ್ಕೆ 12 ಕೋಟಿ ಸಂಭಾವನೆ ಕೇಳಿದ ಸುದ್ದಿಗೆ ತಲೆ ಅಲ್ಲಾಡಿಸಿದ ಕರೀನಾ; ಏನಿದರ ಅರ್ಥ?
ಸೀತೆ ಪಾತ್ರ ಮಾಡಲು ಕಂಗನಾಗೆ 32 ಕೋಟಿ ರೂ. ಸಂಬಳ? ಇದು ದೊಡ್ಡ ಪ್ರಮಾದ ಎಂದ ಕಮಾಲ್ ಖಾನ್