ಬೆಟ್ಟಿಂಗ್ ಆ್ಯಪ್ ಪ್ರಕರಣ: ರಣ್​ಬೀರ್ ಕಪೂರ್​ಗೂ ಬಂತು ಇಡಿ ಸಮನ್ಸ್

|

Updated on: Oct 04, 2023 | 4:37 PM

Ranbir Kapoor: ಮಹದೇವ್ ಆನ್​ಲೈನ್ ಬೆಟ್ಟಿಂಗ್ ಅಪ್ಲಿಕೇಶನ್ ಪ್ರಕರಣದಲ್ಲಿ ಬಾಲಿವುಡ್ ಸ್ಟಾರ್ ನಟ ರಣ್​ಬೀರ್ ಕಪೂರ್ ಹೆಸರು ಕೇಳಿ ಬಂದಿದೆ. ರಣ್​ಬೀರ್​ಗೆ ಇಡಿ ಸಮನ್ಸ್ ಜಾರಿ ಮಾಡಿದ್ದು ಶೀಘ್ರವೇ ಉತ್ತರಿಸುವಂತೆ ಸೂಚಿಸಿದೆ.

ಬೆಟ್ಟಿಂಗ್ ಆ್ಯಪ್ ಪ್ರಕರಣ: ರಣ್​ಬೀರ್ ಕಪೂರ್​ಗೂ ಬಂತು ಇಡಿ ಸಮನ್ಸ್
ರಣ್​ಬೀರ್ ಕಪೂರ್
Follow us on

ಕಳೆದ ತಿಂಗಳ ಮಧ್ಯದಲ್ಲಿ ಬಾಲಿವುಡ್​ನ (Bollywood) ಕೆಲವು ನಟ-ನಟಿಯರು, ಸಂಗೀತಗಾರರಿಗೆ ಜಾರಿ ನಿರ್ದೇಶನಾಲಯವು (ಇಡಿ) ಬೆಟ್ಟಿಂಗ್ ಆಪ್ ಒಂದರ ಪ್ರಕರಣ ಸಂಬಂಧ ದಾಳಿ ನಡೆಸಿ ನೊಟೀಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಹೇಳಿತ್ತು. ಇದೀಗ ಅದೇ ಪ್ರಕರಣದಲ್ಲಿ ಬಾಲಿವುಡ್​ನ ಸ್ಟಾರ್ ನಟ ರಣ್​ಬೀರ್ ಕಪೂರ್​ಗೂ ಸಮನ್ಸ್​ ಜಾರಿ ಮಾಡಿದ್ದು, ಉತ್ತರ ನೀಡುವಂತೆ ಸೂಚಿಸಿದೆ.

ಮಹದೇವ್ ಆನ್​ಲೈನ್ ಬೆಟ್ಟಿಂಗ್ ಅಪ್ಲಿಕೇಶನ್​ ಸಂಬಂಧ ಇಡಿಯು ತನಿಖೆ ನಡೆಸುತ್ತಿದ್ದು, ಬೆಟ್ಟಿಂಗ್​ ಆಪ್​ನ ಸಹ ಮಾಲೀಕ ಸೌರಭ್ ಚಂದ್ರಕರ್ ವಿವಾಹದಲ್ಲಿ ಭಾಗಿಯಾಗಿದ್ದ ಬಾಲಿವುಡ್​ನ ನಟ-ನಟಿಯರು, ಸಂಗೀತಗಾರರ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿತ್ತು. ಇದೇ ಪ್ರಕರಣದ ತನಿಖೆಯನ್ನು ಇಡಿ ಸಂಸ್ಥೆ ಚುರುಕುಗೊಳಿಸಿತ್ತು, ತನಿಖೆಯ ಭಾಗವಾಗಿ ನಟ ರಣ್​ಬೀರ್ ಕಪೂರ್​ಗೂ ನೊಟೀಸ್ ನೀಡಲಾಗಿದೆ. ಅಕ್ಟೋಬರ್ 6 ರ ಒಳಗಾಗಿ ಸಮನ್​ಗೆ ಉತ್ತರಿಸುವಂತೆ ಸೂಚಿಸಲಾಗಿದೆ.

ಇದನ್ನೂ ಓದಿ: ಹಲವು ಬಾಲಿವುಡ್ ನಟರ ಮೇಲೆ ಇಡಿ ದಾಳಿ: ದುಬೈ ಮದುವೆಯ ಲಿಂಕ್

ಮಹದೇವ್ ಆನ್​ಲೈನ್ ಬೆಟ್ಟಿಂಗ್ ಅಪ್ಲಿಕೇಶನ್​ ಸಹ ಮಾಲೀಕ ಸೌರಭ್ ಚಂದ್ರಕರ್ ಮದುವೆ ಕೆಲವು ತಿಂಗಳ ಹಿಂದೆ ದುಬೈನಲ್ಲಿ ನಡೆದಿತ್ತು. ಈ ಮದುವೆಗೆ ಸುಮಾರು 200 ಕೋಟಿ ಖರ್ಚು ಮಾಡಿದ್ದಾರೆ ಎಂದು ಇಡಿ ಅಂದಾಜಿಸಿದೆ. ಇದರಲ್ಲಿ 140 ಕೋಟಿ ಹಣವನ್ನು ಹವಾಲ ರೂಪದಲ್ಲಿ ಮುಂಬೈನ ಇವೆಂಟ್ ಮ್ಯಾನೇಜ್​ಮೆಂಟ್ ಸಂಸ್ಥೆಯೊಂದಕ್ಕೆ ನೀಡಲಾಗಿದೆಯಂತೆ. ಈ ಇವೆಂಟ್ ಮ್ಯಾನೇಜ್​ಮೆಂಟ್ ಸಂಸ್ಥೆಯ ಮೂಲಕವೇ ಬಾಲಿವುಡ್ ನಟ-ನಟಿಯರು, ಗಾಯಕರಿಗೆ ಸಂಭಾವನೆಗಳನ್ನು ತಲುಪಿಸಲಾಗಿದೆ.

ಇದನ್ನೂ ಓದಿ:ಅನಿಮಲ್ ಸಿನಿಮಾದಲ್ಲಿ ರಣ್​ಬೀರ್ ಕಪೂರ್ ಹಲವು ಅವತಾರಗಳು

ಮದುವೆಯಲ್ಲಿ ಭಾಗಿಯಾಗಿದ್ದ ಸಿನಿಮಾ ನಟರು, ಮದುವೆಯಲ್ಲಿ ಮನೊರಂಜನಾ ಕಾರ್ಯಕ್ರಮಗಳನ್ನು ನೀಡಿದ ಜನಪ್ರಿಯ ಸಂಗೀತಗಾರರು, ಹಾಸ್ಯ ಕಲಾವಿದರು, ನಟ-ನಟಿಯರ ಮನೆಗಳ ಮೇಲೆ ಇಡಿ ದಾಳಿ ನಡೆಸಿದೆ. ಈ ಮದುವೆಯಲ್ಲಿ ಬಾಲಿವುಡ್ ನಟರಾದ ಟೈಗರ್ ಶ್ರಾಫ್, ಸನ್ನಿ ಲಿಯೋನಿ, ಕೃತಿ ಕರಬಂಧ, ನುಸ್ರತ್ ಬರೂಚಾ, ಭಾಗ್ಯಶ್ರೀ, ಕಮಿಡಿಯನ್​ಗಳಾದ ಕೃಷ್ಣ ಅಭಿಷೇಕ್, ಭಾರತಿ, ಗಾಯಕರಾದ ನೇಹಾ ಕಕ್ಕಡ್, ಅತಿಫ್ ಅಸ್ಲಂ, ರಾಹತ್ ಫತೇ ಅಲಿ ಖಾನ್, ವಿಶಾಲ್ ದದ್ಲಾನಿ, ಅಲಿ ಅಸ್ಗರ್ ಇನ್ನೂ ಕೆಲವರ ಮೇಲೆ ಇಡಿ ದಾಳಿ ನಡೆಸಿತ್ತು. ಇದೀಗ ಈ ಪ್ರಕರಣ ರಣ್​ಬೀರ್ ಕಪೂರ್​ಗೂ ಅಂಟಿಕೊಂಡಿದೆ. ಆದರೆ ರಣ್​ಬೀರ್ ಕಪೂರ್ ಈ ಮದುವೆಯಲ್ಲಿ ಭಾಗಿಯಾಗಿರಲಿಲ್ಲ ಎನ್ನಲಾಗುತ್ತಿದೆ.

ದುಬೈನಲ್ಲಿ ನಡೆದ ಮಹದೇವ್ ಆನ್​ಲೈನ್ ಬೆಟ್ಟಿಂಗ್ ಅಪ್ಲಿಕೇಶನ್​ ಸಹ ಮಾಲೀಕ ಸೌರಭ್ ಚಂದ್ರಕರ್ ಮದುವೆಗೆ ತೆರಳಲು ನಾಗಪುರದಿಂದ ಹಲವು ಪ್ರೈವೇಟ್ ಜೆಟ್​ಗಳನ್ನು ಬುಕ್ ಮಾಡಲಾಗಿತ್ತಂತೆ. ದುಬೈನಲ್ಲಿ ಹೋಟೆಲ್​ಗಳಿಗೆಂದೆ 40 ಕೋಟಿ ರೂಪಾಯಿ ಖರ್ಚು ಮಾಡಲಾಗಿತ್ತಂತೆ. ಈ 40 ಕೋಟಿ ಹಣದ ಹೊರತಾಗಿ ಮದುವೆಗೆ ಖರ್ಚು ಮಾಡಿದ ನೂರಾರು ಕೋಟಿ ಹಣವನ್ನು ಹವಾಲಾ ಮೂಲಕವೇ ನೀಡಲಾಗಿತ್ತು ಎಂದು ಇಡಿಯ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

ಸೌರಭ್ ಚಂದ್ರಕರ್ ಹಾಗೂ ರವಿ ಉಪ್ಪಾಲ್ ಅವರುಗಳು ಮಹದೇವ್ ಆನ್​ಲೈನ್ ಬೆಟ್ಟಿಂಗ್ ಅಪ್ಲಿಕೇಶನ್ ಅನ್ನು ದುಬೈನಲ್ಲಿದ್ದುಕೊಂಡು ನಡೆಸುತ್ತಿದ್ದರಂತೆ. ಹೊಸ ಬಳಕೆದಾರರನ್ನು ತಲುಪಲು, ಹಣ ವರ್ಗಾವಣೆ ಇನ್ನಿತರೆ ಕಾರ್ಯಗಳಿಗೆ ಲೇಯರ್ಡ್ ವೆಬ್ ಅನ್ನು ಬಳಸುತ್ತಿದ್ದರು. ಭಾರತದಲ್ಲಿಯೂ ಹಲವಾರು ಏಜೆಂಟ್​ಗಳನ್ನು ಇವರು ನೇಮಕ ಮಾಡಿಕೊಂಡಿದ್ದು 70:30ರ ಅನುಪಾತದಲ್ಲಿ ಲಾಭಾಂಶ ಹಂಚಿಕೆ ಮಾಡಿಕೊಳ್ಳುತ್ತಿದ್ದರು ಎಂದಿದೆ ಇಡಿ. ಪ್ರಕರಣಕ್ಕೆ ಸಂಬಂಧಿಸಿದಂತೆ 417 ಕೋಟಿ ಮೌಲ್ಯದ ನಗದು, ಚಿನ್ನ, ಆಸ್ತಿಗಳನ್ನು ಇಡಿ ವಶಪಡಿಸಿಕೊಂಡಿದೆ. ಭೋಪಾಲ್, ಮುಂಬೈ, ಕೊಲ್ಕತ್ತ ಸೇರಿದಂತೆ ಇನ್ನೂ ಕೆಲವು ನಗರಗಳಲ್ಲಿ ರೇಡ್​ಗಳನ್ನು ಇಡಿ ಮಾಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:29 pm, Wed, 4 October 23