
ರಣವೀರ್ ಸಿಂಗ್ (Ranveer Singh) ಅವರು ಬಾಲಿವುಡ್ನಲ್ಲಿ ಬೇಡಿಕೆಯ ಹೀರೋ ಆಗಿ ಗುರುತಿಸಿಕೊಂಡಿದ್ದಾರೆ. ತಮ್ಮ ನೇರ-ನುಡಿಗಳಿಂದ ಅವರು ಹೆಚ್ಚು ಸುದ್ದಿ ಆಗುತ್ತಾರೆ. ಅವರು ಚಿತ್ರ ವಿಚಿತ್ರ ಬಟ್ಟೆ ಧರಿಸುವುದರಲ್ಲಿ ಎತ್ತಿದ ಕೈ. ಸಮಾಜ ಏನೆಂದುಕೊಳ್ಳುತ್ತದೆ ಎಂಬ ಬಗ್ಗೆ ಅವರು ತಲೆಕೆಡಿಸಿಕೊಳ್ಳುವುದಿಲ್ಲ. ಇತ್ತೀಚೆಗೆ ಅವರು ಬಟ್ಟೆ ಹಾಕದೆ ಫೋಟೋಶೂಟ್ ಮಾಡಿಯೂ ಸುದ್ದಿ ಆಗಿದ್ದರು. ಆದರೆ, ಇತ್ತೀಚೆಗೆ ಅವರ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡುತ್ತಿಲ್ಲ. ಈ ವಿಚಾರದಲ್ಲಿ ರಣವೀರ್ ಸಿಂಗ್ ಹಾಗೂ ಅವರ ಅಭಿಮಾನಿಗಳಿಗೆ ಬೇಸರ ಇದೆ. ಡಿಸೆಂಬರ್ 23ರಂದು ರಿಲೀಸ್ ಆದ ‘ಸರ್ಕಸ್’ ಸಿನಿಮಾ (Circus Movie) ಕೂಡ ಸೋತಿದೆ. ಈ ಚಿತ್ರವನ್ನು ಫ್ಯಾನ್ಸ್ ಕರಾಬಾಗಿದೆ ಎಂದು ಬಣ್ಣಿಸಿದ್ದಾರೆ.
‘ಸರ್ಕಸ್’ ಚಿತ್ರವನ್ನು ನಿರ್ದೇಶನ ಮಾಡಿದ್ದು ರೋಹಿತ್ ಶೆಟ್ಟಿ. ಅವರ ನಿರ್ದೇಶನದ ಸಿನಿಮಾಗಳಲ್ಲಿ ಮಸಾಲೆ ಅಂಶ ಜಾಸ್ತಿಯೇ ಇರುತ್ತದೆ. ‘ಗೋಲ್ಮಾಲ್’, ‘ಸಿಂಗಂ’, ‘ಸೂರ್ಯವಂಶಿ’ ಅಂತಹ ಹಿಟ್ ಚಿತ್ರಗಳನ್ನು ನೀಡಿದ ಅವರು ಈ ಬಾರಿ ಮಸಾಲೆ ಹಾಕುವುದರಲ್ಲಿ ಹದ ತಪ್ಪಿದ್ದಾರೆ. ಕಾಮಿಡಿ ಶೈಲಿಯಲ್ಲಿ ಮೂಡಿ ಬಂದ ‘ಸರ್ಕಸ್’ ಸಿನಿಮಾಗೆ ನೆಗೆಟಿವ್ ವಿಮರ್ಶೆ ಸಿಕ್ಕಿದೆ. ಟಿಕೆಟ್ ಬುಕಿಂಗ್ ಆ್ಯಪ್ ಬುಕ್ ಮೈ ಶೋನಲ್ಲಿ ಈ ಚಿತ್ರಕ್ಕೆ 10ಕ್ಕೆ ಕೇವಲ 5.1 ರೇಟಿಂಗ್ ಸಿಕ್ಕಿದೆ. ರಣವೀರ್ ಸಿಂಗ್ ಅವರ ವೃತ್ತಿ ಜೀವನದ ಅತೀ ಕೆಟ್ಟ ಚಿತ್ರಗಳಲ್ಲಿ ಇದು ಕೂಡ ಒಂದು ಎನ್ನಲಾಗುತ್ತಿದೆ.
‘ಬಾಜಿರಾವ್ ಮಸ್ತಾನಿ’, ‘ಸಿಂಬಾ’, ‘ರಾಮ್ಲೀಲಾ’ ಅಂತಹ ಹಿಟ್ ಚಿತ್ರಗಳನ್ನು ನೀಡಿದ ಖ್ಯಾತಿ ರಣವೀರ್ ಸಿಂಗ್ ಅವರಿಗೆ ಇದೆ. 2019ರಲ್ಲಿ ತೆರೆಗೆ ಬಂದ ‘ಗಲ್ಲಿ ಬಾಯ್’ ಚಿತ್ರವೇ ಕೊನೆ. ಇದಾದ ನಂತರ ಅವರಿಗೆ ದೊಡ್ಡ ಯಶಸ್ಸು ಸಿಕ್ಕಿಲ್ಲ.
ಇದನ್ನೂ ಓದಿ: ಫಿಫಾ ವಿಶ್ವಕಪ್ ಫೈನಲ್ ವೇಳೆ ರವಿ ಶಾಸ್ತ್ರಿಗೆ ಕಿಸ್ ಮಾಡಿದ ರಣವೀರ್ ಸಿಂಗ್; ಇಲ್ಲಿದೆ ವೈರಲ್ ವಿಡಿಯೋ
‘83’ ಸಿನಿಮಾ ಬಗ್ಗೆ ದೊಡ್ಡ ನಿರೀಕ್ಷೆ ಇತ್ತು. ಆದರೆ, ಬಾಕ್ಸ್ ಆಫೀಸ್ ದೃಷ್ಟಿಯಿಂದ ಈ ಸಿನಿಮಾ ಹೇಳಿಕೊಳ್ಳುವಂತಹ ಕಮಾಯಿ ಮಾಡಿಲ್ಲ. ‘ಜಯೇಶ್ಭಾಯ್ ಜೋರ್ದಾರ್’ ಚಿತ್ರ ಕೂಡ ಸದ್ದು ಮಾಡಲಿಲ್ಲ. ಈಗ ‘ಸರ್ಕಸ್’ ಕೂಡ ಸದ್ದು ಮಾಡುತ್ತಿಲ್ಲ. ಸದ್ಯ ಅವರ ಕೈಯಲ್ಲಿರುವುದು ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾ ಮಾತ್ರ. ಈ ಚಿತ್ರದ ಬಗ್ಗೆಯೂ ಅಭಿಮಾನಿಗಳಿಗೆ ಹೆಚ್ಚಿನ ನಿರೀಕ್ಷೆ ಇಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ