
ಟೀಸರ್ ಮೂಲಕ ಗಮನ ಸೆಳೆದ ‘ದುರಂಧರ್’ (Dhurandhar) ಸಿನಿಮಾಗೆ ಚಿತ್ರೀಕರಣ ನಡೆಯುತ್ತಿದೆ. ಬಾಲಿವುಡ್ ನಟ ರಣವೀರ್ ಸಿಂಗ್ (Ranveer Singh) ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಪ್ರಸ್ತುತ ಲೇಹ್ನಲ್ಲಿ ‘ದುರಂಧರ್’ ಚಿತ್ರತಂಡ ಬೀಡು ಬಿಟ್ಟಿದೆ. ಬೇಸರದ ಸಂಗತಿ ಏನೆಂದರೆ, ಶೂಟಿಂಗ್ ವೇಳೆ ಚಿತ್ರತಂಡದ ಹಲವರಿಗೆ ಅನಾರೋಗ್ಯ ಉಂಟಾಗಿದೆ. ಒಬ್ಬರಲ್ಲ, ಇಬ್ಬರಲ್ಲ.. ಬರೋಬ್ಬರಿ 120 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರಿಂದಾಗಿ ಚಿತ್ರೀಕರಣದ ಸಮಯದಲ್ಲಿ ಎಲ್ಲರಿಗೂ ಆತಂಕ ಉಂಟಾಗಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ..
‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ಸಿನಿಮಾ ಖ್ಯಾತಿಯ ಆದಿತ್ಯ ದಾರ್ ಅವರು ‘ದುರಂಧರ್’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ತುಂಬಾ ರಗಡ್ ಆಗಿ ಈ ಸಿನಿಮಾ ಮೂಡಿಬರುತ್ತಿದೆ. ಲೇಹ್ನಲ್ಲಿ ಶೂಟಿಂಗ್ ಮಾಡುವಾಗ ಚಿತ್ರತಂಡದವರ ಆರೋಗ್ಯದಲ್ಲಿ ಏರುಪೇರು ಆಗಿದೆ. ಫುಡ್ ಪಾಯಿಸನ್ ಕಾರಣದಿಂದಲೇ ಈ ರೀತಿ ಆಗಿದೆ ಎಂದು ಹೇಳಲಾಗುತ್ತಿದೆ.
ಭಾನುವಾರ (ಆಗಸ್ಟ್ 17) ರಾತ್ರಿ ಊಟ ಮುಗಿಸಿದ ನಂತರ ‘ದುರಂಧರ್’ ಚಿತ್ರತಂಡದ ಅನೇಕರಿಗೆ ಹೊಟ್ಟೆ ನೋವು ಶುರುವಾಯಿತು. ಕೆಲವರು ವಾಂತಿ ಮಾಡಿಕೊಂಡರು. ಹಲವರಿಗೆ ತಲೆ ನೋವು ಕೂಡ ಆರಂಭ ಆಯಿತು. ನೂರಾರು ಜನರಿಗೆ ಈ ರೀತಿ ಆಗಿದ್ದರಿಂದ ಆತಂಕ ಹೆಚ್ಚಾಯಿತು. ಕೂಡಲೇ ಎಲ್ಲರನ್ನೂ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು.
ನಿರ್ದೇಶಕ ಆದಿತ್ಯ ದಾರ್ ಅವರು ಖುದ್ದಾಗಿ ಎಲ್ಲರ ಕಾಳಜಿ ವಹಿಸಿದ್ದಾರೆ ಎನ್ನಲಾಗಿದೆ. ಚಿತ್ರತಂಡದವರಿಗೆ ಸೂಕ್ತ ಚಿಕಿತ್ಸೆ ಸಿಗುವಂತೆ ಅವರು ನೋಡಿಕೊಂಡಿದ್ದಾರೆ. ಚಿತ್ರೀಕರಣವನ್ನು ಕೂಡಲೇ ಸ್ಥಗಿತಗೊಳಿಸಲಾಯಿತು. ಚಿಕಿತ್ಸೆ ಪಡೆದ ಬಹುತೇಕರು ಚೇತರಿಸಿಕೊಂಡು ಡಿಸ್ಚಾರ್ಜ್ ಆಗಿದ್ದಾರೆ. ಐವರಿಗೆ ಇನ್ನೂ ಚಿಕಿತ್ಸೆ ಮುಂದುವರಿಸಲಾಗುತ್ತಿದೆ ಎಂಬ ಮಾಹಿತಿ ಸಿಕ್ಕಿದೆ.
ಇದನ್ನೂ ಓದಿ: ಪಾತ್ರ ಕೊಡದ್ದಕ್ಕೆ ಸಿಟ್ಟು; ಯಶಸ್ಸು ಕೊಟ್ಟ ಬನ್ಸಾಲಿ ಮರೆತ ರಣವೀರ್ ಸಿಂಗ್
‘ದುರಂಧರ್’ ಚಿತ್ರತಂಡದವರು ಸೇವಿಸಿದ ಆಹಾರದ ಸ್ಯಾಂಪಲ್ ಅನ್ನು ಪರೀಕ್ಷೆಗೆ ಕಳಿಸಲಾಗಿದೆ. ವರದಿ ಬಂದ ಬಳಿಕ ಅಸಲಿ ಕಾರಣ ತಿಳಿದುಬರಲಿದೆ. ನಿರ್ದೇಶಕ ಆದಿತ್ಯ ದಾರ್ ಅವರೇ ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಘಟನೆಯ ಬಗ್ಗೆ ಅವರು ಅಧಿಕೃತವಾಗಿ ಹೇಳಿಕೆ ನೀಡುವುದು ಬಾಕಿ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.