ಸತತ 24 ಗಂಟೆ ಪ್ರದರ್ಶನ ಕಂಡ ‘ಧುರಂಧರ್’ ಸಿನಿಮಾ; ಹೆಚ್ಚುತ್ತಲೇ ಇದೆ ಡಿಮ್ಯಾಂಡ್

ಎಲ್ಲ ಕಡೆಗಳಲ್ಲೂ ‘ಧುರಂಧರ್’ ಸಿನಿಮಾದ ಬಗ್ಗೆಯೇ ಚರ್ಚೆ ನಡೆಯುತ್ತಿದೆ. ಅಷ್ಟರಮಟ್ಟಿಗೆ ಕ್ರೇಜ್ ಸೃಷ್ಟಿ ಆಗಿದೆ. ವಿಶೇಷ ಏನೆಂದರೆ ಪುಣೆ, ಮಂಬೈ ನಗರದ ಕೆಲವು ಕಡೆಗಳಲ್ಲಿ 24 ಗಂಟೆಯೂ ಈ ಸಿನಿಮಾದ ಪ್ರದರ್ಶನ ಆಗಿದೆ. ಪ್ರೇಕ್ಷಕರ ಬೇಡಿಕೆಗೆ ತಕ್ಕಂತೆ ಚಿತ್ರಮಂದಿರಗಳಲ್ಲಿ ‘ಧುರಂಧರ್’ ಸಿನಿಮಾದ ಶೋಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ.

ಸತತ 24 ಗಂಟೆ ಪ್ರದರ್ಶನ ಕಂಡ ‘ಧುರಂಧರ್’ ಸಿನಿಮಾ; ಹೆಚ್ಚುತ್ತಲೇ ಇದೆ ಡಿಮ್ಯಾಂಡ್
Ranveer Singh

Updated on: Dec 14, 2025 | 12:03 PM

2025ರ ಅಂತ್ಯದಲ್ಲಿ ನಟ ರಣವೀರ್ ಸಿಂಗ್ (Ranveer Singh) ಅವರು ಭರ್ಜರಿ ಗೆಲುವು ಪಡೆದಿದ್ದಾರೆ. ಅವರು ನಟಿಸಿದ ‘ಧುರಂಧರ್’ ಸಿನಿಮಾ ಹಲವು ದಾಖಲೆಗಳನ್ನು ಬರೆಯುತ್ತಿದೆ. ನೈಜ ಘಟನೆ ಆಧಾರಿತ ಕಥೆ ಹೊಂದಿರುವ ಈ ಸಿನಿಮಾವನ್ನು ವೀಕ್ಷಕರು ಮುಗಿಬಿದ್ದು ವೀಕ್ಷಿಸುತ್ತಿದ್ದಾರೆ. ವಾರದ ದಿನಗಳಲ್ಲಿ ಹೌಸ್​ಫುಲ್ ಪ್ರದರ್ಶನ ಕಂಡಿದ್ದು ಮಾತ್ರವಲ್ಲದೇ ವಾರಾಂತ್ಯದಲ್ಲಿ ಡಿಮ್ಯಾಂಡ್ ಹೆಚ್ಚಾಗಿದೆ. ಆ ಕಾರಣದಿಂದ ಕೆಲವು ನಗರಗಳಲ್ಲಿ ‘ಧುರಂಧರ್’ (Dhurandhar) ಸಿನಿಮಾದ ಶೋ ಸಂಖ್ಯೆ ಹೆಚ್ಚಿಸಲಾಗಿದೆ. ಸತತ 24 ಗಂಟೆಗಳ ಕಾಲ ಪ್ರದರ್ಶನ ಮಾಡುವ ಮೂಲಕ ಅಭಿಮಾನಿಗಳ ಬೇಡಿಕೆಯನ್ನು ಪೂರೈಸಲಾಗಿದೆ.

‘ಧುರಂಧರ್’ ಸಿನಿಮಾದಲ್ಲಿ ದೇಶಭಕ್ತಿ ಕಹಾನಿ ಇದೆ. ಆದ್ದರಿಂದ ಜನರಿಗೆ ಈ ಚಿತ್ರ ಇಷ್ಟ ಆಗುತ್ತಿದೆ. ಆ್ಯಕ್ಷನ್ ಬಯಸುವ ಪ್ರೇಕ್ಷಕರಿಗೂ ಈ ಚಿತ್ರದಲ್ಲಿ ಮನರಂಜನೆ ಸಿಗುತ್ತದೆ. ಈ ಸಿನಿಮಾಗೆ ಜನರಿಂದ ಬಾಯಿ ಮಾತಿನ ಪ್ರಚಾರ ಚೆನ್ನಾಗಿ ಸಿಗುತ್ತಿದೆ. ಹಾಗಾಗಿ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಬರುತ್ತಿದ್ದಾರೆ. ಕಲೆಕ್ಷನ್ ಹೆಚ್ಚಲು ಅದು ಮುಖ್ಯ ಕಾರಣವಾಗಿದೆ.

ದೆಹಲಿ, ಪುಣೆಯ ಕೆಲವು ಚಿತ್ರಮಂದಿರಗಳಲ್ಲಿ 24 ಗಂಟೆಯೂ ‘ಧುರಂಧರ್’ ಸಿನಿಮಾವನ್ನು ಪ್ರದರ್ಶನ ಮಾಡಲಾಗಿದೆ. ಬೆಳಗ್ಗೆ 7 ಅಥವಾ 8 ಗಂಟೆಗೆ ಮೊದಲ ಪ್ರದರ್ಶನ ಆರಂಭ ಆಗಿದೆ. ಬಳಿಕ ದಿನವಿಡೀ ಪ್ರದರ್ಶನ ನಡೆದಿದೆ. ಮರುದಿನ 4.10ರ ತನಕ ಹೊಸ ಶೋ ಆರಂಭ ಆಗುತ್ತಲೇ ಇದ್ದವು. ಆ ಶೋ ಮುಗಿಯಲು ಮತ್ತೆ ಬೆಳಗಿನ ಜಾವ 8 ಗಂಟೆ ಆಗಿದೆ. ಹೀಗೆ ಸತತ 24 ಗಂಟೆಗಳ ಕಾಲ ‘ಧುರಂಧರ್’ ಪ್ರದರ್ಶನ ಆಗಿದೆ.

ಆದಿತ್ಯ ಧಾರ್ ನಿರ್ದೇಶನದ ‘ಧುರಂಧರ್’ ಸಿನಿಮಾದಲ್ಲಿ ರಣವೀರ್ ಸಿಂಗ್, ಅಕ್ಷಯ್ ಖನ್ನಾ, ಸಾರಾ ಅರ್ಜುನ್, ಸಂಜಯ್ ದತ್, ಅರ್ಜುನ್ ರಾಮ್​​ಪಾಲ್ ಮುಂತಾದ ಕಲಾವಿದರು ಅಭಿನಯಿಸಿದ್ದಾರೆ. ಈ ಸಿನಿಮಾ ಬಿಡುಗಡೆ ಆಗಿ 10ನೇ ದಿನಕ್ಕೆ ಕಾಲಿಟ್ಟಿದೆ. ಎಲ್ಲ ಕಡೆಗಳಲ್ಲಿ ಹೌಸ್​ಫುಲ್ ಆಗುತ್ತಿದೆ. ಈ ಮೂಲಕ ರಣವೀರ್ ಸಿಂಗ್ ಅವರಿಗೆ ‘ಧುರಂಧರ್’ ಚಿತ್ರದಿಂದ ದೊಡ್ಡ ಯಶಸ್ಸು ಸಿಕ್ಕಂತಾಗಿದೆ.

ಇದನ್ನೂ ಓದಿ: ‘ಧುರಂಧರ್’ ಎದುರು ಮಂಕಾದ ‘ದಿ ಡೆವಿಲ್’: ದರ್ಶನ್ ಸಿನಿಮಾ ಕಲೆಕ್ಷನ್ ಕಡಿಮೆ ಆಗಿದ್ದು ಯಾಕೆ?

‘ಧರಂಧರ್’ ಸಿನಿಮಾದ ಅವಧಿ ಬರೋಬ್ಬರಿ 3 ಗಂಟೆ 34 ನಿಮಿಷ. ಅಲ್ಲದೇ ಈ ಸಿನಿಮಾದಲ್ಲಿ ಹಿಂಸೆ ಮತ್ತು ಅಸಬ್ಯ ಭಾಷೆ ಬಳಕೆ ಆಗಿದೆ ಎಂಬ ಕಾರಣಕ್ಕೆ ‘ಎ’ ಪ್ರಮಾಣಪತ್ರವನ್ನು ನೀಡಲಾಗಿದೆ. ಈಗಿನ ಕಾಲದಲ್ಲಿ ಪ್ರೇಕ್ಷಕರು ಮೂರೂವರೆ ಗಂಟೆ ಅವಧಿಯ ಸಿನಿಮಾ ವೀಕ್ಷಿಸುವ ತಾಳ್ಮೆ ಹೊಂದಿದ್ದಾರಾ ಎಂಬ ಅನುಮಾನ ಕೂಡ ಕೆಲವರಿಗೆ ಇತ್ತು. ಆ ಅನುಮಾನಕ್ಕೆ ‘ಧುರಂಧರ್’ ಸಿನಿಮಾದ ಕಲೆಕ್ಷನ್ ಉತ್ತರ ನೀಡುತ್ತಿದೆ. 9 ದಿನಕ್ಕೆ ಈ ಚಿತ್ರದ ಕಲೆಕ್ಷನ್ 292 ಕೋಟಿ ರೂಪಾಯಿ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.