‘ಡಾನ್ 3’ ವಿವಾದ: ರಣವೀರ್ ಸಿಂಗ್ ದೊಡ್ಡ ನಿರ್ಧಾರ; 18 ತಿಂಗಳು ಯಾರಿಗೂ ಸಿಗಲ್ಲ ನಟ

ಡಾನ್ 3 ವಿವಾದದ ನಡುವೆ ರಣವೀರ್ ಸಿಂಗ್ ಆಶ್ಚರ್ಯಕರ ನಿರ್ಧಾರ ಪ್ರಕಟಿಸಿದ್ದಾರೆ. ಮುಂದಿನ 18 ತಿಂಗಳು ಯಾವುದೇ ಮಾಧ್ಯಮ ಸಂದರ್ಶನಗಳನ್ನು ನೀಡದಿರಲು ಅವರು ನಿರ್ಧರಿಸಿದ್ದಾರೆ. ತಮ್ಮ ಮುಂಬರುವ 'ಪ್ರಳಯ' ಸಿನಿಮಾ ಬಿಡುಗಡೆಯಾಗುವವರೆಗೂ ಮೌನಕ್ಕೆ ಶರಣಾಗಿ, ಡಾನ್ 3 ವಿವಾದ ತಣ್ಣಗಾಗಲು ಕಾಯುತ್ತಿದ್ದಾರೆ. ಸದ್ಯಕ್ಕೆ ಎಲ್ಲಾ ಇಂಟರ್ವ್ಯೂ ರಿಕ್ವೆಸ್ಟ್‌ಗಳನ್ನು ತಡೆಹಿಡಿದಿದ್ದಾರೆ.

‘ಡಾನ್ 3’ ವಿವಾದ: ರಣವೀರ್ ಸಿಂಗ್ ದೊಡ್ಡ ನಿರ್ಧಾರ; 18 ತಿಂಗಳು ಯಾರಿಗೂ ಸಿಗಲ್ಲ ನಟ
ರಣವೀರ್ ಸಿಂಗ್

Updated on: Jun 20, 2026 | 2:41 PM

ಬಾಲಿವುಡ್‌ನ ಎನರ್ಜಿಟಿಕ್ ನಟ ರಣವೀರ್ ಸಿಂಗ್ ಸದ್ಯ ‘ಡಾನ್ 3’ ಸಿನಿಮಾದ ವಿವಾದದ ಮೂಲಕ ಸುದ್ದಿಯಲ್ಲಿದ್ದಾರೆ. ಅವರು ಈ ಚಿತ್ರದಿಂದ ಹೊರಬಂದಿರುವುದೇ ವಿವಾದದ ಕೇಂದ್ರಬಿಂದು. ಈ ಬೆಳವಣಿಗೆಯ ಬಗ್ಗೆ ರಣವೀರ್ ಸಿಂಗ್ ಅವರನ್ನು ಪ್ರಶ್ನೆ ಮಾಡಲು ಮತ್ತು ಅವರ ಪ್ರತಿಕ್ರಿಯೆ ಪಡೆಯಲು ಇಡೀ ಮಾಧ್ಯಮ ಲೋಕ ಹಾಗೂ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಆದರೆ, ರಣವೀರ್ ಮಾತ್ರ ಮಾಧ್ಯಮಗಳಿಗೆ ಸಿಗದಂತೆ ಸೈಲೆಂಟ್ ಆಗಿ ದೊಡ್ಡದೊಂದು ನಿರ್ಧಾರ ಪ್ರಕಟಿಸಿದ್ದಾರೆ. ಹೌದು, ಇತ್ತೀಚಿನ ವರದಿಗಳ ಪ್ರಕಾರ, ರಣವೀರ್ ಸಿಂಗ್ ಮುಂದಿನ 18 ತಿಂಗಳುಗಳ ಕಾಲ ಯಾವುದೇ ಮಾಧ್ಯಮಗಳಿಗೆ ಇಂಟರ್ವ್ಯೂ ನೀಡದಿರಲು ಮತ್ತು ಸಂಪೂರ್ಣ ಮೌನಕ್ಕೆ ಶರಣಾಗಲು ನಿರ್ಧರಿಸಿದ್ದಾರೆ.

ಇತ್ತೀಚೆಗಷ್ಟೇ ರಣವೀರ್ ಸಿಂಗ್ ಅವರ ಆಪ್ತ ತಂಡ ಅಧಿಕೃತ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ‘ಡಾನ್ 3’ ಚಿತ್ರದ ವಿವಾದದ ಬಗ್ಗೆ ನಟ ಸಾರ್ವಜನಿಕವಾಗಿ ಎಲ್ಲೂ ಮಾತನಾಡುವುದಿಲ್ಲ ಮತ್ತು ಘನತೆಯಿಂದ ಮೌನ ಕಾಯ್ದುಕೊಳ್ಳಲಿದ್ದಾರೆ ಎಂದು ತಿಳಿಸಿದೆ. ‘ನಾನು ಡಾನ್ 3 ವಿವಾದದ ಬಗ್ಗೆ ಆಗಲಿ ಅಥವಾ ಬೇರೆ ವಿಷಯಗಳ ಬಗ್ಗೆ ಆಗಲಿ ಮುಂದಿನ 18 ತಿಂಗಳು ಯಾವುದೇ ಸಂದರ್ಶನಗಳನ್ನು ನೀಡುವುದಿಲ್ಲ’ ಎಂದು ರಣವೀರ್ ಖಚಿತಪಡಿಸಿದ್ದಾರೆ ಎನ್ನಲಾಗಿದೆ. ಸದ್ಯಕ್ಕೆ ಪತ್ರಕರ್ತರು ಕಳುಹಿಸಿರುವ ಎಲ್ಲಾ ಇಂಟರ್ವ್ಯೂ ರಿಕ್ವೆಸ್ಟ್‌ಗಳನ್ನು ನಟ ಅನಿರ್ದಿಷ್ಟಾವಧಿಗೆ ತಡೆಹಿಡಿದಿದ್ದಾರೆ.

‘ಪ್ರಳಯ’ ಸಿನಿಮಾ ರಿಲೀಸ್ ಆಗುವವರೆಗೂ ಇಲ್ಲ ಸಂದರ್ಶನ:

ಚಿತ್ರರಂಗದ ಆಪ್ತರ ಪ್ರಕಾರ, ಜೈ ಮೆಹ್ತಾ ನಿರ್ದೇಶನದ ತಮ್ಮ ಮುಂಬರುವ ‘ಪ್ರಳಯ’ ಸಿನಿಮಾ ತೆರೆಗೆ ಬರುವವರೆಗೂ ರಣವೀರ್ ಪ್ರೆಸ್ ಮುಂದೆ ಬರುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಅಲ್ಲಿಯವರೆಗೆ ‘ಡಾನ್ 3’ ವಿವಾದ ಸಂಪೂರ್ಣವಾಗಿ ತಣ್ಣಗಾಗಿರುತ್ತದೆ ಎಂಬುದು ರಣವೀರ್ ನಂಬಿಕೆ.

ಇದನ್ನೂ ಓದಿ: ಹೊಸ ಫೆರಾರಿ ಕಾರಲ್ಲಿ ಮುಂಬೈ ಸುತ್ತಿದ ರಣವೀರ್; ಇದರ ಬೆಲೆ 6 ಕೋಟಿ ರೂಪಾಯಿ

ರಣವೀರ್ ಸಿಂಗ್ ಸದ್ಯ ಹನ್ಸಲ್ ಮೆಹ್ತಾ ನಿರ್ಮಾಣ ಹಾಗೂ ಜೈ ಮೆಹ್ತಾ ನಿರ್ದೇಶನದ ‘ಪ್ರಳಯ’ ಚಿತ್ರದ ಬಗ್ಗೆ ಭಾರಿ ಉತ್ಸುಕರಾಗಿದ್ದಾರೆ. ಇದು ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ನಡೆಯುವ ಹೈ-ಕಾನ್ಸೆಪ್ಟ್ ‘ಜಾಂಬಿ ಡ್ರಾಮಾ’ ಸಿನಿಮಾ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us