ಮೊದಲ ಬಾರಿಗೆ ಲಾಕ್ಡೌನ್ ಜಾರಿ ಆದಾಗಿನಿಂದ ಇಂದಿನವರೆಗೂ ನಟ ಸೋನು ಸೂದ್ ಅವರು ಒಂದಿಲ್ಲೊಂದು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಲೇ ಬಂದಿದ್ದಾರೆ. ಆದರೆ ಅವರ ಮೇಲೆ ಕೆಲವು ಆರೋಪಗಳು ಕೂಡ ಇವೆ. ಸೋನು ಸೂದ್ ಮಾಡುತ್ತಿರುವ ಸಮಾಜಸೇವೆಯನ್ನು ಅನೇಕರು ಅನುಮಾನದ ದೃಷ್ಟಿಯಿಂದ ನೋಡಿದ ಉದಾಹರಣೆ ಕೂಡ ಇದೆ. ಈಗ ಸರ್ಕಾರಕ್ಕೆ 20 ಕೋಟಿ ರೂ. ತೆರಿಗೆ ವಂಚಿಸಿದ ಆರೋಪ ಸೋನು ಸೂದ್ ಅವರ ಮೇಲೆ ಎದುರಾಗಿದೆ. ಈ ಸಂಬಂಧ ಐಟಿ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಅದಕ್ಕೆ ಸೋನು ಸೂದ್ ಪ್ರತಿಕ್ರಿಯೆ ನೀಡಿದ್ದಾರೆ.
ತೆರಿಗೆ ವಂಚನೆ ಆರೋಪ ಕೇಳಿಬಂದಾಗಿನಿಂದಲೂ ಸೋನು ಸೂದ್ ಅವರ ಪ್ರತಿಕ್ರಿಯೆಗಾಗಿ ಎಲ್ಲರೂ ಕಾದಿದ್ದರು. ಆ ಕುರಿತು ನಾಲ್ಕು ದಿನಗಳ ಬಳಿಕ ಅವರು ಮೌನ ಮುರಿದಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ‘ನಿಮ್ಮ ಪರವಾಗಿರುವ ಕಥೆಯನ್ನು ನೀವೇ ಯಾವಾಗಲೂ ಹೇಳಬೇಕಾಗಿಲ್ಲ. ಕಾಲವೇ ಹೇಳಲಿದೆ’ ಎಂದು ಸೋನು ಸೂದ್ ಬರಹ ಆರಂಭಿಸಿದ್ದಾರೆ.
‘ಈ ದೇಶದ ಜನರ ಸೇವೆ ಮಾಡುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದೇನೆ. ನನ್ನ ಫೌಂಡೇಷನ್ನಲ್ಲಿ ಇರುವ ಒಂದೊಂದು ರೂಪಾಯಿ ಕೂಡ ಅಗತ್ಯ ಇರುವವರಿಗೆ ಸಹಾಯ ಮಾಡಲು ಮತ್ತು ಜನರ ಜೀವ ಉಳಿಸಲು ಕಾದಿದೆ. ಜಾಹೀರಾತಿನಿಂದ ನನಗೆ ಬರುವ ಸಂಭಾವನೆಯನ್ನು ನೇರವಾಗಿ ಮಾನವೀಯ ಕೆಲಸಗಳಿಗೆ ನೀಡಿ ಎಂದು ಕೂಡ ನಾನು ಪ್ರೋತ್ಸಾಹಿಸಿದ್ದೇನೆ. ಆ ಕೆಲಸವೂ ಸಾಗುತ್ತಿದೆ. ಕಳೆದ ನಾಲ್ಕು ದಿನಗಳಿಂದ ಕೆಲವು ಅತಿಥಿಗಳನ್ನು ಬರಮಾಡಿಕೊಳ್ಳುತ್ತ ಇದ್ದೆ. ಹಾಗಾಗಿ ನಿಮ್ಮ ಕರೆಗಳಿಗೆ ಉತ್ತರಿಸಲು ಆಗಲಿಲ್ಲ. ಈಗ ನಿಮ್ಮ ಸೇವೆಗಾಗಿ ಮರಳಿದ್ದೇನೆ. ನನ್ನ ಪಯಣ ಮುಂದುವರಿಯಲಿದೆ. ಜೈ ಹಿಂದ್’ ಎಂದು ಸೋನು ಸೂದ್ ಬರೆದುಕೊಂಡಿದ್ದಾರೆ.
“सख्त राहों में भी आसान सफर लगता है,
हर हिंदुस्तानी की दुआओं का असर लगता है” ? pic.twitter.com/0HRhnpf0sY— sonu sood (@SonuSood) September 20, 2021
ಐಟಿ ಅಧಿಕಾರಿಗಳು ಹೇಳೋದೇನು?
ಸೋನು ಸೂದ್ ಮನೆ ಹಾಗೂ ಕಛೇರಿಗಳ ಮೇಲಿನ ಸಮೀಕ್ಷೆಯ ಕುರಿತಂತೆ ಐಟಿ ಇಲಾಖೆ ಮಾಹಿತಿ ನೀಡಿದ್ದು, ಅವರು ₹ 20 ಕೋಟಿಗೂ ಅಧಿಕ ಮೊತ್ತದ ತೆರಿಗೆಯನ್ನು ವಂಚಿಸಿದ್ದಾರೆ ಎಂದಿದೆ. ಸತತ ನಾಲ್ಕು ದಿನಗಳ ಕಾಲ ಸೋನು ಅವರ ಮನೆ, ಕಚೇರಿಗಳ ಮೇಲೆ ಸಮೀಕ್ಷೆ ನಡೆಸಿದ ಐಟಿ ಅಧಿಕಾರಿಗಳು, ನಟನಿಗೆ ಸಂಬಂಧಿಸಿದ ನಾನ್ ಪ್ರಾಫಿಟ್ ಸಂಸ್ಥೆಯು, ₹ 2.1 ಕೋಟಿಗಳನ್ನು ವಿದೇಶಿ ಮೂಲಗಳಿಂದ ಸಂಗ್ರಹಿಸಿದೆ ಎಂದಿದೆ. ವಿದೇಶಿ ಹಣ ಸ್ವೀಕಾರದ ಕಾನೂನಿಗೆ ಇದು ವಿರುದ್ಧವಾಗಿದೆ ಎಂದು ಇಲಾಖೆ ತಿಳಿಸಿದೆ.
ಸೋನು ಅವರ ಮನೆಯ ಮೇಲಿನ ಸಮೀಕ್ಷೆಯ ವೇಳೆ ಅವರು ತಮ್ಮ ಸಹವರ್ತಿಗಳೊಂದಿಗೆ ಕೂಡಿ ತೆರಿಗೆ ವಂಚನೆ ನಡೆಸಿದ್ದರ ಕುರಿತು ಸಾಕ್ಷ್ಯಗಳು ಪತ್ತೆಯಾಗಿವೆ. ಇದರಲ್ಲಿ ಮುಖ್ಯವಾಗಿ ಲೆಕ್ಕವಿಲ್ಲದ ಆದಾಯವನ್ನು ನಕಲಿ ಸಂಸ್ಥೆಗಳ ಮೂಲಕ ಸಾಗಿಸಲಾಗಿದೆ ಎಂದು ಸಿಬಿಡಿಟಿ ಮಾಹಿತಿ ನೀಡಿದೆ. ಐಟಿ ಇಲಾಖೆಯು ಸೋನು ಸೂದ್ ಹಾಗೂ ಲಕ್ನೋ ಮೂಲದ ಸಂಸ್ಥೆಯೊಂದರ ಮೇಲೆ ಸಮೀಕ್ಷೆ ನಡೆಸಿತ್ತು. ಇದಕ್ಕೆ ಸಂಬಂಧಪಟ್ಟಂತೆ, ಮುಂಬೈ, ಲಕ್ನೋ, ಕಾನ್ಪುರ, ಜೈಪುರ, ದೆಹಲಿ ಮುಂತಾದೆಡೆ ಶೋಧ ನಡೆಸಲಾಗಿತ್ತು ಎಂದು ಕೇಂದ್ರ ಆದಾಯ ತೆರಿಗೆ ಮಂಡಳಿ ತಿಳಿಸಿದೆ.
ಇದನ್ನೂ ಓದಿ:
ರಶ್ಮಿಕಾ ಮಂದಣ್ಣ ಸಿನಿಮಾದಲ್ಲಿ ಸೋನು ಸೂದ್ ವಿಲನ್? ಫ್ಯಾನ್ಸ್ ಇದನ್ನು ಸಹಿಸೋದು ಹೇಗೆ?
‘ಈಗಾಗಲೇ ಸಾಮಾನ್ಯ ಜನರು ಬಡತನ, ನಿರುದ್ಯೋಗದ ಕಾರಣ 3ನೇ ಅಲೆಯನ್ನು ಅನುಭವಿಸುತ್ತಿದ್ದಾರೆ’: ಸೋನು ಸೂದ್