ಬಪ್ಪಿ ಲಹಿರಿ (Bappi Lahiri) ಭಾರತೀಯ ಚಿತ್ರರಂಗದಲ್ಲಿ ಬಹುದೊಡ್ಡ ಹೆಸರು. ಭಾರತಕ್ಕೆ ಡಿಸ್ಕೋ ಪರಂಪರೆಯನ್ನು ಪರಿಚಯಿಸಿ, ಪ್ರಸಿದ್ಧಗೊಳಿಸಿದ ಗಾಯಕರಲ್ಲಿ ಅವರೂ ಒಬ್ಬರು. ‘ಚಲ್ತೆ ಚಲ್ತೆ’ ಇರಬಹುದು, ‘ಡಿಸ್ಕೋ ಡಾನ್ಸರ್’ ಇರಬಹುದು ಅಥವಾ ‘ಶರಾಬಿ’ ಹಾಡೇ ಇರಬಹುದು. ಎಲ್ಲವೂ ಕೇಳುಗರ ಮನಗೆದ್ದವುಗಳೇ. ವಿಶೇಷವೆಂದರೆ ಬಪ್ಪಿ ಹುಟ್ಟುಹಾಕಿದ ಡಿಸ್ಕೋ ಪರಂಪರೆಗೆ ಇಂದಿಗೂ ಅಪಾರ ಬೇಡಿಕೆ ಇದೆ. ಅವರ ಅಂದಿನ ಹಾಡುಗಳಲ್ಲಿ ಹಲವು ಇತ್ತೀಚೆಗೆ ರಿಮೇಕ್ ಆಗಿವೆ. ಹೊಸ ರೂಪದೊಂದಿಗೆ ಬಂದಿರುವ ಹಾಡುಗಳನ್ನು ಜನರು ಈಗಲೂ ಇಷ್ಟಪಟ್ಟಿದ್ದಾರೆ. ತಮ್ಮ ವೈವಿಧ್ಯಮಯ ಸಂಗೀತದಿಂದ ಬಪ್ಪಿ ಲಹಿರಿ ಹಿಂದಿ ಹಾಗೂ ಬೆಂಗಾಳಿ ಚಿತ್ರರಂಗದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡರು. ಆದರೆ ವೃತ್ತಿ ಜೀವನದ ಉನ್ನತ ಕಾಲಘಟ್ಟದಲ್ಲಿ ಅವರು ಹಲವು ಭಾಷೆಗಳಲ್ಲಿ ಕೆಲಸ ಮಾಡಿದ್ದಾರೆ. ತೆಲುಗು ಹಾಗೂ ಕನ್ನಡದಲ್ಲೂ ಅವರ ಗೀತೆಗಳು ಬಹುಜನಪ್ರಿಯ. ಮಂಗಳವಾರ (ಫೆಬ್ರವರಿ 15) ತಡರಾತ್ರಿ ಅವರು ನಿಧನರಾಗಿದ್ದಾರೆ. ಬಪ್ಪಿ ಅವರ ನಿಧನಕ್ಕೆ ಚಿತ್ರರಂಗ ಕಂಬನಿ ಮಿಡಿದಿದೆ. ಬಪ್ಪಿ ಲಹಿರಿ ಅವರ ಸೂಪರ್ಹಿಟ್ ಗೀತೆಗಳನ್ನು ಇಂದು ನೆನಪಿಸಿಕೊಳ್ಳಲಾಗುತ್ತಿದೆ. ಸದಾ ಗುನುಗಬಹುದಾದ, ಜನರು ಮೆಚ್ಚಿದ ಬಪ್ಪಿ ಅವರ ಕೆಲವು ಸೂಪರ್ ಹಿಟ್ ಗೀತೆಗಳ ಪಟ್ಟಿ ಇಲ್ಲಿದೆ.
1. ಕೋಯಿ ಯಹಾನ್ ಆಹಾ ನಾಚೆ ನಾಚೆ: 1979ರಲ್ಲಿ ತೆರೆಕಂಡ ಈ ಹಾಡಿಗೆ ಬಪ್ಪಿ ಲಹಿರಿ ಸಂಗೀತ ನೀಡಿ ಹಾಡಿದ್ದಾರೆ. ಅವರಿಗೆ ಮತ್ತೋರ್ವ ಖ್ಯಾತ ಗಾಯಕಿ ಉಷಾ ಉತ್ತುಪ್ ಸಾಥ್ ನೀಡಿದ್ದಾರೆ.
2. ತಮ್ಮಾ ತಮ್ಮಾ: 1989ರಲ್ಲಿ ತೆರೆಕಂಡ ತಾನೆದಾರ್ ಚಿತ್ರದ ಹಾಡಿದು. ಬಪ್ಪಿ ಲಹಿರಿ ಹಾಗೂ ಅನುರಾಧಾ ಪೌಧ್ವಾಲ್ ಹಾಡಿರುವ ಈ ಗೀತೆಯಲ್ಲಿ ಮಾಧುರಿ ಧೀಕ್ಷಿತ್ ಹಾಗೂ ಸಂಜಯ್ ದತ್ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಈ ಹಾಡನ್ನು ರಿಮೇಕ್ ಮಾಡಲಾಗಿತ್ತು. ಅದರಲ್ಲಿ ಆಲಿಯಾ ಭಟ್ ಹಾಗೂ ವರುಣ್ ಧವನ್ ಕಾಣಿಸಿಕೊಂಡಿದ್ದರು.
3. ಐ ಯಾಮ್ ಎ ಡಿಸ್ಕೋ ಡಾನ್ಸರ್: 1997ರಲ್ಲಿ ತೆರೆ ಕಂಡ ‘ಡಿಸ್ಕೋ ಡಾನ್ಸರ್’ ಚಿತ್ರದ ಈ ಗೀತೆ ಹಲವರ ಫೇವರಿಟ್ ಗೀತೆಗಳಲ್ಲಿ ಒಂದು. ಮಿಥುನ್ ಚಕ್ರವರ್ತಿ ಕಾಣಿಸಿಕೊಂಡಿದ್ದ ಈ ಗೀತೆ ದೊಡ್ಡ ಹಿಟ್ ಆಗಿತ್ತು. ಇತ್ತೀಚೆಗೆ ಇದನ್ನು ರಿಮೇಕ್ ಕೂಡ ಮಾಡಲಾಗಿತ್ತು. ಅದರಲ್ಲಿ ಟೈಗರ್ ಶ್ರಾಫ್ ಹೆಜ್ಜೆಹಾಕಿದ್ದರು.
4. ಜಿಮ್ಮಿ ಜಿಮ್ಮಿ ಜಿಮ್ಮಿ ಆಜಾ: ಬಿ ಸುಭಾಷ್ ನಿರ್ಮಿಸಿದ್ದ ಈ ಗೀತೆ 1982ರಲ್ಲಿ ತೆರೆಕಂಡಿತ್ತು. ಆಗ ದೊಡ್ಡ ಹಿಟ್ ಆಗಿತ್ತು.
5. ಊಹ್ ಲಾ ಲಾ: 2011ರಲ್ಲಿ ತೆರೆಕಂಡಿದ್ದ ‘ಡರ್ಟಿ ಪಿಚ್ಚರ್’ ಚಿತ್ರದ ಈ ಗೀತೆ ದೊಡ್ಡ ಸೆನ್ಸೇಶನ್ ಸೃಷ್ಟಿಸಿತ್ತು. ಈ ಹಾಡಿಗೆ ಅಪಾರ ಪ್ರಶಸ್ತಿಗಳೂ ಲಭಿಸಿತ್ತು. ಶ್ರೇಯಾ ಘೋಷಾಲ್ ಹಾಗೂ ಬಪ್ಪಿ ಲಹಿರಿ ಹಾಡಿದ್ದ ಈ ಗೀತೆಯನ್ನು ಈಗಿನ ತಲೆಮಾರು ಗುನುಗುತ್ತಿರುತ್ತಾರೆ. ಆ ಹಾಡು ಇಲ್ಲಿದೆ.
6. ತೂನೆ ಮಾರಿ ಎಂಟ್ರಿಯಾನ್: ಪ್ರಿಯಾಂಕಾ ಚೋಪ್ರಾ, ರಣವೀರ್ ಸಿಂಗ್, ಅರ್ಜುನ್ ಕಪೂರ್ ನಟಿಸಿದ್ದ ‘ಗುಂಡೈ’ ಚಿತ್ರದ ಹಾಡಿದು. ಬಪ್ಪಿ ಲಹಿರಿ, ನೀತಿ ಮೋಹನ್ ಮೊದಲಾದವರು ಹಾಡಿದ್ದಾರೆ.
ಇದನ್ನೂ ಓದಿ:
Bappi Lahiri: ಸ್ಯಾಂಡಲ್ವುಡ್ನಲ್ಲೂ ಗುರುತಿಸಿಕೊಂಡಿದ್ದ ಖ್ಯಾತ ಸಂಗೀತ ನಿರ್ದೇಶಕ, ಗಾಯಕ ಬಪ್ಪಿ ಲಹಿರಿ ಇನ್ನಿಲ್ಲ
‘ಲತಾಜೀ ಇಲ್ಲದೇ ನಾನಿಲ್ಲ’ ಎಂದು ಹೇಳಿದ್ದ ಬಪ್ಪಿ ಲಹಿರಿ; 10 ದಿನದ ಅಂತರದಲ್ಲಿ ಇಬ್ಬರೂ ವಿಧಿವಶ