Bappi Lahiri: ಸ್ಯಾಂಡಲ್ವುಡ್ನಲ್ಲೂ ಗುರುತಿಸಿಕೊಂಡಿದ್ದ ಖ್ಯಾತ ಸಂಗೀತ ನಿರ್ದೇಶಕ, ಗಾಯಕ ಬಪ್ಪಿ ಲಹಿರಿ ಇನ್ನಿಲ್ಲ
Bappi Lahiri Passes Away: ಖ್ಯಾತ ಸಂಗೀತ ನಿರ್ದೇಶಕ, ಗಾಯಕ ಬಪ್ಪಿ ಲಹಿರಿ ನಿಧನರಾಗಿದ್ದಾರೆ. ಅವರಿಗೆ 69 ವರ್ಷ ವಯಸ್ಸಾಗಿತ್ತು.
ಮುಂಬೈ: ಖ್ಯಾತ ಸಂಗೀತ ನಿರ್ದೇಶಕ, ಹಿನ್ನೆಲೆ ಗಾಯಕ ಬಪ್ಪಿ ಲಹಿರಿ (Bappi Lahiri) ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 69 ವರ್ಷ ವಯಸ್ಸಾಗಿತ್ತು. ಸ್ಯಾಂಡಲ್ವುಡ್ನಲ್ಲೂ ಕೆಲಸ ಮಾಡಿದ್ದ ಬಪ್ಪಿ ಲಹಿರಿ ತಮ್ಮ ಹಾಡುಗಳಿಂದ ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿದ್ದರು. ಹಿಂದಿಯಲ್ಲಿ ಡಿಸ್ಕೋ ಡಾನ್ಸರ್, ರಾತ್ ಬಾಕಿ, ಬಂಬಾಯ್ ಸೇ ಆಯಾ ಮೇರಾ ದೋಸ್ತ್ ಸೇರಿದಂತೆ ಹಲವಾರು ಹಿಟ್ಗಳನ್ನು ಅವರು ನೀಡಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಬಪ್ಪಿ ಲಹಿರಿ, ಮುಂಬೈನ ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾಗಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಈ ಕುರಿತು ಪಿಟಿಐ ವರದಿ ಮಾಡಿದೆ. ‘ಲಹಿರಿ ಅವರು ಒಂದು ತಿಂಗಳಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು ಮತ್ತು ಸೋಮವಾರ ಡಿಸ್ಚಾರ್ಜ್ ಆಗಿದ್ದರು. ಆದರೆ ಮಂಗಳವಾರ ಅವರ ಆರೋಗ್ಯ ಮತ್ತೆ ಹದಗೆಟ್ಟಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಯಿತು. ಹಲವು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಬಪ್ಪಿ ಅವರು ಮಧ್ಯರಾತ್ರಿಗೆ ಸ್ವಲ್ಪ ಮೊದಲು ನಿಧನರಾದರು’ ಎಂದು ಕ್ರಿಟಿಕೇರ್ ಆಸ್ಪತ್ರೆಯ ನಿರ್ದೇಶಕರಾದ ಡಾ ದೀಪಕ್ ನಾಮಜೋಶಿ ತಿಳಿಸಿದ್ದಾರೆ.
ಪಿಟಿಐ ಹಂಚಿಕೊಂಡ ಮಾಹಿತಿ ಇಲ್ಲಿದೆ:
Singer-composer Bappi Lahiri dies in Mumbai hospital, says doctor
— Press Trust of India (@PTI_News) February 16, 2022
ಬಪ್ಪಿ ಲಹಿರಿ ಅವರು ಕನ್ನಡ ಚಿತ್ರರಂಗದಲ್ಲೂ ಕೆಲಸ ಮಾಡಿದ್ದರು. 1986ರಲ್ಲಿ ತೆರೆಕಂಡ ‘ಕೃಷ್ಣಾ ನೀ ಬೇಗನೇ ಬಾರೋ’, ‘ಆಫ್ರಿಕಾದಲ್ಲಿ ಶೀಲ’ (1986), ‘ಗುರು’ (1989) ಮೊದಲಾದ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದರು. ಇತ್ತೀಚೆಗೆ ‘ಲವ್ ಇನ್ ಮಂಡ್ಯ’ ಚಿತ್ರದ ಗೀತೆಗೂ ಅವರು ಹಾಡಿದ್ದರು.
ಹಿಂದಿ ಹಾಗೂ ಬೆಂಗಾಳಿ ಚಿತ್ರರಂಗದಲ್ಲಿ ಬಪ್ಪ ಲಹಿರಿ ಅವರದ್ದು ದೊಡ್ಡ ಹೆಸರಾಗಿತ್ತು. ಅವರು ಕೊನೆಯದಾಗಿ ಹಾಡಿದ್ದು ‘ಬಾಘಿ 3’ ಚಿತ್ರದ ’ಭಂಕಸ್’. ಬಿಗ್ ಬಾಸ್ 15ರ ವೇದಿಕೆಯಲ್ಲೂ ಬಪ್ಪಿ ಲಹಿರಿ ಇತ್ತೀಚೆಗೆ ಕಾಣಿಸಿಕೊಂಡಿದ್ದರು. ಅದರಲ್ಲಿ ಅವರು ತಮ್ಮ ಮೊಮ್ಮಗ ಸ್ವಸ್ತಿಕ್ ಲಹಿರಿಯ ಆಲ್ಬಂ ಸಾಂಗ್ ಬಗ್ಗೆ ಪರಿಚಯಿಸಿದ್ದರು.
ಭಾರತಕ್ಕೆ ಡಿಸ್ಕೋವನ್ನು ಪರಿಚಯಿಸಿದ ಗಾಯಕರಲ್ಲಿ ಬಪ್ಪಿ ಲಹಿರಿ ಕೂಡ ಒಬ್ಬರು. ಈ ಪ್ರಕಾರದಲ್ಲಿ ಬಪ್ಪಿ ಹಲವಾರು ಹಿಟ್ ಗೀತೆಗಳನ್ನು ನೀಡಿದ್ದಾರೆ. ಬಪ್ಪಿ ಲಹಿರಿ ಅವರು ‘ಬಪ್ಪಿ ಡಾ’ ಎಂದೇ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು. ಅಲೋಕೇಶ್ ಲಹರಿ ಎನ್ನುವುದು ಬಪ್ಪಿ ಲಹರಿಯವರ ಪೂರ್ವನಾಮಧೇಯ. ನಂತರ ಅವರು ಬಪ್ಪಿ ಲಹಿರಿಯಾಗಿ ಗುರುತಿಸಿಕೊಂಡರು.
ಗಾಯನ, ಸಂಗೀತ ನಿರ್ದೇಶನದ ಹೊರತಾಗಿ ಬಪ್ಪಿ ನಿರ್ಮಾಪಕರಾಗಿ, ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದರು. 2014ರಲ್ಲಿ ಬಿಜೆಪಿ ಸೇರಿದ್ದ ಅವರು, ಪಶ್ಚಿಮ ಬಂಗಾಳದ ಶ್ರೇರಾಂಪುರ್ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿದ್ದರು. ಆದರೆ ಬಪ್ಪಿ ಅವರಿಗೆ ಜಯ ಲಭಿಸಿರಲಿಲ್ಲ.
ಬಪ್ಪಿ ಅವರ ನಿಧನಕ್ಕೆ ಚಿತ್ರರಂಗ ಕಂಬನಿ ಮಿಡಿದಿದೆ. ಬಪ್ಪಿ ಅವರ ನಿಧನದಿಂದ ಚಿತ್ರರಂಗದ ಮತ್ತೊಂದು ಹಿರಿಯ ಕೊಂಡಿ ಕಳಚಿದಂತಾಗಿದೆ.
ಇದನ್ನೂ ಓದಿ:
Bhargavi Narayan: ನೇತ್ರ, ದೇಹದಾನದ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದ ಹಿರಿಯ ನಟಿ ಭಾರ್ಗವಿ ನಾರಾಯಣ್
Published On - 8:10 am, Wed, 16 February 22