ರಿಷಬ್ ಶೆಟ್ಟಿಯ ಎದುರು ಮತ್ತೊಂದು ಶಿವಾಜಿ ಸಿನಿಮಾ, ಗೆಲುವು ಯಾರಿಗೆ?
Raja Shivaji: ಬಾಲಿವುಡ್ನಲ್ಲಿ ಈಗಾಗಲೇ ಒಂದು ಶಿವಾಜಿ ಜೀವನ ಆಧರಿಸಿದ ಸಿನಿಮಾ ಘೋಷಿಸಲಾಗಿದ್ದು ಸಿನಿಮಾನಲ್ಲಿ ಕನ್ನಡದ ನಟ ರಿಷಬ್ ಶೆಟ್ಟಿ ಶಿವಾಜಿ ಪಾತ್ರದಲ್ಲಿ ನಟಿಸಲಿದ್ದಾರೆ. ಇದೀಗ ಶಿವಾಜಿ ಬಗೆಗಿನ ಮತ್ತೊಂದು ಸಿನಿಮಾ ಬಾಲಿವುಡ್ನಿಂದಲೇ ಘೋಷಣೆ ಆಗಿದೆ. ಖ್ಯಾತ ನಟ ರಿತೇಶ್ ದೇಶ್ಮುಖ್ ಈ ಸಿನಿಮಾ ನಿರ್ದೇಶಿಸಿ ನಟಿಸಲಿದ್ದಾರೆ. ಹಲವು ಸ್ಟಾರ್ ನಟರು ಈ ಸಿನಿಮಾನಲ್ಲಿದ್ದಾರೆ.

ರಿಷಬ್ ಶೆಟ್ಟಿ (Rishab Shetty) ಹಿಂದಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅದೂ ಛತ್ರಪತಿ ಶಿವಾಜಿ ಪಾತ್ರದಲ್ಲಿ. ಈ ಬಗ್ಗೆ ಕರ್ನಾಟಕದಲ್ಲಿ ಈಗಾಗಲೆ ಚರ್ಚೆಗಳು ಪ್ರಾರಂಭವಾಗಿವೆ. ರಿಷಬ್ ಶೆಟ್ಟಿ, ಮರಾಠ ರಾಜ ಶಿವಾಜಿಯ ಪಾತ್ರದಲ್ಲಿ ನಟಿಸಬಾರದು ಎಂದು ಕೆಲ ಕನ್ನಡಪರ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ. ಸಿನಿಮಾದ ಪೋಸ್ಟರ್ ಮಾತ್ರವೇ ಪ್ರಸ್ತುತ ಬಿಡುಗಡೆ ಆಗಿದ್ದು, ಸಿನಿಮಾದ ಚಿತ್ರೀಕರಣ ಇನ್ನೂ ಪ್ರಾರಂಭವಾಗಿಲ್ಲ. ಅಷ್ಟರಲ್ಲಾಗಲೇ ಬಾಲಿವುಡ್ನಲ್ಲಿ ಮತ್ತೊಂದು ಶಿವಾಜಿ ಸಿನಿಮಾ ಸೆಟ್ಟೇರಿದೆ.
ರಿಷಬ್ ಶೆಟ್ಟಿ ನಟಿಸುತ್ತಿರುವ ಸಿನಿಮಾವನ್ನು ಸಂದೀಪ್ ಸಿಂಗ್ ನಿರ್ದೇಶನ ಮತ್ತು ನಿರ್ಮಾಣ ಮಾಡುತ್ತಿದ್ದಾರೆ. ಇದೀಗ ಶಿವಾಜಿ ಜೀವನ ಆಧರಿಸಿದ ಮತ್ತೊಂದು ಬಾಲಿವುಡ್ ಸಿನಿಮಾ ಘೋಷಣೆಯಾಗಿದೆ. ಸಿನಿಮಾ ಘೋಷಣೆ ಮಾಡಿರುವುದು ನಟ ರಿತೇಶ್ ದೇಶ್ಮುಖ್, ಆದರೆ ಶಿವಾಜಿ ಪಾತ್ರದಲ್ಲಿ ನಟಿಸಲಿರುವುದು ಖ್ಯಾತ ಬಾಲಿವುಡ್ ನಟ ಅಭಿಷೇಕ್ ಬಚ್ಚನ್.
ರಾಜಕಾರಣಿ ಕುಟುಂಬದವರೂ ಆಗಿರುವ ರಿತೇಶ್ ದೇಶ್ಮುಖ್ (ಮಾಜಿ ಸಿಎಂ ವಿಲಾಸ್ ರಾವ್ ದೇಶ್ಮುಖ್ ಪುತ್ರ) ಬಾಲಿವುಡ್ನಲ್ಲಿ ಹಲವು ವರ್ಷಗಳಿಂದಲೂ ನಟರಾಗಿ ಗುರುತಿಸಿಕೊಂಡಿದ್ದು, ಇದೀಗ ಮೊದಲ ಬಾರಿಗೆ ಶಿವಾಜಿ ಸಿನಿಮಾ ಮೂಲಕ ನಿರ್ದೇಶಕನಾಗಿ ಪರಿಚಯಗೊಳ್ಳುತ್ತಿದ್ದಾರೆ. ಶಿವಾಜಿ ಜೀವನ ಕುರಿತ ಸಿನಿಮಾವನ್ನು ರಿತೇಶ್ ದೇಶ್ಮುಕ್ ನಿರ್ದೇಶನ ಮಾಡಲಿದ್ದಾರೆ. ಸಿನಿಮಾಕ್ಕೆ ಬಂಡವಾಳ ಹೂಡುತ್ತಿರುವುದು ರಿತೇಶ್ ಅವರ ಪತ್ನಿ ಜೆನಿಲಿಯಾ ದೇಶ್ಮುಖ್ ಮತ್ತು ಖ್ಯಾತ ನಿರ್ಮಾಪಕಿ ಮತ್ತು ಉದ್ಯಮಿ ಜ್ಯೋತಿ ದೇಶ್ಪಾಂಡೆ.
ಇದನ್ನೂ ಓದಿ:ಮತ್ತೊಮ್ಮೆ ತೆಲುಗು ಸಿನಿಮಾ ಆಯ್ದುಕೊಂಡ ರಿತೇಶ್ ದೇಶ್ಮುಖ್
ಸಿನಿಮಾನಲ್ಲಿ ರಿತೇಶ್ ದೇಶ್ಮುಖ್ ಮತ್ತು ಅಭಿಷೇಕ್ ಬಚ್ಚನ್ ಇಬ್ಬರೂ ಸಹ ಛತ್ರಪತಿ ಶಿವಾಜಿಯ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ರಿತೇಶ್ ದೇಶ್ಮುಖ್ ಯುವ ಶಿವಾಜಿಯ ಪಾತ್ರದಲ್ಲಿ ನಟಿಸಿದರೆ ಅಭಿಷೇಕ್ ಬಚ್ಚನ್ ಹಿರಿಯ ಶಿವಾಜಿಯ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾನಲ್ಲಿ ಸಂಜಯ್ ದತ್ ಮೊಘಲ್ ಔರಂಗಾಜೇಬನ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.
ರಿತೇಶ್, ಅಭಿಷೇಕ್, ಸಂಜಯ್ ದತ್ ಮಾತ್ರವಲ್ಲದೆ ಸಿನಿಮಾನಲ್ಲಿ ಭಾಗ್ಯಶ್ರೀ ಬೊರ್ಸೆ, ಸಚಿನ್ ಖೇಡ್ಕರ್, ಮಹೇಶ್ ಮಂಜ್ರೇಕರ್, ಫರ್ದೀನ್ ಖಾನ್, ಅಮೋಲ್ ಗೊಪ್ತೆ, ಜೆನಿಲಿಯಾ, ಜಿತೇಂದ್ರ ಜೋಶಿ ಅವರುಗಳು ನಟಿಸಲಿದ್ದಾರೆ. ಸಿನಿಮಾಕ್ಕೆ ಸಂತೋಷ್ ಶಿವನ್ ಸಿನಿಮಾಟಾಗ್ರಫಿ ಮಾಡಲಿದ್ದಾರೆ. ಅಜಯ್ ಅತುಲ್ ಅವರು ಸಂಗೀತ ನೀಡಲಿದ್ದಾರೆ. ಸಿನಿಮಾವು ಮುಂದಿನ ವರ್ಷ ಮಹಾರಾಷ್ಟ್ರ ದಿನದಂದು ಅಂದರೆ ಮೇ 1 ಕ್ಕೆ ಆರು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾಕ್ಕೆ ‘ರಾಜಾ ಶಿವಾಜಿ’ ಎಂದು ಹೆಸರಿಡಲಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




