ಮತ್ತೊಮ್ಮೆ ತೆಲುಗು ಸಿನಿಮಾ ಆಯ್ದುಕೊಂಡ ರಿತೇಶ್ ದೇಶ್​ಮುಖ್

Riteish Deshmukh: ಬಾಲಿವುಡ್ ನಟ ರಿತೇಶ್ ದೇಶ್​ಮುಖ್ ಮತ್ತೊಮ್ಮೆ ತೆಲುಗು ಚಿತ್ರರಂಗದ ಮಾಲು ಎತ್ತಿಕೊಳ್ಳುವ ಯೋಜನೆಯಲ್ಲಿದ್ದಾರೆ!

ಮತ್ತೊಮ್ಮೆ ತೆಲುಗು ಸಿನಿಮಾ ಆಯ್ದುಕೊಂಡ ರಿತೇಶ್ ದೇಶ್​ಮುಖ್
ರಿತೇಶ್ ದೇಶ್​ಮುಖ್
Follow us
ಮಂಜುನಾಥ ಸಿ.
|

Updated on: Feb 24, 2024 | 7:53 PM

ಬಾಲಿವುಡ್ ನಟ ರಿತೇಶ್ ದೇಶ್​ಮುಖ್ (Ritesh Deshmukh) ಆಗೊಮ್ಮೆ ಈಗೊಮ್ಮೆ ಮರಾಠಿ ಸಿನಿಮಾಗಳಲ್ಲಿಯೂ ನಟಿಸುತ್ತಿರುತ್ತಾರೆ. ಈ ವರೆಗೆ ಕೇವಲ ಎರಡು ಮರಾಠಿ ಸಿನಿಮಾಗಳಲ್ಲಿ ಮಾತ್ರವೇ ಪೂರ್ಣ ಪ್ರಮಾಣದಲ್ಲಿ ರಿತೇಶ್ ದೇಶ್​ಮುಖ್ ನಟಿಸಿದ್ದಾರೆ. ಒಂದರಲ್ಲಿ ವಿಲನ್ ಆಗಿ ಮತ್ತೊಂದರಲ್ಲಿ ಹೀರೋ ಆಗಿ. ಎರಡೂ ಸಿನಿಮಾಗಳೂ ಸೂಪರ್ ಹಿಟ್ ಆಗಿವೆ. ಅದರಲ್ಲಿಯೂ ಹೀರೋ ಆಗಿ ನಟಿಸಿದ್ದ ‘ವೇದ್’ ಸಿನಿಮಾ ಅಂತೂ ಮರಾಠಿ ಬಾಕ್ಸ್ ಆಫೀಸ್​ನಲ್ಲಿ ದಾಖಲೆಯನ್ನೇ ಮಾಡಿದೆ. ಈ ಸಿನಿಮಾದಲ್ಲಿ ನಾಯಕಿಯಾಗಿ ರಿತೇಶ್ ದೇಶ್​ಮುಖ್ ಪತ್ನಿ ಜೆನಿಲಿಯಾ ನಟಿಸಿದ್ದಾರೆ.

ಮರಾಠಿ ಚಿತ್ರರಂಗದಲ್ಲಿ ದಾಖಲೆಗಳನ್ನು ಬರೆದ ‘ವೇದ್’ ಸಿನಿಮಾ ತೆಲುಗಿನ ‘ಮಜಿಲಿ’ ಸಿನಿಮಾದ ರೀಮೇಕ್ ಆಗಿತ್ತು. ಮೂಲ ಸಿನಿಮಾದಲ್ಲಿಯೂ ನಿಜ ಜೀವನದಲ್ಲಿ ಆಗ ಪತಿ-ಪತ್ನಿಯರಾಗಿದ್ದ ಸಮಂತಾ ಹಾಗೂ ನಾಗಚೈತನ್ಯ ನಟಿಸಿದ್ದರು. ಆ ಸಿನಿಮಾದ ಮರಾಠಿ ರೀಮೇಕ್​ನಲ್ಲಿಯೂ ಸಹ ನಿಜ ಜೀವನದ ಪತಿ-ಪತ್ನಿಯರಾದ ರಿತೇಶ್ ಹಾಗೂ ಜೆನಿಲಿಯಾ ನಟಿಸಿದ್ದರು. ಮತ್ತೊಂದು ವಿಶೇಷವೆಂದರೆ ‘ವೇದ್’ ಸಿನಿಮಾಕ್ಕೆ ಚಿತ್ರಕತೆ, ಸಂಭಾಷಣೆ, ನಿರ್ದೇಶನ, ನಿರ್ಮಾಣ ಮಾಡಿದ್ದು ಸಹ ರಿತೇಶ್ ದೇಶ್​ಮುಖ್ ಅವರೇ.

ಇದನ್ನೂ ಓದಿ:ನಟ ಕಿಚ್ಚ ಸುದೀಪ್ ಮನೆಯಲ್ಲಿ ಭೋಜನ ಸವಿದ ಬಾಲಿವುಡ್ ಕ್ಯೂಟ್ ಕಪಲ್

ಇದೀಗ ಮತ್ತೊಂದು ಸಿನಿಮಾವನ್ನು ಮರಾಠಿಯಲ್ಲಿ ಮಾಡಲು ರಿತೇಶ್ ದೇಶ್​ಮುಖ್ ಮುಂದಾಗಿದ್ದಾರೆ. ಈ ಬಾರಿಯೂ ಸಹ ತೆಲುಗು ಚಿತ್ರರಂಗದಿಂದಲೇ ಸಿನಿಮಾ ಒಂದನ್ನು ರೀಮೇಕ್​ಗಾಗಿ ಆಯ್ಕೆ ಮಾಡಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಕೆಲವು ಸುದ್ದಿಗಳ ಪ್ರಕಾರ, ನಾನಿ ನಟಿಸಿರುವ ‘ಹಾಯ್ ನಾನ್ನ’ ಸಿನಿಮಾವನ್ನು ರಿತೇಶ್ ದೇಶ್​ಮುಖ್ ಮರಾಠಿಗೆ ರೀಮೇಕ್ ಮಾಡಲಿದ್ದಾರೆ ಎನ್ನಲಾಗುತ್ತಿದೆ.

ರಿತೇಶ್ ದೇಶ್​ಮುಖ್​ಗೆ ಇತ್ತೀಚೆಗೆ ಬಾಲಿವುಡ್​ನಲ್ಲಿ ಅವಕಾಶಗಳು ತುಸು ಕಡಿಮೆಯಾಗಿವೆ. ಪೋಷಕ ಪಾತ್ರ, ಯುವ ನಾಯಕ ನಟರ ಅಣ್ಣನ ಪಾತ್ರ, ಕಡಿಮೆ ದರ್ಜೆಯ ಹಾಸ್ಯ ಪಾತ್ರಗಳು ಇಂಥಹುವೇ ಬರುತ್ತಿವೆ ಹಾಗಾಗಿ ರಿತೇಶ್ ತಮ್ಮ ಗಮನವನ್ನು ಮರಾಠಿ ಚಿತ್ರರಂಗದ ಕಡೆಗೆ ಸಂಪೂರ್ಣವಾಗಿ ತಿರುಗಿಸುವ ಯೋಚನೆಯಲ್ಲಿದ್ದಾರೆ. ಇದರ ಭಾಗವಾಗಿಯೇ ಈಗ ಮತ್ತೊಂದು ತೆಲುಗು ಸಿನಿಮಾವನ್ನು ಮರಾಠಿಗೆ ಕೊಂಡೊಯ್ಯುವ ಪ್ರಯಾಸದಲ್ಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ