ಸತತ ಸೋಲಿನಿಂದ ಕಂಗೆಟ್ಟಿದ್ದ ಬಾಲಿವುಡ್ಗೆ ಹೊಸ ಚೈತನ್ಯ ನೀಡಲು ‘ಸಾಮ್ರಾಟ್ ಪೃಥ್ವಿರಾಜ್’ (Samrat Prithviraj) ಸಿನಿಮಾ ರಿಲೀಸ್ ಆಗಿದೆ. ಅಕ್ಷಯ್ ಕುಮಾರ್ (Akshay Kumar) ಅಭಿನಯದ ಈ ಚಿತ್ರದ ಬಗ್ಗೆ ಅನೇಕ ಗಣ್ಯರು ಆಸಕ್ತಿ ತೋರಿಸುತ್ತಿದ್ದಾರೆ. ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಅನೇಕ ರಾಜಕಾರಣಿಗಳು ಈ ಚಿತ್ರವನ್ನು ವೀಕ್ಷಿಸಿ ಭೇಷ್ ಎಂದಿದ್ದಾರೆ. ಈಗ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಅವರು ಕೂಡ ‘ಸಾಮ್ರಾಟ್ ಪೃಥ್ವಿರಾಜ್’ ಚಿತ್ರವನ್ನು ವೀಕ್ಷಿಸಲಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಈ ಸಿನಿಮಾದಲ್ಲಿ ಐತಿಹಾಸಿಕ ಕಥಾಹಂದರ ಇದೆ. ಅಕ್ಷಯ್ ಕುಮಾರ್ ಅವರಿಗೆ ಜೋಡಿಯಾಗಿ ಮಾನುಷಿ ಚಿಲ್ಲರ್ ನಟಿಸಿದ್ದಾರೆ. ಚಂದ್ರಪ್ರಕಾಶ್ ದ್ವಿವೇದಿ ನಿರ್ದೇಶನ ಮಾಡಿದ್ದು, ಉತ್ತಮ ಓಪನಿಂಗ್ ಪಡೆಯುವಲ್ಲಿ ಈ ಸಿನಿಮಾ ಯಶಸ್ವಿ ಆಗಿದೆ.
ದೇಶಭಕ್ತಿ ಕಥಾಹಂದರ ಸಿನಿಮಾಗಳಿಂದ ಅಕ್ಷಯ್ ಕುಮಾರ್ ಅವರು ಈ ಹಿಂದೆ ಕೂಡ ಗೆಲುವು ಕಂಡಿದ್ದರು. ಈಗ ಅವರಿಗೆ ‘ಸಾಮ್ರಾಟ್ ಪೃಥ್ವಿರಾಜ್’ ಚಿತ್ರದ ಮೂಲಕ ಅಂಥದ್ದೇ ಯಶಸ್ಸು ಸಿಗುವ ಸಾಧ್ಯತೆ ದಟ್ಟವಾಗಿದೆ. ಐತಿಹಾಸಿಕ ಕಥಾಹಂದರ ಇರುವ ಈ ಚಿತ್ರವನ್ನು ಮೋಹನ್ ಭಾಗವತ್ ನೋಡಲಿರುವುದರಿಂದ ಚಿತ್ರತಂಡದ ಬಲ ಹೆಚ್ಚಿದಂತಾಗಿದೆ. ಇಂದು (ಜೂನ್ 3) ದೆಹಲಿಯಲ್ಲಿ ಅವರಿಗಾಗಿ ವಿಶೇಷ ಪ್ರದರ್ಶನ ಏರ್ಪಡಿಸಲಾಗುತ್ತಿದೆ.
ಇದನ್ನೂ ಓದಿ: ಬಾಚಣಿಗೆಯಿಂದ ಹಲ್ಲು ಕೆರೆದುಕೊಂಡ ಅಕ್ಷಯ್ ಕುಮಾರ್; ಇದು ಗುಟ್ಕಾ ಎಫೆಕ್ಟ್ ಎಂದ ನೆಟ್ಟಿಗರು
‘ಸಾಮ್ರಾಟ್ ಪೃಥ್ವಿರಾಜ್’ ಚಿತ್ರಕ್ಕೆ ತೆರಿಗೆ ವಿನಾಯಿತಿ:
ಯೋಗಿ ಆದಿತ್ಯನಾಥ್ ಅವರು ಈ ಸಿನಿಮಾವನ್ನು ನೋಡಿ ಇಷ್ಟಪಟ್ಟಿದ್ದಾರೆ. ಹಾಗಾಗಿ ಅವರು ಉತ್ತರ ಪ್ರದೇಶದಲ್ಲಿ ಈ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಿದ್ದಾರೆ. ಇದು ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ಫಸ್ಟ್ ಡೇ ಫಸ್ಟ್ ಶೋ ನೋಡಿದ ಪ್ರೇಕ್ಷಕರಿಂದ ಸಿನಿಮಾ ಬಗ್ಗೆ ಉತ್ತಮ ವಿಮರ್ಶೆ ವ್ಯಕ್ತವಾಗುತ್ತಿದೆ.
ಅಮಿತ್ ಶಾ ಮೆಚ್ಚಿದ ‘ಸಾಮ್ರಾಟ್ ಪೃಥ್ವಿರಾಜ್’:
ತಮ್ಮ ಕುಟುಂಬದ ಸದಸ್ಯರ ಜೊತೆ ಕುಳಿತು ಅಮಿತ್ ಶಾ ಅವರು ‘ಸಾಮ್ರಾಟ್ ಪೃಥ್ವಿರಾಜ್’ ಚಿತ್ರವನ್ನು ಕಣ್ತುಂಬಿಕೊಂಡಿದ್ದಾರೆ. ‘ಇತಿಹಾಸದ ವಿದ್ಯಾರ್ಥಿ ಆದ ನಾನು ಈ ಸಿನಿಮಾ ನೋಡಿ ಕೇವಲ ಎಂಜಾಯ್ ಮಾಡಲಿಲ್ಲ. ಭಾರತೀಯರಿಗೆ ಈ ಚಿತ್ರ ಎಷ್ಟು ಮುಖ್ಯ ಎಂಬುದನ್ನು ಕೂಡ ಅರ್ಥ ಮಾಡಿಕೊಂಡೆ’ ಎಂದು ಅಮಿತ್ ಶಾ ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.