ನಟ ಸೈಫ್ ಅಲಿ ಖಾನ್ (Saif Ali Khan) ಅವರು ಬಾಲಿವುಡ್ನ ಬೇಡಿಕೆಯ ನಟ. ಹಲವು ಚಿತ್ರಗಳನ್ನು ಮಾಡಿ ಅವರು ಭೇಷ್ ಎನಿಸಿಕೊಂಡಿದ್ದಾರೆ. ಸೈಫ್ ಅಲಿ ಖಾನ್ ಅವರ ತಂದೆ, ಮಾಜಿ ಕ್ರಿಕೆಟರ್, ನವಾಬ್ ಮನ್ಸೂರ್ ಅಲಿ (Mansoor Ali Khan) ಖಾನ್ ಅವರು ಹರಿಯಾಣದ ಪಟೌಡಿಯಲ್ಲಿ ಅರಮನೆ ಹೊಂದಿದ್ದರು. ಇದು ಈಗ ಸೈಫ್ ಅಲಿ ಖಾನ್ ಹೆಸರಲ್ಲಿದೆ. ಇದೇ ಹೆಸರಲ್ಲಿ ಈಗ ಫ್ಯಾಷನ್ ಬ್ರ್ಯಾಂಡ್ ಆರಂಭಿಸಿದ್ದಾರೆ ಸೈಫ್ ಅಲಿ ಖಾನ್. ಈ ಬ್ರ್ಯಾಂಡ್ನ ಪ್ರಚಾರಕ್ಕಾಗಿ ಹೊಸ ವಿಡಿಯೋ ಒಂದನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಪಟೌಡಿ ಅರಮನೆಯ ಚಿತ್ರಣ ಅನಾವರಣಗೊಂಡಿದೆ.
ಸೈಫ್ ಅಲಿ ಖಾನ್ ಅವರ ಪಟೌಡಿ ಅರಮನೆ ನೋಡಬೇಕು ಎಂಬುದು ಅವರ ಅಭಿಮಾನಿಗಳ ಕನಸಾಗಿತ್ತು. ಈ ಮೊದಲು ಕೆಲ ಫೋಟೋಗಳು ವೈರಲ್ ಆಗಿದ್ದವು. ಈಗ ಪಟೌಡಿ ಪ್ಯಾಲೇಸ್ನಲ್ಲಿಯೇ ‘ಹೌಸ್ ಆಫ್ ಪಟೌಡಿ’ ಬ್ರ್ಯಾಂಡ್ನ ಪ್ರೋಮೋ ಶೂಟ್ ಮಾಡಲಾಗಿದೆ. ಈ ವಿಡಿಯೋವನ್ನು ಯೂಟ್ಯೂಬ್ನಲ್ಲಿ ಹಂಚಿಕೊಳ್ಳಲಾಗಿದೆ.
ಪಟೌಡಿ ಅರಮನೆ ಹೊರಗಿನಿಂದ ನೋಡಲು ಎಷ್ಟು ಸುಂದರವೋ ಒಳಗೂ ಅಷ್ಟೇ ಸುಂದರ. ಒಳ ಭಾಗದಲ್ಲಿ ಹಳೆಯ ಕಾಲದಲ್ಲಿ ಕ್ಲಿಕ್ಕಿಸಿದ ಫೋಟೋಗಳನ್ನು ನೇತು ಹಾಕಲಾಗಿದೆ. ಮನ್ಸೂರ್ ಅಲಿ ಖಾನ್ ಅವರು ಟೀಂ ಇಂಡಿಯಾದಲ್ಲಿದ್ದಾಗ ತೆಗೆದ ಫೋಟೋಗಳು ಗೋಡೆಯ ಮೇಲಿವೆ. ಹಳೆಯ ಕಾಲದ ವಸ್ತುಗಳು ಇವೆ. ನೆಲಕ್ಕೆ ಚೆಸ್ಬೋರ್ಡ್ ಮಾದರಿಯ ಮಾರ್ಬಲ್ಗಳನ್ನು ಹಾಕಲಾಗಿದೆ. ಈ ವಿಡಿಯೋದಲ್ಲಿ ತಮ್ಮ ಬ್ರ್ಯಾಂಡ್ನ ವಿವಿಧ ಡ್ರೆಸ್ಗಳನ್ನು ಹಾಕಿ ಸೈಫ್ ಅಲಿ ಖಾನ್ ಮಿಂಚಿದ್ದಾರೆ.
ಸೈಫ್ ಅಲಿ ಖಾನ್ ಅವರು ಮಾಜಿ ಕ್ರಿಕೆಟರ್ ಹಾಗೂ ಪಟೌಡಿಯ ನವಾಬ್ ಆಗಿದ್ದ ಮನ್ಸೂರ್ ಅಲಿ ಖಾನ್ ಅವರ ಮಗ. ಮನ್ಸೂರ್ ಅಲಿ ಖಾನ್ ಪತ್ನಿ ಶರ್ಮಿಳಾ ಟಾಗೋರ್ ಅವರು ಬಣ್ಣದ ಲೋಕದಲ್ಲಿ ಮಿಂಚಿದ್ದರು.
ಇದನ್ನೂ ಓದಿ: Ibrahim Ali Khan: ಬಾಲಿವುಡ್ ಪ್ರವೇಶಿಸಲು ಸೈಫ್ ಅಲಿ ಖಾನ್ ಪುತ್ರ ಇಬ್ರಾಹಿಂ ಸಿದ್ಧ; ಆದರೆ ನಟನಾಗಿ ಅಲ್ಲ
ಸೈಫ್ ಅಲಿ ಖಾನ್ ಅವರು ಇತ್ತೀಚೆಗೆ ಸಾಕಷ್ಟು ಟೀಕೆಗೆ ಒಳಗಾಗುತ್ತಿದ್ದಾರೆ. ಅವರು ನಟಿಸಿರುವ ‘ಆದಿಪುರಷ್’ ಚಿತ್ರದ ಟ್ರೇಲರ್ ಟ್ರೋಲ್ ಆಗಿತ್ತು. ಈ ಚಿತ್ರದಲ್ಲಿ ಸೈಫ್ ಅವರು ರಾವಣನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪಾತ್ರ ಅಲ್ಲಾವುದ್ದೀನ್ ಖಿಲ್ಜಿ ರೀತಿಯಲ್ಲಿ ಇದೆ ಎಂದು ಟೀಕಿಸಲಾಗಿತ್ತು. ವಿಎಫ್ಎಕ್ಸ್ ಮೂಲಕ ಸೈಫ್ ಗಡ್ಡಕ್ಕೆ ಕತ್ತರಿ ಹಾಕಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ ಎಂದು ಇತ್ತೀಚೆಗೆ ವರದಿ ಆಗಿತ್ತು.