ನಟ ಸಲ್ಮಾನ್ ಖಾನ್ (Salman Khan) ಅವರ ಸಿನಿಮಾಗಳು ಇತ್ತೀಚಿನ ವರ್ಷಗಳಲ್ಲಿ ಹೇಳಿಕೊಳ್ಳುವಷ್ಟು ಯಶಸ್ಸು ಕಂಡಿಲ್ಲ. ‘ಅಂತಿಮ್’, ‘ರಾಧೆ’ ಸಿನಿಮಾಗಳು ನೆಲ ಕಚ್ಚಿದವು. ಅದರಿಂದ ಅವರ ಅಭಿಮಾನಿಗಳಿಗೆ ಬೇಸರ ಆಗಿದೆ. ಈಗ ಅವರು ‘ಕಭಿ ಈದ್ ಕಭಿ ದಿವಾಲಿ’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರದ ಹಣೆಬರಹ ಏನಾಗಲಿದೆಯೋ ತಿಳಿದಿಲ್ಲ. ಆದರೆ ಮುಂದಿನ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಸಲ್ಮಾನ್ ಖಾನ್ ಈಗಲೇ ಪ್ಲ್ಯಾನ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಸಲ್ಲುಗೆ ತುರ್ತಾಗಿ ಒಂದು ಗೆಲುವು ಬೇಕಿದೆ. ಅದಕ್ಕಾಗಿ ಅವರು ದಕ್ಷಿಣ ಭಾರತದ ಸಿನಿಮಾ ಇಂಡಸ್ಟ್ರಿ ಕಡೆಗೆ ನೋಡುತ್ತಿದ್ದಾರೆ. ಇಲ್ಲಿನ ತಂತ್ರಜ್ಞರು ಮತ್ತು ನಿರ್ಮಾಣ ಸಂಸ್ಥೆಯ ಸಹಕಾರದಿಂದ ಯಶಸ್ಸು ಕಾಣಬೇಕು ಎಂದು ಅವರು ನಿರ್ಧರಿಸಿದಂತಿದೆ. ಮೂಲಗಳ ಪ್ರಕಾರ ಅವರು ‘ವಿಕ್ರಮ್’ (Vikram Movie) ಚಿತ್ರದ ನಿರ್ದೇಶಕ ಲೋಕೇಶ್ ಕನಗರಾಜ್ (Lokesh Kanagaraj) ಜೊತೆ ಕೈ ಜೋಡಿಸುವ ಸಾಧ್ಯತೆ ಹೆಚ್ಚಿದೆ.
ಈ ವರ್ಷ ತೆರೆಕಂಡ ‘ವಿಕ್ರಮ್’ ಸಿನಿಮಾ ಮೂಲಕ ಲೋಕೇಶ್ ಕನಗರಾಜ್ ಅವರಿಗೆ ಭಾರಿ ಯಶಸ್ಸು ಸಿಕ್ಕಿದೆ. ಕಮಲ್ ಹಾಸನ್ ನಟನೆಯ ಈ ಚಿತ್ರವನ್ನು ಪ್ರೇಕ್ಷಕರು ಮೆಚ್ಚಿಕೊಂಡರು. ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡುವ ಮೂಲಕ ಕಮಲ್ ಹಾಸನ್ ವೃತ್ತಿಬದುಕಿನ ದೊಡ್ಡ ಹಿಟ್ ಎಂಬ ಖ್ಯಾತಿಗೆ ಈ ಸಿನಿಮಾ ಪಾತ್ರವಾಯಿತು. ಈ ಯಶಸ್ಸಿನ ಬಳಿಕ ಲೋಕೇಶ್ ಕನಗರಾಜ್ ಅವರಿಗೆ ಹಲವು ಕಡೆಗಳಿಂದ ಆಫರ್ ಬರುತ್ತಿದೆ.
ದಕ್ಷಿಣ ಭಾರತದಲ್ಲಿ ‘ಮೈತ್ರಿ ಮೂವೀ ಮೇಕರ್ಸ್’ ಸಂಸ್ಥೆ ಜನಪ್ರಿಯವಾಗಿದೆ. ‘ಪುಷ್ಪ’, ‘ರಂಗಸ್ಥಲಂ’, ‘ಉಪ್ಪೇನಾ’ ಮುಂತಾದ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ಮಾಣ ಮಾಡಿದ ಕೀರ್ತಿ ಈ ಸಂಸ್ಥೆಗೆ ಸಲ್ಲುತ್ತದೆ. ಈಗ ಸಲ್ಮಾನ್ ಖಾನ್ ನಟನೆಯ ಹೊಸ ಚಿತ್ರಕ್ಕೆ ಬಂಡವಾಳ ಹೂಡಲು ಈ ಸಂಸ್ಥೆ ಮುಂದೆ ಬಂದಿದೆ ಎನ್ನಲಾಗುತ್ತಿದೆ. ಅದೇ ಪ್ರಾಜೆಕ್ಟ್ಗೆ ಲೋಕೇಶ್ ಕನಗರಾಜ್ ನಿರ್ದೇಶನ ಮಾಡಲಿದ್ದಾರೆ ಎಂದು ‘ಬಾಲಿವುಡ್ ಹಂಗಾಮಾ’ ವರದಿ ಮಾಡಿದೆ.
ಸಲ್ಮಾನ್ ಖಾನ್ ಅವರಿಗೆ ದಕ್ಷಿಣ ಭಾರತದ ಚಿತ್ರರಂಗದ ಸೆಲೆಬ್ರಿಟಿಗಳ ಜೊತೆಗೆ ಉತ್ತಮ ನಂಟು ಇದೆ. ಕಿಚ್ಚ ಸುದೀಪ್, ‘ಮೆಗಾ ಸ್ಟಾರ್’ ಚಿರಂಜೀವಿ ಮುಂತಾದ ನಟರ ಜೊತೆ ಅವರು ಒಡನಾಟ ಇಟ್ಟುಕೊಂಡಿದ್ದಾರೆ. ಚಿರಂಜೀವಿ ನಟನೆಯ ‘ಗಾಡ್ ಫಾದರ್’ ಚಿತ್ರದಲ್ಲಿ ಅವರು ಅತಿಥಿ ಪಾತ್ರ ಮಾಡುತ್ತಿದ್ದಾರೆ. ಆ ಚಿತ್ರದ ಕೆಲಸಗಳ ನಿಮಿತ್ತ ಹೈದರಾಬಾದ್ಗೆ ಬಂದಾಗಲೇ ‘ಮೈತ್ರಿ ಮೂವೀ ಮೇಕರ್ಸ್’ ಜೊತೆ ಹೊಸ ಚಿತ್ರದ ಮಾತುಕಥೆ ನಡೆದಿದೆ ಎಂದು ವರದಿ ಆಗಿದೆ.
Published On - 7:22 am, Tue, 19 July 22