ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಬೆದರಿಕೆ ಹೆಚ್ಚಾಗಿದೆ. ಇದರಿಂದ ಅವರಿಗೆ ಭದ್ರತೆ ಕೂಡ ಹೆಚ್ಚಿಸಲಾಗಿದೆ. ಸಲ್ಮಾನ್ ಖಾನ್ ಆಪ್ತ ಎನಿಸಿಕೊಂಡಿದ್ದ ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ಧಿಕಿ ಅವರನ್ನು ಹತ್ಯೆ ಮಾಡಲಾಗಿದೆ. ಇದಾದ ಬಳಿಕ ಸಲ್ಲು ಎಚ್ಚೆತ್ತುಕೊಂಡಿದ್ದಾರೆ. ಹೀಗಿರುವಾಗಲೇ ಅವರ ಹಳೆಯ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅವರು ‘ಏನಾಗಬೇಕೋ ಅದು ಆಗೇ ಆಗುತ್ತದೆ’ ಎಂದು ಹೇಳಿದ್ದರು.
ಈ ಮೊದಲು ಸಲ್ಮಾನ್ ಖಾನ್ ಅವರು ‘ಆಪ್ ಕಿ ಅದಾಲತ್’ಗೆ ಬಂದಿದ್ದರು. ಈ ವೇಳೆ ಸಲ್ಮಾನ್ ಖಾನ್ಗೆ ರಜತ್ ಶರ್ಮಾ ಅವರು ಅನೇಕ ಪ್ರಶ್ನೆಗಳನ್ನು ಕೇಳಿದ್ದರು. ಈ ಪ್ರಶ್ನೆಗಳಿಗೆ ಸಲ್ಲು ಉತ್ತರ ಕೊಟ್ಟಿದ್ದರು. ಅವರು ಸಾವಿಗೆ ಭಯಪಟ್ಟು ಕುಳಿತುಕೊಂಡಿಲ್ಲ. ಇದನ್ನು ಪರೋಕ್ಷವಾಗಿ ಹೇಳಿದ್ದರು.
‘ಸಲ್ಮಾನ್ ನಿಮಗೆ ಬೆದರಿಕೆ ಇದೆ. ದೇಶದಲ್ಲೂ ಇದೆ, ವಿದೇಶದಲ್ಲಿ ಇದೆ. ನಿಮಗೆ ಸಾಕಷ್ಟು ಭದ್ರತೆ ನೀಡಲಾಗಿದೆ. ಆದರೆ, ನೀವು ಇದನ್ನು ಗಂಭೀರವಾಗಿ ಸ್ವೀಕರಿಸಿಲ್ಲವಲ್ಲ’ ಎಂದು ರಜತ್ ಶರ್ಮಾ ಅವರು ಕೇಳಿದರು. ಇದಕ್ಕೆ ಉತ್ತರಿಸಿದ ಸಲ್ಮಾನ್ ಖಾನ್, ‘ಎಲ್ಲವನ್ನೂ ಮಾಡುತ್ತಿದ್ದೇನೆ. ಏನೇನು ಮಾಡಬೇಕು ಎಂದು ಹೇಳಿದ್ದಾರೋ ಅದನ್ನು ಮಾಡುತ್ತೇನೆ’ ಎಂದು ಸಲ್ಲು ಹೇಳಿದರು.
‘ಸಿನಿಮಾ ಪ್ರೆಸ್ಮೀಟ್ ಅಟೆಂಡ್ ಮಾಡ್ತೀರಾ, ಶೂಟಿಂಗ್ ಮಾಡ್ತಿದೀರಾ, ಇಫ್ತಾರ್ ಕೂಟದಲ್ಲಿ ಭಾಗಿ ಆಗ್ತಿದರಲ್ಲ. ಭಯ ಆಗುವುದಿಲ್ಲವೇ’ ಎಂದು ಸಲ್ಮಾನ್ ಕೇಳಲಾಯಿತು. ‘ಭದ್ರತೆಯೊಂದಿಗೆ ಹೋಗುತ್ತಿದ್ದೇನೆ. ಏನಾಗಬೇಕೋ ಅದು ಆಗುತ್ತದೆ. ಏನೇ ಮಾಡಿದರೂ ಅದು ಆಗೇ ಆಗುತ್ತದೆ. ಮೇಲೆ ದೇವರಿದ್ದಾನೆ ಎಂದು ನಾನು ನಂಬಿದ್ದೇನೆ’ ಎಂದು ಸಲ್ಮಾನ್ ಖಾನ್ ಹೇಳಿದ್ದರು.
ಇದನ್ನೂ ಓದಿ: ಅದೊಂದು ಕೆಲಸ ಮಾಡಿದರೆ ಸಲ್ಮಾನ್ ಖಾನ್ ಅನ್ನು ಕ್ಷಮಿಸುತ್ತೇನೆ: ಲಾರೆನ್ಸ್ ಬಿಷ್ಣೊಯಿ
ಸಲ್ಮಾನ್ ಖಾನ್ ಅವರು ಕೃಷ್ಣ ಮೃಗ ಕೊಂದ ಆರೋಪ ಎದುರಿಸುತ್ತಿದ್ದಾರೆ. ಇದರಿಂದ ಅವರು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನಿಂದ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನವರು ಸಲ್ಮಾನ್ ಖಾನ್ ಅವರನ್ನು ಕೊಲ್ಲುವ ಬೆದರಿಕೆ ಹಾಕುತ್ತಿದ್ದಾರೆ. ಕೃಷ್ಣ ಮೃಗವನ್ನು ಇವರು ದೇವರೆಂದು ಪೂಜೆ ಮಾಡುತ್ತಾರೆ. ಆದರೆ, ಅದನ್ನು ಸಲ್ಮಾನ್ ಖಾನ್ ಕೊಂದಿದ್ದಕ್ಕೆ ಸಿಟ್ಟಿದೆ. ಹೀಗಾಗಿ, ಸಲ್ಮಾನ್ ಖಾನ್ನ ಮುಗಿಸುವ ಪ್ರಯತ್ನ ನಡೆಯುತ್ತಿದೆ. ಸಲ್ಮಾನ್ ಖಾನ್ ಅವರ ಮನೆಯ ಮೇಲೆ ಗುಂಡಿನ ದಾಳಿ ನಡೆದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.