ಮತ್ತೊಂದು ಬುಲೆಟ್ ಪ್ರೂಫ್ ಕಾರು ಖರೀದಿಸಿದ ಸಲ್ಮಾನ್ ಖಾನ್: ಬೆಲೆ ಎಷ್ಟು ಕೋಟಿ?
ಸಲ್ಮಾನ್ ಖಾನ್ ಗೆ ಜೀವ ಬೆದರಿಕೆ ಇದೆ. ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ನ ಸದಸ್ಯರು ಸಲ್ಮಾನ್ ಖಾನ್ ಅನ್ನು ಕೊಲ್ಲುವ ಪ್ರಯತ್ನದಲ್ಲಿದ್ದಾರೆ. ಸರ್ಕಾರ ಸಲ್ಮಾನ್ ಖಾನ್ರ ಭದ್ರತೆ ಹೆಚ್ಚಿಸಿದೆ. ಇದರ ನಡುವೆ ಸಲ್ಮಾನ್ ಖಾನ್ ಸ್ವತಃ ತಮ್ಮ ಭದ್ರತೆಯ ಜವಾಬ್ದಾರಿ ಹೊತ್ತುಕೊಂಡಿದ್ದು, ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡಿ ಬುಲೆಟ್ ಪ್ರೂಫ್ ಕಾರು ತಯಾರು ಮಾಡಿಕೊಂಡಿದ್ದಾರೆ.
ಬಾಲಿವುಡ್ ನಟ ಸಲ್ಮಾನ್ ಖಾನ್ಗೆ ಜೀವ ಬೆದರಿಕೆ ಹೆಚ್ಚಾಗಿದೆ. ಲಾರೆನ್ಸ್ ಬಿಷ್ಣೋಯಿ ಮತ್ತು ಅವನ ಸಹಚರರಲು ಸಲ್ಮಾನ್ ಖಾನ್ ಅನ್ನು ಹೇಗಾದರೂ ಮಾಡಿ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಇದಕ್ಕಾಗಿ ಹಗಲು-ರಾತ್ರಿ ಪ್ರಯತ್ನ ಪಡುತ್ತಲೇ ಇದ್ದಾರೆ. ಇತ್ತೀಚೆಗಷ್ಟೆ ಸಲ್ಮಾನ್ ಖಾನ್ರ ಆಪ್ತ ಬಾಬಾ ಸಿದ್ಧಿಖಿ ಅವರನ್ನು ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಕೊಂದಿದೆ. ಇದರ ಬೆನ್ನಲ್ಲೆ ಸಲ್ಮಾನ್ ಖಾನ್ ಈಗ ಇನ್ನಷ್ಟು ಜಾಗೃತರಾಗಿದ್ದಾರೆ. ಅವರಿಗೆ ನೀಡಲಾಗುತ್ತಿದ್ದ ಭದ್ರತೆಯನ್ನು ಸಹ ಹೆಚ್ಚಿಸಲಾಗಿದೆ. ಸಲ್ಮಾನ್ ಖಾನ್ ಸಹ ಸರ್ಕಾರದ ಮೇಲೆ ಅವಲಂಬಿತವಾಗದೆ ತಮ್ಮ ಭದ್ರತೆಯ ಬಗ್ಗೆ ತಾವೇ ಕಾಳಜಿ ವಹಿಸಿದ್ದಾರೆ.
ಸಲ್ಮಾನ್ ಖಾನ್ಗೆ ಈಗಾಗಲೇ ಖಾಸಗಿ ಭದ್ರತಾ ಸಂಸ್ಥೆಯೊಂದು ಭದ್ರತೆ ನೀಡುತ್ತಿದೆ. ಸಲ್ಮಾನ್ ಖಾನ್ರ ಖಾಸಗಿ ಅಂಗರಕ್ಷಕ ಶೇರಾ ಸಹ ಜೊತೆಗೇ ಇರುತ್ತಾರೆ. ಇದೆಲ್ಲದರ ಜೊತೆಗೆ ಸಲ್ಮಾನ್ ಖಾನ್ ಮುಂಬೈ ಪೊಲೀಸರಿಂದ ಪರವಾನಗಿ ಪಡೆದು ಆಟೊಮ್ಯಾಟಿಕ್ ಬಂದೂಕೊಂದನ್ನು ಸಹ ಪಡೆದುಕೊಂಡಿದ್ದಾರೆ. ಇವುಗಳ ಜೊತೆಗೆ ಸಲ್ಮಾನ್ ಖಾನ್ ಬುಲೆಟ್ ಕಾರೊಂದನ್ನು ಇತ್ತೀಚೆಗೆ ಖರೀದಿ ಮಾಡಿದ್ದಾರೆ ಇದಕ್ಕಾಗಿ ಭಾರಿ ಮೊತ್ತವನ್ನೇ ತೆತ್ತಿದ್ದಾರೆ.
ಸಲ್ಮಾನ್ ಖಾನ್ ಸಾಮಾನ್ಯವಾಗಿ ಮುಂಬೈನಲ್ಲಿ ಓಡಾಡಲು ಬಳಸುವುದು ಟೊಯೊಟಾ ಲ್ಯಾಂಡ್ ಕ್ರೂಸರ್ ಕಾರನ್ನು ಹೆಚ್ಚಾಗಿ ಬಳಸುತ್ತಾರೆ. ಈ ಕಾರಿಗೆ ವಿಶೇಷ ಮಾಡಿಫಿಕೇಶನ್ ಮಾಡಿಸಿ ಇದನ್ನು ಬುಲೆಟ್ ಪ್ರೂಫ್ ಕಾರನ್ನಾಗಿ ಬದಲಾವಣೆ ಮಾಡಿಸಿದ್ದರು. ಆದರೆ ಇತ್ತೀಚೆಗೆ ಬಾಬಾ ಸಿದ್ಧಿಕಿ ನಿಧನದ ಬಳಿಕ ಸಲ್ಮಾನ್ ಖಾನ್ ಹೊಸ ಬುಲೆಟ್ ಪ್ರೂಫ್ ಕಾರನ್ನೇ ಖರೀದಿ ಮಾಡಿದ್ದಾರೆ ಎಂದು ಬಾಲಿವುಡ್ನ ಮ್ಯಾಗಜಿನ್ ಪಿಂಕ್ವಿಲ್ಲಾ ವರದಿ ಮಾಡಿದೆ. ಈ ಬುಲೆಟ್ ಪ್ರೂಫ್ ಕಾರಿಗೆ 2 ಕೋಟಿ ರೂಪಾಯಿ ಹಣ ವೆಚ್ಚ ಮಾಡಿದ್ದಾರಂತೆ ಸಲ್ಮಾನ್ ಖಾನ್.
ಇದನ್ನೂ ಓದಿ:ಸಲ್ಮಾನ್ ಖಾನ್ ಹತ್ಯೆಗೆ ಸ್ಕೆಚ್ ಹಾಕಿರುವ ಲಾರೆನ್ಸ್ ಬಿಷ್ಣೋಯ್ ಕುರಿತು ಬರಲಿದೆ ವೆಬ್ ಸಿರೀಸ್
ನಿಸ್ಸಾನ್ ಸಂಸ್ಥೆಯ ಎಸ್ಯುವಿ ಕಾರೊಂದನ್ನು ವಿದೇಶದಿಂದ ಆಮದು ಮಾಡಿಸಿಕೊಂಡಿದ್ದಾರೆ ಸಲ್ಮಾನ್ ಖಾನ್. ವಿಶೇಷವಾಗಿ ಆರ್ಡರ್ ನೀಡಿ ಈ ಕಾರಿಗೆ ಸೆಕ್ಯುರಿಟಿ ಫೀಚರ್ಸ್ಗಳನ್ನು ಹಾಕಿಸಲಾಗಿದೆಯಂತೆ. ಎಕೆ 47 ಬಂದೂಕಿನಿಂದ ಬರುವ ಗುಂಡುಗಳನ್ನು ಸಹ ತಡೆದು ನಿಲ್ಲಿಸುವ ಅತ್ಯಂತ ಶಕ್ತಿಶಾಲಿ ಗಾಜುಗಳು ಇದಕ್ಕೆ ಅಳವಡಿಸಲಾಗಿರುವ ಜೊತೆಗೆ ಕಾರಿನ ಒಟ್ಟಾರೆ ಬಾಡಿ ಸಹ ಗುಂಡು ನಿರೋಧಕತೆ ಹೊಂದಿದೆ ಎನ್ನಲಾಗುತ್ತಿದೆ. ಇದು ಗುಂಡು ನಿರೋಧಕ ಆಗಿರುವ ಜೊತೆಗೆ ಬಾಂಬ್ ಅಲರ್ಟ್ ತಂತ್ರಜ್ಞಾನವೂ ಇದರಲ್ಲಿದೆ. ಲ್ಯಾಂಡ್ ಮೈನ್ಗಳನ್ನು ಸಹ ಇದು ಗುರುತಿಸಲಿದೆ ಅಲ್ಲದೆ ಒಂದು ಹಂತದ ವರೆಗೆ ಬಾಂಬ್ ದಾಳಿಯನ್ನು ಸಹ ಇದು ತಡೆದುಕೊಳ್ಳಲಿದೆ.
ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ನವರು ಸಲ್ಮಾನ್ ಖಾನ್ ಅನ್ನು ಕೊಲ್ಲಲು ಸತತ ಪ್ರಯತ್ನ ಮಾಡುತ್ತಲೇ ಇದ್ದಾರೆ. ಆದರೆ ಸಲ್ಮಾನ್ ಖಾನ್ ತನ್ನ ಭದ್ರತೆ ಬಗ್ಗೆ ಗಮನ ಕೊಟ್ಟಿದ್ದು, ಬೆದರಿಕೆ ಇರುವ ಕಾರಣ ಚಿತ್ರೀಕರಣವನ್ನು ನಿಲ್ಲಿಸಿಲ್ಲ. ಬದಲಿಗೆ ಇಂದು ಬಿಗ್ಬಾಸ್ಗಾಗಿ ಚಿತ್ರೀಕರಣ ಮಾಡಿದ್ದಾರೆ ಸಲ್ಮಾನ್ ಖಾನ್. ಇದರ ನಡುವೆ ಮುಂಬೈ ಟ್ರಾಫಿಕ್ ಪೊಲೀಸರು ಸಂದೇಶವೊಂದನ್ನು ಸ್ವೀಕರಿಸಿದ್ದು, ‘ಲಾರೆನ್ಸ್ ಬಿಷ್ಣೋಯಿ ಸಲ್ಮಾನ್ ಖಾನ್ ಅನ್ನು ಕ್ಷಮಿಸಬೇಕೆಂದರೆ 5 ಕೋಟಿ ಕೊಡಲು ಹೇಳಿ ಇಲ್ಲವಾದರೆ ಬಾಬಾ ಸಿದ್ಧಿಕಿಗಿಂತಲೂ ಕೆಟ್ಟದಾಗಿ ಸಾಯಲಿದ್ದಾನೆ’ ಎಂದಿದೆ. ಬೆದರಿಕೆ ಸಂದೇಶ ಕಳಿಸಿದವನ ಹುಡುಕಾಟದಲ್ಲಿದ್ದಾರೆ ಪೊಲೀಸರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ