ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಅವರ ಬಾಂದ್ರಾ ನಿವಾಸದ ಮುಂದೆ ನಡೆದ ಗುಂಡಿನ ದಾಳಿ ಪ್ರಕರಣದ ತನಿಖೆ ನಡೆಯುತ್ತಿದೆ. ಈ ಘಟನೆಗೆ ಸಂಬಂಧಿಸಿದಂತೆ ಮುಂಬೈ ಕ್ರೈಂ ಬ್ರ್ಯಾಂಚ್ (Mumbai Crime Branch) ಪೊಲೀಸರು ಸಲ್ಮಾನ್ ಖಾನ್ ಅವರ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಅಲ್ಲದೇ, ಸಲ್ಮಾನ್ ಖಾನ್ ಅವರ ಸಹೋದರ ಅರ್ಬಾಜ್ ಖಾನ್ ಹೇಳಿಕೆಯನ್ನೂ ಜೂನ್ 4ರಂದು ದಾಖಲಿಸಿಕೊಳ್ಳಲಾಗಿದೆ. ಸಲ್ಮಾನ್ ಖಾನ್ ಕುಟುಂಬ (Salman Khan Family) ವಾಸವಾಗಿರುವ ಬಾಂದ್ರಾದ ಗ್ಯಾಲಕ್ಸಿ ಅಪಾರ್ಟ್ಮೆಂಟ್ ಮೇಲೆ ಏಪ್ರಿಲ್ 14ರಂದು ಕಿಡಿಗೇಡಿಗಳು ಗುಂಡು ಹಾರಿಸಿದ್ದರು.
ಸಲ್ಮಾನ್ ಖಾನ್ ಮನೆಯ ಮೇಲೆ ಶೂಟೌಟ್ ಆಗಾದ ಅಭಿಮಾನಿಗಳಿಗೆ ಆತಂಕ ಆಗಿತ್ತು. ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಈ ಗುಂಡಿನ ದಾಳಿಗೆ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ನಂಟು ಇರುವುದು ಬೆಳಕಿಗೆ ಬಂತು. ಆ ಬಳಿಕ ಮುಂಬೈ ಪೊಲೀಸರು ತನಿಖೆ ಚುರುಕುಗೊಳಿಸಿದರು. ಈ ಗುಂಡಿನ ದಾಳಿ ನಡೆಸಿದ ಕಿಡಿಗೇಡಿಗಳು 3 ಲಕ್ಷ ರೂಪಾಯಿ ಪಡೆದಿದ್ದರು ಎನ್ನಲಾಗಿದೆ.
ಶೂಟರ್ಗಳಿಗೆ ಪ್ರೇರಣೆ ನೀಡುವಲ್ಲಿ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ನ ಸಹೋದರ ಅನ್ಮೋಲ್ ಬಿಷ್ಣೋಯ್ ಮುಖ್ಯ ಪಾತ್ರ ವಹಿಸಿದ್ದಾನೆ ಎಂದು ಈ ಮೊದಲು ಪೊಲೀಸರು ಹೇಳಿದ್ದರು. ಮಾರ್ಚ್ 15ರಂದು ಪನ್ವೇಲ್ನಲ್ಲಿ ಮಾರಕಾಸ್ತ್ರಗಳನ್ನು ಪಡೆದ ನಂತರ ಆತ ಈ ಶೂಟರ್ಗಳಿಗೆ ದಾಳಿಯ ಆದೇಶ ನೀಡಿದ್ದ ಎನ್ನಲಾಗಿದೆ. ಶೂಟೌಟ್ ಘಟನೆ ಬಳಿಕ ಸಲ್ಮಾನ್ ಖಾನ್ ಕುಟುಂಬದವರು ಹೇಳಿಕೆ ಬಿಡುಗಡೆ ಮಾಡಿದ್ದರು.
ಇದನ್ನೂ ಓದಿ: ‘ನನ್ನ ಮದುವೆ ಆಗ್ತೀಯಾ’: ಈ ನಟಿಗೆ ಪ್ರಪೋಸ್ ಮಾಡಿದ್ದರು ಸಲ್ಮಾನ್ ಖಾನ್
‘ಬೈಕ್ನಲ್ಲಿ ಬಂದ ಇಬ್ಬರು ಅಪರಿಚಿತರು ಸಲೀಂ ಖಾನ್ ಕುಟುಂಬದ ಮನೆಯಾದ ಗ್ಯಾಲಕ್ಸಿ ಅಪಾರ್ಟ್ಮೆಂಟ್ ಮೇಲೆ ಗುಂಡಿನ ದಾಳಿ ನಡೆಸಿದ್ದು ಆಘಾತಕಾರಿ ಸಂಗತಿ. ಈ ಘಟನೆಯಿಂದ ನಮ್ಮ ಫ್ಯಾಮಿಲಿಗೆ ಆತಂಕವಾಗಿದೆ. ದುರದೃಷ್ಟಕರ ವಿಷಯ ಏನೆಂದರೆ, ಕೆಲವರು ನಮ್ಮ ಕುಟುಂಬದ ಆಪ್ತರೆಂದು ಹೇಳಿಕೊಂಡು ಮಾಧ್ಯಮಗಳಲ್ಲಿ ಲಘುವಾದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಘಟನೆ ಒಂದು ಪ್ರಚಾರದ ಗಿಮಿಕ್ ಹಾಗೂ ಇದರಿಂದ ಸಲ್ಮಾನ್ ಖಾನ್ ಕುಟುಂಬದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಅಂತೆಲ್ಲ ಹೇಳಿದ್ದಾರೆ. ಆದರೆ ಅದು ನಿಜವಲ್ಲ. ಅಂಥವರ ಮಾತನ್ನು ಗಂಭೀರವಾಗಿ ಪರಿಗಣಿಸಬಾರದು’ ಎಂದು ಸಲ್ಮಾನ್ ಖಾನ್ ಅವರ ಕುಟುಂಬದವರು ಹೇಳಿಕೆ ನೀಡಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.