ಸಲ್ಮಾನ್ ‘ಸಿಕಂದರ್’ಗೆ ಮುಗಿಯಿತು ಸೆನ್ಸಾರ್ ಪ್ರಕ್ರಿಯೆ; ಚಿತ್ರದ ಅವಧಿ ಎಷ್ಟು?
ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ 'ಸಿಕಂದರ್' ಚಿತ್ರ ಮಾರ್ಚ್ 30ರಂದು ತೆರೆಕಾಣುತ್ತಿದೆ. ಚಿತ್ರಕ್ಕೆ ಯು/ಎ ಪ್ರಮಾಣಪತ್ರ ದೊರೆತಿದ್ದು, ಯಾವುದೇ ಕಟ್ ಇಲ್ಲದೆ ಬಿಡುಗಡೆಯಾಗುತ್ತಿದೆ. ಚಿತ್ರದ ಅವಧಿ 2 ಗಂಟೆ 30 ನಿಮಿಷಗಳಾಗಿದ್ದು, ಟ್ರೇಲರ್ 3 ನಿಮಿಷ 38 ಸೆಕೆಂಡ್ ಗಳಷ್ಟಿದೆ.

ಸಲ್ಮಾನ್ ಖಾನ್ ಹಾಗೂ ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ಸಿಕಂದರ್’ ಸಿನಿಮಾ ಮಾರ್ಚ್ 30ಕ್ಕೆ ಗ್ರ್ಯಾಂಡ್ ರಿಲೀಸ್ ಆಗಲಿದೆ. ಸಾಮಾನ್ಯವಾಗಿ ಸಿನಿಮಾಗಳು ಗುರುವಾರ ಅಥವಾ ಶುಕ್ರವಾರ ತೆರೆಗೆ ಬರುತ್ತವೆ. ಆದರೆ, ಸಲ್ಮಾನ್ ಖಾನ್ ನಟನೆಯ ಈ ಚಿತ್ರವು ಭಾನುವಾರ ತೆರೆಗೆ ಬರಲಿದೆ ಎಂಬುದು ವಿಶೇಷ. ಈ ಚಿತ್ರಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ. ಈಗ ಸಿನಿಮಾ ರಿಲೀಸ್ಗೂ ಮೊದಲು ಚಿತ್ರಕ್ಕೆ ಸೆನ್ಸಾರ್ ಪ್ರಕ್ರಿಯೆ ನಡೆದಿದೆ. ಯಾವುದೇ ಕಟ್ ಇಲ್ಲದೆ ಸಿನಿಮಾ ತೆರೆಗೆ ಬರುತ್ತಿದೆ.
ಶುಕ್ರವಾರ (ಮಾರ್ಚ್ 21) ಸಿನಿಮಾಗೆ ಸೆನ್ಸಾರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಥಿಯೇಟರ್ನಲ್ಲಿ ರಿಲೀಸ್ ಆಗಲಿರುವ ಟ್ರೇಲರ್ 3 ನಿಮಿಷ 38 ಸೆಕೆಂಡ್ ಇದೆ. ಇದನ್ನು ಕೇಳಿದ ಬಳಿಕ ಇಡೀ ಸಿನಿಮಾದ ಸತ್ವವನ್ನು ಟ್ರೇಲರ್ನಲ್ಲಿ ತೋರಿಸಲಾಗುತ್ತಿದೆಯೇ ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ. ಇನ್ನು ಸಿನಿಮಾದ ಅವಧಿ 150.8 ನಿಮಿಷ ಇದೆ. ಅಂದರೆ, ಸಿನಿಮಾ 2 ಗಂಟೆ 30 ನಿಮಿಷ ಇರಲಿದೆ. ಚಿತ್ರಕ್ಕೆ ಯುಎ ಪ್ರಮಾಣ ಪತ್ರ ಸಿಕ್ಕಿದ್ದು, 13 ವರ್ಷ ಮೇಲ್ಪಟ್ಟವರು ಚಿತ್ರವನ್ನು ವೀಕ್ಷಿಸಬಹುದು.
ಸಲ್ಮಾನ್ ಖಾನ್ ಸಿನಿಮಾಗಳು ಇತ್ತೀಚಿನ ವರ್ಷಗಳಲ್ಲಿ ದೊಡ್ಡ ಗೆಲುವು ಕಂಡೇ ಇಲ್ಲ. ಈ ಬಗ್ಗೆ ಅಭಿಮಾನಿಗಳಿಗೆ ಬೇಸರ ಇದೆ. ಸಿನಿಮಾ ದೊಡ್ಡ ಮಟ್ಟದಲ್ಲಿ ಗೆಲುವು ಕಾಣಲಿ ಎಂದು ಎಲ್ಲರೂ ಹಾರೈಸುತ್ತಾ ಇದ್ದಾರೆ. ಈ ಮೂಲಕ ಸಲ್ಮಾನ್ ಖಾನ್ ಅವರು ಮತ್ತೆ ಟ್ರ್ಯಾಕ್ಗೆ ಮರಳಲಿ ಎಂದು ಕೋರುತ್ತಿದ್ದಾರೆ.
‘ಸಿಕಂದರ್’ ರಶ್ಮಿಕಾ ಪಾಲಿಗೆ ಮತ್ತೊಂದು ವಿಶೇಷ ಸಿನಿಮಾ. ಈಗಾಗಲೇ ಅವರ ನಟನೆಯ ಮೂರು ಸಿನಿಮಾಗಳು 500 ಕೋಟಿ ರೂಪಾಯಿ ಕ್ಲಬ್ ಸೇರಿವೆ. ಈಗ ಈ ಚಿತ್ರವೂ ಹಿಟ್ ಆಗಿ ಈ ಕ್ಲಬ್ ಸೇರಿದರೆ ಅವರ ಪಾಲಿಗೆ 500 ಕೋಟಿ ರೂಪಾಯಿ ಕ್ಲಬ್ ಸೇರಿದ ನಾಲ್ಕನೇ ಸಿನಿಮಾ ಇದಾಗಲಿದೆ. ಎಆರ್ ಮುರುಗದಾಸ್ ಅವರು ಈ ಮೊದಲು ‘ಘಜಿನಿ’ ಸಿನಿಮಾ ಮಾಡಿದ್ದರು. ಇದು ಹಿಟ್ ಆಯಿತು. ಈ ಕಾರಣದಿಂದಲೂ ಈ ಚಿತ್ರದ ಮೇಲೆ ನಿರೀಕ್ಷೆ ಇದೆ.
ಇದನ್ನೂ ಓದಿ: ‘ಸಿಕಂದರ್’ ಚಿತ್ರಕ್ಕಾಗಿ ಸಲ್ಮಾನ್ ಖಾನ್ ಪಡೆದ ಸಂಭಾವನೆ ಇಷ್ಟೊಂದಾ?
ಮುರುಗದಾಸ್ ಅವರು ಶೀಘ್ರವೇ ‘ಘಜಿನಿ 2’ ಸಿನಿಮ ಮಾಡಲಿದ್ದಾರೆ. ಈ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ. ಈ ವಿಚಾರ ಕೇಳಿ ಫ್ಯಾನ್ಸ್ ಕೂಡ ಖುಷಿಪಟ್ಟಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.