ಡ್ರಗ್ಸ್ ಪ್ರಕರಣದ ಬಳಿಕ ಮತ್ತೆ ಶಾರುಖ್ ಖಾನ್ ಮಗನ ಮೇಲೆ ಕೇಸ್ ಹಾಕಿದ ಸಮೀರ್ ವಾಂಖೆಡೆ

ಡ್ರಗ್ಸ್ ಸೇವನೆ ಆರೋಪದಲ್ಲಿ ಆರ್ಯನ್ ಖಾನ್ ಅವರನ್ನು 2021ರಲ್ಲಿ ಸಮೀರ್ ವಾಂಖೆಡೆ ಅರೆಸ್ಟ್ ಮಾಡಿದ್ದರು. ಈಗ ಆರ್ಯನ್ ಖಾನ್ ಅವರು ‘ಬ್ಯಾಡ್ಸ್ ಆಫ್ ಬಾಲಿವುಡ್’ ವೆಬ್ ಸರಣಿಯ ಗೆಲುವಿನ ಖುಷಿಯಲ್ಲಿ ಇದ್ದಾರೆ. ಅದರ ನಡುವೆ ಮಾಜಿ ಎನ್​ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಅವರು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

ಡ್ರಗ್ಸ್ ಪ್ರಕರಣದ ಬಳಿಕ ಮತ್ತೆ ಶಾರುಖ್ ಖಾನ್ ಮಗನ ಮೇಲೆ ಕೇಸ್ ಹಾಕಿದ ಸಮೀರ್ ವಾಂಖೆಡೆ
Sameer Wankhede, Aryan Khan

Updated on: Sep 25, 2025 | 7:02 PM

ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ (Aryan Khan) ಈಗ ನಿರ್ದೇಶಕನಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ. ಅವರು ನಿರ್ದೇಶನ ಮಾಡಿರುವ ‘ಬ್ಯಾಡ್ಸ್ ಆಫ್ ಬಾಲಿವುಡ್’ ವೆಬ್ ಸರಣಿ ಬಿಡುಗಡೆ ಆಗಿದೆ. ನೆಟ್​ಫ್ಲಿಕ್ಸ್ ಮೂಲಕ ಬಿಡುಗಡೆ ಆಗಿರುವ ಈ ವೆಬ್ ಸರಣಿಗೆ ಶಾರುಖ್ ಖಾನ್ (Shah Rukh Khan) ಅವರು ಬಂಡವಾಳ ಹೂಡಿದ್ದಾರೆ. ವೀಕ್ಷಕರಿಂದ ಈ ವೆಬ್ ಸಿರೀಸ್ ಮೆಚ್ಚುಗೆ ಪಡೆದಿದೆ. ಆದರೆ ವಿವಾದ ಕೂಡ ಶುರುವಾಗಿದೆ. ಆರ್ಯನ್ ಖಾನ್ ವಿರುದ್ಧ ಮಾಜಿ ಎನ್​ಸಿಬಿ ಅಧಿಕಾರಿ ಸಮೀರ್ ವಾಂಖೆಡೆ (Sameer Wankhede) ಅವರು ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. 2 ಕೋಟಿ ರೂಪಾಯಿ ಮಾನನಷ್ಟ ಪರಿಹಾರ ನೀಡುವಂತೆ ಅವರು ಕೇಸ್ ಹಾಕಿದ್ದಾರೆ.

ಆರ್ಯನ್ ಖಾನ್ ವರ್ಸಸ್ ಸಮೀರ್ ವಾಂಖೆಡೆ ಕಾನೂನು ಸಮರ ಶುರು ಆಗಿರುವುದು ಇದೇ ಮೊದಲೇನೂ ಅಲ್ಲ. 2021ರಲ್ಲಿ ಆರ್ಯನ್ ಖಾನ್ ಅವರು ಡ್ರಗ್ಸ್ ಪಾರ್ಟಿ ಆರೋಪದಲ್ಲಿ ಅರೆಸ್ಟ್ ಆಗಿದ್ದರು. ಆಗ ಮಾದಕ ವಸ್ತು ನಿಗ್ರಹ ದಳದ ಅಧಿಕಾರಿಯಾಗಿದ್ದ ಸಮೀರ್ ವಾಂಖೆಡೆ ಅವರೇ ಕಾರ್ಯಾಚರಣೆಯ ಮುಂದಾಳತ್ವ ವಹಿಸಿದ್ದರು. ಈಗ ‘ಬ್ಯಾಡ್ಸ್ ಆಫ್ ಬಾಲಿವುಡ್’ ವೆಬ್ ಸರಣಿಯಲ್ಲಿ ತಮ್ಮ ಬಗ್ಗೆ ಮಾನಹಾನಿ ಆಗುವಂತೆ ಚಿತ್ರಿಸಲಾಗಿದೆ ಎಂದು ಸಮೀರ್ ವಾಂಖೆಡೆ ಆರೋಪಿಸಿದ್ದಾರೆ.

ಬಾಂಬೆ ಹೈಕೋರ್ಟ್​ ಮತ್ತು ಎನ್​ಡಿಪಿಎಸ್ ವಿಶೇಷ ನ್ಯಾಯಾಲಯದಲ್ಲಿ ಆರ್ಯನ್ ಖಾನ್ ಡ್ರಗ್ಸ್ ಕೇಸ್ ವಿಚಾರಣೆ ಇನ್ನೂ ಬಾಕಿ ಇದೆ. ಹೀಗಿರುವಾಗಲೇ ‘ಬ್ಯಾಡ್ಸ್ ಆಫ್ ಬಾಲಿವುಡ್’ ವೆಬ್ ಸರಣಿಯು​​ ಮಾದಕವಸ್ತು ನಿಗ್ರಹ ದಳ ಸಂಸ್ಥೆಯನ್ನು ನಕಾರಾತ್ಮಕ ತೋರಿಸಿದೆ. ಇದರಿಂದಾಗಿ ತಮ್ಮ ವೃತ್ತಿಪರ ಖ್ಯಾತಿಗೆ ಹಾನಿಯಾಗುತ್ತದೆ. ತಮ್ಮ ವ್ಯಕ್ತಿತ್ವಕ್ಕೆ ಮಸಿ ಬಳಿಯಬೇಕು ಎಂಬ ಉದ್ದೇಶದಿಂದಲೇ ಈ ವೆಬ್ ಸರಣಿಯನ್ನು ನಿರ್ಮಾಣ ಮಾಡಲಾಗಿದೆ ಎಂದು ಸಮೀರ್ ವಾಂಖೆಡೆ ಅವರು ಕೇಸ್ ಹಾಕಿದ್ದಾರೆ.

ಈ ವೆಬ್ ಸರಣಿಯನ್ನು ಅವಹೇಳನಕಾರಿ ಎಂದು ಘೋಷಿಸಬೇಕು ಹಾಗೂ ನೆಟ್​ಫ್ಲಿಕ್ಸ್ ಮುಂತಾದ ಯಾವುದೇ ಒಟಿಟಿಯಲ್ಲಿ ಪ್ರಸಾರ ಆಗದಂತೆ ತಡೆಯಬೇಕು ಎಂದು ಸಮೀರ್ ವಾಂಖೆಡೆ ಅವರು ದೆಹಲಿ ಹೈಕೋರ್ಟ್​​ಗೆ ಮನವಿ ಸಲ್ಲಿಸಿದ್ದಾರೆ. ಆರ್ಯನ್ ಖಾನ್, ನೆಟ್​ಫ್ಲಿಕ್ಸ್, ರೆಡ್​ ಚಿಲ್ಲೀಸ್ ಎಂಟರ್​ಟೇನ್ಮೆಂಟ್ ಮೇಲೆ ಸಮೀರ್ ವಾಂಖೆಡೆ ಅವರು ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ಇದನ್ನೂ ಓದಿ: ಇವರೇ ಶಾರುಖ್ ಖಾನ್ ಸೊಸೆ? ಈ ಮಾಡೆಲ್ ಆರ್ಯನ್ ಖಾನ್ ಮನದರಸಿ

2 ಕೋಟಿ ರೂಪಾಯಿ ಮನನಷ್ಟ ಪರಿಹಾರ ಮೊತ್ತವನ್ನು ಟಾಟಾ ಮೆಮೋರಿಯಲ್ ಕ್ಯಾನ್ಸರ್ ಆಸ್ಪತ್ರೆಗೆ ನೀಡುವಂತೆ ಆದೇಶಿಸಬೇಕು ಎಂದು ಸಮೀರ್ ವಾಂಖೆಡೆ ಮನವಿ ಮಾಡಿಕೊಂಡಿದ್ದಾರೆ. ಈ ಅರ್ಜಿಯ ವಿಚಾರಣೆ ನಡೆಯುವುದು ಬಾಕಿ ಇದೆ. ಈ ಮೂಲಕ 2021ರ ಬಳಿಕ ಮತ್ತೆ ಆರ್ಯನ್ ಖಾನ್ ವರ್ಸಸ್ ಸಮೀರ್ ವಾಂಖೆಡೆ ಕಾನೂನು ಸಮರ ಶುರು ಆದಂತಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.