‘ಹಿಂಸೆ ನಡೆದಾಗ, ಹಿಂದಿನ ಕಾರಣ ಹುಡುಕಿ, ಸಿನಿಮಾನ ದೂಷಿಸಬೇಡಿ’; ಸಂದೀಪ್ ರೆಡ್ಡಿ ವಂಗ

ಆಂಧ್ರಪ್ರದೇಶದ ಶಾಲೆಯೊಂದರಲ್ಲಿ ಪ್ರೀತಿ ನಿರಾಕರಿಸಿದ ಬಾಲಕಿ ಮೇಲೆ ಗರಗಸದಿಂದ ಹಲ್ಲೆ ನಡೆದ ಘಟನೆಗೆ ‘ಅನಿಮಲ್’ ಚಿತ್ರವೇ ಕಾರಣ ಎಂಬ ಟೀಕೆಗಳಿಗೆ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದು, ದುರಂತಗಳನ್ನು ವೈಯಕ್ತಿಕ ದ್ವೇಷ ತೀರಿಸಿಕೊಳ್ಳಲು ಮತ್ತು ಸ್ವಾರ್ಥದ ಅವಕಾಶವಾದಕ್ಕೆ ಬಳಸಿಕೊಳ್ಳಬೇಡಿ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

‘ಹಿಂಸೆ ನಡೆದಾಗ, ಹಿಂದಿನ ಕಾರಣ ಹುಡುಕಿ, ಸಿನಿಮಾನ ದೂಷಿಸಬೇಡಿ’; ಸಂದೀಪ್ ರೆಡ್ಡಿ ವಂಗ
ಸಂದೀಪ್ ರೆಡ್ಡಿ ವಂಗಾ

Updated on: Nov 04, 2026 | 2:30 PM

ಮುಖ್ಯಾಂಶಗಳು

  • ಆಂಧ್ರದ ಶಾಲಾ ಬಾಲಕಿ ಮೇಲಿನ ಹಲ್ಲೆಗೆ ಸಿನಿಮಾಗಳ ಮೇಲೆ ಆರೋಪ
  • ಸಿನಿಮಾಗಳನ್ನು ಬಲಿಪಶು ಮಾಡಬೇಡಿ
  • ಸಂದೀಪ್ ರೆಡ್ಡಿ ವಂಗಾ ಕಿಡಿ

ಆಂಧ್ರ ಪ್ರದೇಶದಲ್ಲಿ ಶಾಲೆಯೊಂದರಲ್ಲಿ ನಡೆದ ಹಿಂಸಾತ್ಮಕ ಘಟನೆ ಸಾಕಷ್ಟು ಸಂಚಲನ ಸೃಷ್ಟಿಸಿತ್ತು. ಪ್ರೀತಿಯನ್ನು ಒಪ್ಪದ 15 ವರ್ಷದ ಹುಡುಗಿ ಮೇಲೆ ಯುವಕನೋರ್ವ ಗರಗಸದಿಂದ ಹಲ್ಲೆ ಮಾಡಿದ್ದ. ಇದನ್ನು ನೋಡಿದ ಅನೇಕರು ‘ಅನಿಮಲ್’ ಸಿನಿಮಾದ ದೃಶ್ಯವನ್ನು ನೆನಪಿಸಿಕೊಂಡಿದ್ದರು. ಈ ವಿಷಯವಾಗಿ ಚಿತ್ರದ ನಿರ್ದೇಶಕ ಸಂದೀಪ್ ರೆಡ್ಡಿ ವಂಗ ಅವರನ್ನು ಟೀಕೆ ಮಾಡಲಾಗಿತ್ತು. ಈ ವಿಷಯವಾಗಿ ಅವರು ಮೌನ ಮುರಿದಿದ್ದಾರೆ. ಈ ರೀತಿ ಘಟನೆ ನಡೆದಾಗ ಸಿನಿಮಾನ ದೂಷಿಸುವುದರ ಬಗ್ಗೆ ಅವರು ಅಸಮಾಧಾನ ಹೊರಹಾಕಿದ್ದಾರೆ.

‘ಅನಿಮಲ್’ ಸಿನಿಮಾದಲ್ಲಿ ದೃಶ್ಯವೊಂದು ಬರುತ್ತದೆ. ಕಥಾ ನಾಯಕ ಕಾಲೇಜಿಗೆ ಗನ್ ಹಿಡಿದು ಹೋಗುತ್ತಾನೆ. ಈ ದೃಷ್ಯ ಸಾಕಷ್ಟು ಹೈಪ್ ಸೃಷ್ಟಿಸಿತ್ತು. ಈ ಕ್ಲಿಪ್​ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಆಂಧ್ರದಲ್ಲಿ ನಡೆದ ಘಟನೆಗೆ ಈ ರೀತಿಯ ದೃಶ್ಯಗಳೇ ಕಾರಣ ಎಂಬ ಆರೋಪಗಳು ಕೇಳಿ ಬಂದಿವೆ. ಮಹಿಳೆಯರು ಮೇಲೆ ನಡೆಯುವ ಕಿರುಕುಳಕ್ಕೆ ‘ಅನಿಮಲ್’, ‘ಅರ್ಜುನ್ ರೆಡ್ಡಿ’, ‘ಧುರಂಧರ್’ ರೀತಿಯ ಸಿನಿಮಾಗಳನ್ನು ಹೊಣೆ ಮಾಡಲಾಗಿದೆ. ಇದನ್ನು ಸಂದೀಪ್ ಒಪ್ಪಿಲ್ಲ.

Loading...

‘ಯಾರಾದರೂ ಭೀಕರವಾದ ಅಪರಾಧವೆಸಗಿದಾಗ, ನಮ್ಮ ಮೊದಲ ಸ್ಪಂದನೆ ಅನುಕಂಪ ಮತ್ತು ಅದರ ಹಿಂದಿನ ದೊಡ್ಡ ಸಮಸ್ಯೆಯನ್ನು ಅರ್ಥಮಾಡಿಕೊಳ್ಳುವ ಪ್ರಯತ್ನವಾಗಿರಬೇಕೇ ಹೊರತು, ಸಿನಿಮಾವನ್ನು ಸುಲಭದ ಬಲಿಪಶು ಮಾಡುವುದಲ್ಲ. ನಿಮಗೆ ನಿಜವಾಗಿಯೂ ಸಂತ್ರಸ್ತರ ಬಗ್ಗೆಯಾಗಲಿ ಅಥವಾ ಅವರ ಕುಟುಂಬದ ಬಗ್ಗೆಯಾಗಲಿ ಕಾಳಜಿಯಿಲ್ಲ. ಬದಲಿಗೆ ಈ ಭೀಕರ ದುರಂತವನ್ನು ನಿಮ್ಮ ವೈಯಕ್ತಿಕ ದ್ವೇಷ ತೀರಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದೀರಾ ಎಂಬುದು ಈಗ ಸ್ಪಷ್ಟವಾಗುತ್ತಿದೆ’ ಎಂದು ಸಂದೀಪ್ ಹೇಳಿದ್ದಾರೆ.

ಇದನ್ನೂ ಓದಿ: ವಾಸುಕಿಯ ಪ್ರತಿಭೆ ಕೊಂಡಾಡಿದ ಸಂದೀಪ್ ರೆಡ್ಡಿ ವಂಗಾ, ವಿಜಯ್

‘ಅವಕಾಶ ಸಿಕ್ಕಾಗಲೆಲ್ಲಾ ಇತರರ ಕೆಲಸವನ್ನು ಟೀಕಿಸಲು, ದಿಢೀರನೆ ಸಮಾಜ ಸುಧಾರಕರಂತೆ ನಟಿಸುವ ಕೆಲವೇ ಕೆಲವು ವಿಫಲ, ಹತಾಶ ಹಾಗೂ ನಿರುದ್ಯೋಗಿ ನಟ-ನಟಿಯರು, ನಿರ್ದೇಶಕರು, ನಿರ್ಮಾಪಕರು ಮತ್ತು ಪರಾವಲಂಬಿಗಳಿಗೆ ಇದನ್ನು ವಿಶೇಷವಾಗಿ ಹೇಳುತ್ತಿದ್ದೇನೆ. ದುರಂತವೊಂದು ಅನುಕಂಪಕ್ಕೆ ಅರ್ಹವೇ ಹೊರತು, ನಿಮ್ಮ ಸ್ವಾರ್ಥದ ಅವಕಾಶವಾದಕ್ಕಲ್ಲ. ಮೊದಲಿಗೆ ಅವೆರಡರ ನಡುವಿನ ವ್ಯತ್ಯಾಸವನ್ನು ತಿಳಿದುಕೊಳ್ಳಿ’ ಎಂದು ಸಂದೀಪ್ ವಿವರಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us