ಸಂಜಯ್ ದತ್ ಸದ್ಯ ‘ಕೆಜಿಎಫ್ ಚಾಪ್ಟರ್ 2’ (KGF Chapter 2) ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಬಾಲಿವುಡ್ನಲ್ಲಿ ಇದೇ ಸಮಯದಲ್ಲಿ ನಡೆಯಲಿರುವ ಒಂದು ದೊಡ್ಡ ಸಮಾರಂಭದ ಬಗ್ಗೆ ಗುಸುಗುಸು ಜೋರಾಗಿದೆ. ಹೌದು, ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ವಿವಾಹದ (Alia Bhatt- Ranbir Kapoor wedding) ಬಗ್ಗೆ ಗುಸುಗುಸು ಜೋರಾಗಿದ್ದು, ಕೆಲವು ಮೂಲಗಳ ಪ್ರಕಾರ ಕೆಜಿಎಫ್ 2 ರಿಲೀಸ್ ದಿನದಂದೇ ಅರ್ಥಾತ್ ಏಪ್ರಿಲ್ 14ರಂದೇ ತಾರಾ ಜೋಡಿಯ ಮದುವೆಯೂ ನಡೆಯಲಿದೆ. ಆದರೆ ಈ ಬಗ್ಗೆ ಇನ್ನೂ ಖಚಿತವಾಗಿಲ್ಲ. ಏಪ್ರಿಲ್ 20ರ ಒಳಗೆ ಮದುವೆ ನಡೆಯಲಿದೆ ಎಂದು ಆಲಿಯಾ ಸಹೋದರ ರಾಹುಲ್ ಭಟ್ ಇತ್ತೀಚೆಗೆ ಹೇಳಿದ್ದರು. ಅದೇನೇ ಇರಲಿ, ಕೆಜಿಎಫ್ 2 ಪ್ರಚಾರದಲ್ಲಿ ಭಾಗಿಯಾಗಿದ್ದ ಸಂಜಯ್ ದತ್ಗೂ ಆಲಿಯಾ- ರಣಬೀರ್ ವಿವಾಹದ ಬಗ್ಗೆ ಪ್ರಶ್ನೆ ಎದುರಾಗಿತ್ತು. ಇದಕ್ಕೆ ಕಾರಣವೂ ಇಲ್ಲದಿಲ್ಲ. ಈ ಹಿಂದೆ ಸಂಜಯ್ ದತ್ ಜೀವನವನ್ನು ಆಧರಿಸಿದ ‘ಸಂಜು’ ಚಿತ್ರ ತಯಾರಾಗಿತ್ತು. ಅದರಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದವರು ರಣಬೀರ್ ಕಪೂರ್. ಅವರ ಪಾತ್ರಪೋಷಣೆಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು. ಇತ್ತ ಆಲಿಯಾ ‘ಸಡಕ್ 2’ ಚಿತ್ರದಲ್ಲಿ ಸಂಜಯ್ ದತ್ ಜತೆ ನಟಿಸಿದ್ದರು. ಹೀಗಾಗಿ ಈರ್ವರೂ ಸಂಜಯ್ಗೆ ಆಪ್ತರು.
ಇದೇ ಹಿನ್ನೆಲೆಯಲ್ಲಿ ಸಂಜಯ್ ದತ್ಗೆ ಪ್ರಶ್ನೆಗಳನ್ನು ಕೇಳಲಾಗಿತ್ತು. ಆಲಿಯಾ ರಣಬೀರ್ ಕಲ್ಯಾಣದ ಬಗೆಗೆ ಇಟೈಮ್ಸ್ ಕೇಳಿದ ಪ್ರಶ್ನೆಗೆ ಸಂಜಯ್ ಉತ್ತರಿಸಿದರು. ಆದರೆ ಅವರಿಗೂ ವಿವಾಹದ ದಿನಾಂಕದ ಬಗ್ಗೆ ತಿಳಿದಿರಲಿಲ್ಲ. ಆದ್ದರಿಂದ ‘‘ಒಂದು ವೇಳೆ ಅವರೀರ್ವರು ಮದುವೆಯಾಗುವುದು ಹೌದಾದರೆ..’’ ಎಂದೇ ಮಾತನ್ನಾರಂಭಿಸಿದರು.
‘‘ಒಂದು ವೇಳೆ ರಣಬೀರ್ ಮದುವೆಯಾಗುವುದಾದರೆ.. ಅವನ ಬಗ್ಗೆ ನನಗೆ ನಿಜಕ್ಕೂ ಖುಷಿ ಇದೆ. ಆಲಿಯಾಳಂತೂ ನನ್ನ ಕಣ್ಣೆದುರೇ ಹುಟ್ಟಿ ಬೆಳೆದವಳು. ಮದುವೆಯೆನ್ನುವುದು ಅವರೀರ್ವರು ಜತೆಯಾಗಿ ಮಾಡಿಕೊಳ್ಳುವ ಒಂದು ಒಪ್ಪಂದ. ಅದನ್ನು ಈರ್ವರೂ ಒಪ್ಪಿಕೊಂಡು ಖುಷಿಯಿಂದ, ನೆಮ್ಮದಿಯಿಂದ, ಆನಂದದಿಂದ ಜೀವನ ಸಾಗಿಸಬೇಕು. ರಣಬೀರ್ ಬೇಗ ಮಕ್ಕಳನ್ನು ಹೊಂದಿ, ಖುಷಿಯಾಗಿರಿ..’’ ಎಂದಿದ್ದಾರೆ ಸಂಜಯ್ ದತ್.
ಆಲಿಯಾ- ರಣಬೀರ್ಗೆ ನೀವು ಏನು ಸಲಹೆ ನೀಡುತ್ತೀರಿ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸಂಜಯ್ ದತ್, ‘‘ಒಂದು ವೇಳೆ ಏನಾದರೂ ಗೊಂದಲ ಉಂಟಾದರೆ ಈರ್ವರೂ ಜತೆಯಾಗಿ ಕೂತು ಮಾತನಾಡಿ, ಒಮ್ಮತದ ನಿರ್ಧಾರ ತಳೆಯಬೇಕು. ಎರಡೂ ಕಡೆಯಿಂದ ಹೊಂದಾಣಿಕೆ ಮುಖ್ಯ. ಜೀವನದ ಯಾವುದೇ ತಿರುವಿನಲ್ಲೂ ಈರ್ವರ ನಡುವಿನ ಒಪ್ಪಂದ, ಜವಾಬ್ದಾರಿ ಬಹಳ ಮುಖ್ಯ, ಅದರ ಪ್ರಕಾರವೇ ನಡೆಯಬೇಕು’’ ಎಂದು ನುಡಿದಿದ್ದಾರೆ.
ಈ ಹಿಂದೆ ಆಲಿಯಾ ಹಾಗೂ ಸಂಜಯ್ ದತ್ ನಟಿಸಿದ್ದ ‘ಸಡಕ್ 2’ ಚಿತ್ರವನ್ನು ಆಲಿಯಾ ತಂದೆ ಮಹೇಶ್ ಭಟ್ ನಿರ್ದೇಶಿಸಿದ್ದರು. ಆದಿತ್ಯ ರಾಯ್ ಕಪೂರ್, ಪೂಜಾ ಭಟ್ ಮೊದಲಾದವರು ಬಣ್ಣಹಚ್ಚಿದ್ದರು. ಇತ್ತ ಸಂಜಯ್ ದತ್ ನಟಿಸಿರುವ ‘ಕೆಜಿಎಫ್ 2’ ಏಪ್ರಿಲ್ 14ರಂದು ವಿಶ್ವಾದ್ಯಂತ ರಿಲೀಸ್ ಆಗುತ್ತಿದೆ.
ಇದನ್ನೂ ಓದಿ: Alia Bhatt: ಮುಂದೂಡಲ್ಪಟ್ಟಿತಾ ರಣಬೀರ್- ಆಲಿಯಾ ಕಲ್ಯಾಣ? ಮದುವೆಯ ಬಗ್ಗೆ ಹಬ್ಬಿದೆ ಹಲವು ಗುಸುಗುಸು