ಬಿಡುಗಡೆಗೆ ಸಜ್ಜಾಗಿರುವ ‘ಪಠಾಣ್’ ಸಿನಿಮಾ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ. ಶಾರುಖ್ ಖಾನ್ (Shah Rukh Khan) ನಟನೆಯ ಈ ಸಿನಿಮಾಗೆ ಸಂಬಂಧಿಸಿದಂತೆ ಹಲವು ವಿವಾದ ಹುಟ್ಟಿಕೊಂಡಿವೆ. ‘ಪಠಾಣ್’ (Pathaan Movie) ಸಿನಿಮಾದ ನಾಯಕಿ ದೀಪಿಕಾ ಪಡುಕೋಣೆ ಅವರು ಕೇಸರಿ ಬಿಕಿಸಿ ಧರಿಸಿದ್ದು ಸರಿಯಲ್ಲ ಎಂದು ಕೆಲವು ಹಿಂದೂ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಆದರೆ ಇದನ್ನು ಶಿವಸೇನಾ ಎಂಪಿ ಸಂಜಯ್ ರಾವತ್ (Sanjay Raut) ಅವರು ಖಂಡಿಸಿದ್ದಾರೆ. ‘ಇದು ಶಾರುಖ್ ಖಾನ್ ಸಿನಿಮಾ ಎಂಬ ಕಾರಣಕ್ಕೆ ವಿರೋಧಿಸೋದು ತಪ್ಪು’ ಎಂದು ಅವರು ಹೇಳಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ.
‘ಪಠಾಣ್ ಸಿನಿಮಾ ವಿರುದ್ಧ ಈ ರೀತಿ ವಿವಾದ ಮಾಡುವ ಅಗತ್ಯ ಇಲ್ಲ. ಬಿಜೆಪಿಯ ಓರ್ವ ಮುಖಂಡರು ಉರ್ಫಿ ಜಾವೇದ್ ಧರಿಸಿದ ಬಟ್ಟೆ ಬಗ್ಗೆಯೂ ಆಕ್ಷೇಪ ಎತ್ತಿದ್ದಾರೆ. ದೇಶದಲ್ಲಿ ಅದಕ್ಕಿಂತಲೂ ದೊಡ್ಡ ಸಮಸ್ಯೆಗಳಿವೆ. ಆ ಬಗ್ಗೆ ಎದುರಾಗುವ ಪ್ರಶ್ನೆಯಿಂದ ತಪ್ಪಿಸಿಕೊಳ್ಳಲು ನೀವು ಇಂಥ ವಿಷಯ ಚರ್ಚೆ ಮಾಡುತ್ತೀರಿ’ ಎಂದು ಸಂಜಯ್ ರಾವತ್ ಹೇಳಿದ್ದಾರೆ.
‘ಬಿಜೆಪಿ ಜೊತೆ ನಂಟು ಹೊಂದಿರುವ ಕಲಾವಿದರು ಕೂಡ ಕೇಸರಿ ಬಟ್ಟೆ ಧರಿಸಿದ್ದುಂಟು. ಸೆನ್ಸಾರ್ ಮಂಡಳಿಯು ಸರ್ಕಾರದ ಕೈಗೊಂಬೆ ಆಗಿದೆ. ಇದು ಶಾರುಖ್ ಖಾನ್ ಸಿನಿಮಾ ಎಂಬ ಕಾರಣಕ್ಕೆ ಆ ದೃಶ್ಯಕ್ಕೆ ಕತ್ತರಿ ಹಾಕಲಾಯಿತು. ದೊಡ್ಡ ಪರದೆಯಲ್ಲಿ ನಗ್ನತೆ ತೋರಿಸಿದರೆ, ಅದನ್ನು ಯಾರಾದರೂ ವಿರೋಧಿಸುವುದು ಸರಿ. ಆದರೆ ಕೇಸರಿ ಬಣ್ಣದ ಬಟ್ಟೆ ಎಂಬ ಕಾರಣಕ್ಕೆ ಆ ದೃಶ್ಯ ತೆಗೆದುಹಾಕುವುದು ತಪ್ಪು’ ಎಂದು ಸಂಜಯ್ ರಾವತ್ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: Pooja Bhatt: ‘ಪ್ರತಿಭಟನೆಗೂ ಗಲಭೆಗೂ ವ್ಯತ್ಯಾಸವಿದೆ’: ‘ಪಠಾಣ್’ ವಿರುದ್ಧ ಭಜರಂಗ ದಳದ ವರ್ತನೆಗೆ ಪೂಜಾ ಭಟ್ ಖಂಡನೆ
‘ಪಠಾಣ್’ ಸಿನಿಮಾಗೆ ಸಿದ್ದಾರ್ಥ್ ಆನಂದ್ ಅವರು ನಿರ್ದೇಶನ ಮಾಡಿದ್ದಾರೆ. ಹಲವು ದೇಶಗಳಲ್ಲಿ ಈ ಚಿತ್ರದ ಶೂಟಿಂಗ್ ಮಾಡಲಾಗಿದೆ. ಶಾರುಖ್ ಖಾನ್ ಅವರು ಈ ಸಿನಿಮಾಗಾಗಿ ಸಿಕ್ಸ್ ಪ್ಯಾಕ್ ಮಾಡಿಕೊಂಡು ಕಷ್ಟಪಟ್ಟಿದ್ದಾರೆ. ಭರ್ಜರಿ ಆ್ಯಕ್ಷನ್ ದೃಶ್ಯಗಳಲ್ಲಿ ಅವರು ನಟಿಸಿದ್ದಾರೆ. ‘ಪಠಾಣ್’ ಟ್ರೇಲರ್ ಮತ್ತು ಹಾಡುಗಳಿಂದಾಗಿ ಸಿನಿಮಾ ಮೇಲಿನ ಹೈಪ್ ಹೆಚ್ಚಾಗಿದೆ.
ಇದನ್ನೂ ಓದಿ: Shah Rukh Khan: ಭಾರತದಲ್ಲಿ ‘ಪಠಾಣ್’ ಚಿತ್ರಕ್ಕೆ ವಿರೋಧ; ದುಬೈಗೆ ಹೋಗಿ ಸಿನಿಮಾ ಪ್ರಚಾರ ಮಾಡಿದ ಶಾರುಖ್ ಖಾನ್
ಈ ಸಿನಿಮಾದಲ್ಲಿ ದೇಶಭಕ್ತಿ ಕಥಾಹಂದರ ಇದೆ ಎಂಬುದಕ್ಕೆ ಟ್ರೇಲರ್ನಲ್ಲಿ ಸುಳಿವು ಸಿಕ್ಕಿದೆ. ಗಣರಾಜ್ಯೋತ್ಸವದ ಸಂದರ್ಭದಲ್ಲಿ ‘ಪಠಾಣ್’ ರಿಲೀಸ್ ಆಗುತ್ತಿರುವುದರಿಂದ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಗುವ ನಿರೀಕ್ಷೆ ಇದೆ. ದೀಪಿಕಾ ಪಡುಕೋಣೆ ಮತ್ತು ಶಾರುಖ್ ಖಾನ್ ಅವರು ಜೋಡಿಯಾಗಿ ನಟಿಸಿರುವ ನಾಲ್ಕನೇ ಸಿನಿಮಾ ಇದು. ಆ ಕಾರಣದಿಂದಲೂ ‘ಪಠಾಣ್’ ಹೈಪ್ ಪಡೆದುಕೊಂಡಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.