ಮಾನಹಾನಿ ಮಾಡಿದ ಇನ್‌ಫ್ಲುಯೆನ್ಸರ್‌ಗೆ ಶಾರುಖ್ ಮಾನನಷ್ಟ ನೋಟಿಸ್, 5 ಷರತ್ತು

ಸದ್ಗುರು ಕಾರ್ಯಕ್ರಮದ ವಿಡಿಯೋವನ್ನು ತಿರುಚಿ ಸುಳ್ಳು ಮಾಹಿತಿ ಹಬ್ಬಿಸಿದ ಇನ್‌ಫ್ಲುಯೆನ್ಸರ್ ಸುವಿಜ್ಞಾ ಶರ್ಮಾ ಅವರಿಗೆ ಬಾಲಿವುಡ್ ನಟ ಶಾರುಖ್ ಖಾನ್ ಮಾನನಷ್ಟ ನೋಟಿಸ್ ಕಳುಹಿಸಿದ್ದಾರೆ. ವಿವಾದಾತ್ಮಕ ಇನ್‌ಸ್ಟಾಗ್ರಾಮ್ ರೀಲ್ ಡಿಲೀಟ್ ಮಾಡಲು ಹಾಗೂ ಲಿಖಿತ ಸ್ಪಷ್ಟನೆ ನೀಡಲು ಶಾರುಖ್ ಪರ ವಕೀಲರು 48 ಗಂಟೆಗಳ ಗಡುವು ನೀಡಿದ್ದಾರೆ.

ಮಾನಹಾನಿ ಮಾಡಿದ  ಇನ್‌ಫ್ಲುಯೆನ್ಸರ್‌ಗೆ ಶಾರುಖ್ ಮಾನನಷ್ಟ ನೋಟಿಸ್, 5 ಷರತ್ತು
ಶಾರುಖ್

Updated on: Nov 26, 2026 | 10:32 AM

ಮುಖ್ಯಾಂಶಗಳು

  • ಸುಳ್ಳು ಕ್ಯಾಪ್ಶನ್ ಹಾಕಿ ಸಿಕ್ಕಿಬಿದ್ದ ಇನ್‌ಫ್ಲುಯೆನ್ಸರ್
  • ಶಾರುಖ್ ಖಾನ್ ಕಾನೂನು ಸಮರ
  • ರೀಲ್ ಡಿಲೀಟ್ ಮಾಡದಿದ್ದರೆ ಕಾದಿದೆ ಕಠಿಣ ಕ್ರಮ

ಬಾಲಿವುಡ್ ನಟ ಶಾರುಖ್ ಖಾನ್ ತಮ್ಮ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸಿದ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಒಬ್ಬರಿಗೆ ಬಿಸಿ ಮುಟ್ಟಿಸಿದ್ದಾರೆ. ಆಧ್ಯಾತ್ಮಿಕ ಗುರು ಸದ್ಗುರು ಅವರ ಕಾರ್ಯಕ್ರಮದ ವಿಡಿಯೋವನ್ನು ತಪ್ಪಾಗಿ ಬಿಂಬಿಸಿದ್ದಕ್ಕಾಗಿ ಶಾರುಖ್ ಕಾನೂನು ಸಮರ ಸಾರಿದ್ದಾರೆ. ಇನ್‌ಫ್ಲುಯೆನ್ಸರ್ ಸುವಿಜ್ಞಾ ಶರ್ಮಾ ಅವರಿಗೆ ಶಾರುಖ್ ಪರ ವಕೀಲರು ಮಾನನಷ್ಟ ನೋಟಿಸ್ ಕಳುಹಿಸಿದ್ದಾರೆ. ಈ ಪೋಸ್ಟ್ ದಾರಿತಪ್ಪಿಸುವಂತಿದ್ದು, ನಟನ ಘನತೆಗೆ ಧಕ್ಕೆ ತರುವ ಉದ್ದೇಶ ಹೊಂದಿದೆ ಎಂದು ದೂರಲಾಗಿದೆ.

ವೈರಲ್ ವಿಡಿಯೋದಲ್ಲಿ ಏನಿತ್ತು?

ಇತ್ತೀಚೆಗೆ ಸದ್ಗುರು ಅವರ ಕಾರ್ಯಕ್ರಮದಲ್ಲಿ ಶಾರುಖ್ ಖಾನ್ ಭಾಗವಹಿಸಿದ್ದರು. ಅಲ್ಲಿ ಶಾರುಖ್ ಅವರು ಉದ್ಯಮಿ ಮುಕೇಶ್ ಅಂಬಾನಿ ಮಗ ಅನಂತ್ ಅಂಬಾನಿ ಜೊತೆ ಮಾತನಾಡುತ್ತಿದ್ದರು. ಈ ವಿಡಿಯೋಗೆ ಸುವಿಜ್ಞಾ ಶರ್ಮಾ ತಮಗಿಷ್ಟ ಬಂದಂತೆ ಇದಕ್ಕೆ ಕ್ಯಾಪ್ಶನ್ ನೀಡಿದ್ದರು. ‘ಅನಂತ್ ಅಂಬಾನಿ ಶಾರುಖ್​​ಗೆ ಸುಮ್ಮನಿರುವಂತೆ ಸೂಚಿಸಿದ್ದಾರೆ’ ಎಂದು ಸುಳ್ಳು ಕ್ಯಾಪ್ಶನ್ ಹಾಕಿದ್ದರು. ಸಂಭಾಷಣೆಯ ಸಂದರ್ಭವನ್ನು ತಿರುಚಿ ಶಾರುಖ್ ಇಮೇಜ್ ಹಾಳುಮಾಡಲು ಯತ್ನಿಸಲಾಗಿದೆ ಎಂದು ವಕೀಲರು ಆರೋಪಿಸಿದ್ದಾರೆ.

Loading...

ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ಎಚ್ಚರಿಕೆ

ಭಾರತೀಯ ನ್ಯಾಯ ಸಂಹಿತೆ (BNS) 2023ರ ಸೆಕ್ಷನ್ 356ರ ಅಡಿಯಲ್ಲಿ ಈ ಮಾನನಷ್ಟ ನೋಟಿಸ್ ನೀಡಲಾಗಿದೆ. ಯಾವುದೇ ಪುರಾವೆಗಳಿಲ್ಲದೆ ಸಾರ್ವಜನಿಕ ವ್ಯಕ್ತಿಗಳ ಬಗ್ಗೆ ಸುಳ್ಳು ಮತ್ತು ಹಾನಿಕಾರಕ ಹೇಳಿಕೆಗಳನ್ನು ಪ್ರಸಾರ ಮಾಡುವುದು ಅಪರಾಧ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ. ಇಂತಹ ಆಧಾರರಹಿತ ವಿಡಿಯೋಗಳನ್ನು ಹಂಚಿಕೊಳ್ಳುವುದರಿಂದ ನಟನ ಸಾರ್ವಜನಿಕ ವರ್ಚಸ್ಸಿಗೆ ತೀವ್ರ ಧಕ್ಕೆಯಾಗುತ್ತದೆ ಎಂದು ಎಚ್ಚರಿಸಲಾಗಿದೆ.

48 ಗಂಟೆಗಳ ಡೆಡ್‌ಲೈನ್ ಮತ್ತು 5 ಷರತ್ತುಗಳು

ನೋಟಿಸ್ ತಲುಪಿದ 48 ಗಂಟೆಗಳ ಒಳಗಾಗಿ ಐದು ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಸುವಿಜ್ಞಾ ಶರ್ಮಾ ಅವರಿಗೆ ಸೂಚಿಸಲಾಗಿದೆ. ವಿವಾದಾತ್ಮಕ ಇನ್‌ಸ್ಟಾಗ್ರಾಮ್ ರೀಲ್ ಅನ್ನು ತಕ್ಷಣವೇ ಡಿಲೀಟ್ ಮಾಡಬೇಕು. ಆ ಸುಳ್ಳು ಮಾಹಿತಿಯನ್ನು ಮುಂದೆಂದೂ ಹಂಚಿಕೊಳ್ಳಬಾರದು. ವಿಡಿಯೋಗೆ ಸಂಬಂಧಿಸಿದ ಕ್ಯಾಪ್ಶನ್ ಮತ್ತು ಹೇಳಿಕೆಗಳನ್ನು ತೆಗೆದುಹಾಕಬೇಕು. ಅಲ್ಲದೆ ಮೂಲ ವಿಡಿಯೋ ತುಣುಕು ಮತ್ತು ಪೋಸ್ಟ್‌ಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಸುರಕ್ಷಿತವಾಗಿ ಕಾಯ್ದಿಟ್ಟು, ಕ್ರಮ ಕೈಗೊಂಡ ಬಗ್ಗೆ ಲಿಖಿತ ದೃಢೀಕರಣ ನೀಡುವಂತೆ ಗಡುವು ನೀಡಲಾಗಿದೆ.

ಇದನ್ನೂ ಓದಿ: ಅವಕಾಶಕ್ಕಾಗಿ ಅಂಗಲಾಚಿದ ಸಹ ನಟನ ಸಹಾಯಕ್ಕೆ ಧಾವಿಸಿದ ಶಾರುಖ್ ಖಾನ್

‘ಕಿಂಗ್’ ಸಿನಿಮಾದಲ್ಲಿ ಶಾರುಖ್ ಬ್ಯುಸಿ

ಸಿನಿಮಾ ವಿಚಾರಕ್ಕೆ ಬಂದರೆ ಶಾರುಖ್ ಖಾನ್ ಸದ್ಯ ತಮ್ಮ ಬಹುನಿರೀಕ್ಷಿತ ಆಕ್ಷನ್ ಚಿತ್ರ ‘ಕಿಂಗ್’ ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ. ಈ ಚಿತ್ರವು ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ತೆರೆಗೆ ಬರಲಿದೆ. ಇದೇ ಮೊದಲ ಬಾರಿಗೆ ಶಾರುಖ್ ತಮ್ಮ ಪುತ್ರಿ ಸುಹಾನಾ ಖಾನ್ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ, ಅಭಿಷೇಕ್ ಬಚ್ಚನ್ ಮತ್ತು ರಾಣಿ ಮುಖರ್ಜಿ ಸೇರಿದಂತೆ ದೊಡ್ಡ ತಾರಾಗಣವೇ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us