ಶಾರುಖ್ ಖಾನ್ ಮತ್ತು ತಾಪ್ಸಿ ಪನ್ನು ಜೋಡಿಯಾಗಿ ನಟಿಸಿರುವ ‘ಡಂಕಿ’ (Dunki) ಸಿನಿಮಾಗೆ ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್ ಆಗಿಲ್ಲ. ಹಾಗಿದ್ದರೂ ಕೂಡ ನಿಧಾನವಾಗಿ ಈ ಸಿನಿಮಾ ಗಳಿಕೆ ಮಾಡುತ್ತಿದೆ. ಶಾರುಖ್ ಖಾನ್ (Shah Rukh Khan) ಅವರ ಅಭಿಮಾನಿಗಳು ಈ ಚಿತ್ರವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ವೀಕೆಂಡ್ ಮತ್ತು ರಜೆಯ ದಿನಗಳಲ್ಲಿ ಬಹುಕೋಟಿ ರೂಪಾಯಿ ಆದಾಯ ಹರಿದು ಬರುತ್ತಿದೆ. ಭಾರತದ ಗಲ್ಲಾ ಪೆಟ್ಟಿಗೆಯಲ್ಲಿ ಒಟ್ಟು 5 ದಿನಗಳಲ್ಲಿ ‘ಡಂಕಿ’ ಸಿನಿಮಾದ ಕಲೆಕ್ಷನ್ (Dunki Box Office Collection) 123 ಕೋಟಿ ರೂಪಾಯಿ ದಾಟಿದೆ. ಮುಂದಿನ ದಿನಗಳಲ್ಲಿ ಚಿತ್ರದ ಕಲೆಕ್ಷನ್ ಕುಸಿಯುವ ಸಾಧ್ಯತೆ ದಟ್ಟವಾಗಿದೆ.
ಡಿಸೆಂಬರ್ 25ರಂದು ಕ್ರಿಸ್ಮಸ್ ಹಬ್ಬದ ಪ್ರಯುಕ್ತ ರಜೆ ಇತ್ತು. ಅಂದು ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಚಿತ್ರಮಂದಿರದತ್ತ ಬರಬಹುದು ಎಂಬುದು ಚಿತ್ರತಂಡದ ಊಹೆ ಆಗಿತ್ತು. ಆದರೆ ಅಂದುಕೊಂಡ ರೀತಿಯಲ್ಲಿ ಹೌಸ್ಫುಲ್ ಆಗಿಲ್ಲ. ಡಿ.25ರಂದು ‘ಡಂಕಿ’ ಸಿನಿಮಾ ಗಳಿಸಿರುವುದು 22 ಕೋಟಿ ರೂಪಾಯಿ ಮಾತ್ರ. ಮಂಗಳವಾರದಿಂದ (ಡಿ.26) ಚಿತ್ರದ ಕಲೆಕ್ಷನ್ ಕಡಿಮೆ ಆಗಲಿದೆ.
ಇದನ್ನೂ ಓದಿ: ‘ವೈಲೆನ್ಸ್ ಬೇಡ, ಒಳ್ಳೆಯ ಸಿನಿಮಾ ಬೇಕಾದರೆ ಡಂಕಿ ನೋಡಿ’: ಫಸ್ಟ್ ಶೋ ವೀಕ್ಷಿಸಿದ ಫ್ಯಾನ್ಸ್ ಪ್ರತಿಕ್ರಿಯೆ
ಮೊದಲ ದಿನ ಅಂದರೆ, ಡಿಸೆಂಬರ್ 21ರಂದು ‘ಡಂಕಿ’ 28 ಕೋಟಿ ರೂಪಾಯಿ ಗಳಿಸಿತ್ತು. 2ನೇ ದಿನ 20 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು. 3ನೇ ದಿನವಾದ ಶನಿವಾರ (ಡಿ.23) 24.50 ಕೋಟಿ ರೂಪಾಯಿ ಆದಾಯ ಬಂತು. 4ನೇ ದಿನ 29 ಕೋಟಿ ರೂಪಾಯಿ ಬಾಚಿಕೊಳ್ಳುವಲ್ಲಿ ‘ಡಂಕಿ’ ಸಿನಿಮಾ ಯಶಸ್ವಿ ಆಯಿತು. 5ನೇ ದಿನ 22 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ.
ಇದನ್ನೂ ಓದಿ: Dunki Movie Review: ನಗಿಸಿ, ಅಳಿಸಿ, ಸಂದೇಶ ನೀಡುವ ಟಿಪಿಕಲ್ ರಾಜ್ಕುಮಾರ್ ಹಿರಾನಿ ಸಿನಿಮಾ ‘ಡಂಕಿ’
ರಾಜ್ಕುಮಾರ್ ಹಿರಾನಿ ಅವರು ‘ಡಂಕಿ’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಗೌರಿ ಖಾನ್ ಮತ್ತು ರಾಜ್ಕುಮಾರ್ ಹಿರಾನಿ ಅವರು ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಬೊಮನ್ ಇರಾನಿ, ಅನಿಲ್ ಗ್ರೋವರ್, ವಿಕ್ರಂ ಕೊಚ್ಚರ್ ಮುಂತಾದ ಕಲಾವಿದರು ನಟಿಸಿದ್ದಾರೆ. ವಿಕ್ಕಿ ಕೌಶಲ್ ಅವರು ಒಂದು ಮುಖ್ಯ ಪಾತ್ರ ಮಾಡಿದ್ದಾರೆ. ಅನುಮತಿ ಇಲ್ಲದೇ ಅಕ್ರಮವಾಗಿ ದೇಶಗಳ ಗಡಿ ದಾಟುವ ಜನರ ಬಗ್ಗೆ ಈ ಸಿನಿಮಾದಲ್ಲಿ ತೋರಿಸಲಾಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.