ನಟ ಶಾರುಖ್ ಖಾನ್ (Shah Rukh Khan) ಅವರು ‘ಪಠಾಣ್’ ಸಿನಿಮಾದ ಗೆಲುವಿನ ಬಳಿಕ ಟ್ರ್ಯಾಕ್ಗೆ ಮರಳಿದ್ದಾರೆ. ಈಗ ಅವರು ಅಭಿನಯಿಸುತ್ತಿರುವ ‘ಜವಾನ್’ ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆಗಳು ಮನೆಮಾಡಿವೆ. ಈ ವರ್ಷದ ಅತೀ ನಿರೀಕ್ಷಿತ ಮತ್ತು ದುಬಾರಿ ಬಜೆಟ್ನ ಸಿನಿಮಾ ಎಂಬ ಹೆಗ್ಗಳಿಕೆಗೆ ‘ಜವಾನ್’ (Jawan Movie) ಪಾತ್ರವಾಗುತ್ತಿದೆ. ಈ ಚಿತ್ರವನ್ನು ಶಾರುಖ್ ಖಾನ್ ಅವರ ‘ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್’ ಸಂಸ್ಥೆ ನಿರ್ಮಿಸುತ್ತಿದೆ. ಕಾಲಿವುಡ್ನ ಜನಪ್ರಿಯ ನಿರ್ದೇಶಕರಾದ ಅಟ್ಲಿ ಕುಮಾರ್ (Atlee Kumar) ಅವರು ನಿರ್ದೇಶನ ಮಾಡುತ್ತಿದ್ದಾರೆ. ‘ಜವಾನ್’ ಚಿತ್ರದ ಮೇಲೆ ನಿರೀಕ್ಷೆಗಳು ಹೆಚ್ಚಾಗಿರುವುದರಿಂದ, ಈ ಚಿತ್ರದ ಹಕ್ಕುಗಳನ್ನು ತಮ್ಮದಾಗಿಸಿಕೊಳ್ಳುವುದಕ್ಕೆ ಹಲವು ಪ್ರತಿಷ್ಠಿತ ಸಂಸ್ಥೆಗಳು ಮುಂದಾಗಿವೆ. ದೊಡ್ಡ ಮೊತ್ತ ಕೊಟ್ಟು ಹಕ್ಕುಗಳನ್ನು ಖರೀದಿಸಿರುವ ಸುದ್ದಿ ಬಂದಿದೆ.
ಈ ವರ್ಷದ ಜನವರಿಯಲ್ಲಿ ಬಿಡುಗಡೆಯಾದ ಶಾರುಖ್ ಖಾನ್ ಅಭಿನಯದ ‘ಪಠಾಣ್’ ಚಿತ್ರವು ಜಗತ್ತಿನಾದ್ಯಂತ ಸಾವಿರ ಕೋಟಿ ರೂಪಾಯಿಗಿಂತಲೂ ಅಧಿಕ ಕಲೆಕ್ಷನ್ ಮಾಡಿ ಬ್ಲಾಕ್‌ಬಸ್ಟರ್ ಎನಿಸಿಕೊಂಡಿತ್ತು. ಈಗ ಆ ಸಿನಿಮಾದ ರೀತಿಯೇ ‘ಜವಾನ್’ ಚಿತ್ರ ಕೂಡ ಬಿಸ್ನೆಸ್ ಮಾಡುವ ಮುನ್ಸೂಚನೆ ಸಿಕ್ಕಿದೆ. ‘ಜವಾನ್’ ಚಿತ್ರದ ಒಟಿಟಿ, ಸ್ಯಾಟಿಲೈಟ್ ಮತ್ತು ಆಡಿಯೋ ಹಕ್ಕುಗಳಿಗೆ ಬೇರೆಬೇರೆ ಸಂಸ್ಥೆಗಳು ದೊಡ್ಡ ಆಫರ್ ನೀಡಿವೆ ಎನ್ನಲಾಗುತ್ತಿದೆ. ಭಾರಿ ಮೊತ್ತಕ್ಕೆ ಹಕ್ಕುಗಳು ಸೇಲ್ ಆಗಿರುವ ಸುದ್ದಿ ಇದೆ. ಆದರೆ, ಎಷ್ಟು ಕೋಟಿಗೆ ಹಕ್ಕುಗಳು ಮಾರಾಟವಾಗಿವೆ ಎಂಬ ಮಾಹಿತಿಯನ್ನು ಚಿತ್ರತಂಡದವರು ಬಹಿರಂಗಗೊಳಿಸಿಲ್ಲ.
ಇದನ್ನೂ ಓದಿ: Allu Arjun: ‘ಜವಾನ್’ ಸಿನಿಮಾದಲ್ಲಿ ನಟಿಸಲ್ವಾ ಅಲ್ಲು ಅರ್ಜುನ್? ಶಾರುಖ್ ಖಾನ್ ಚಿತ್ರದ ಬಗ್ಗೆ ಹತ್ತಾರು ಗಾಸಿಪ್
ಆಕ್ಷನ್ ಥ್ರಿಲ್ಲರ್ ಶೈಲಿಯ ‘ಜವಾನ್’ ಚಿತ್ರದಲ್ಲಿ ಶಾರುಖ್ ಖಾನ್ ಜೊತೆಗೆ ನಯನತಾರಾ, ವಿಜಯ್ ಸೇತುಪತಿ, ಪ್ರಿಯಾಮಣಿ ಸೇರಿದಂತೆ ಹಲವು ಪ್ರಸಿದ್ಧ ಕಲಾವಿದರು ಅಭಿನಯಿಸಿದ್ದಾರೆ. ತಮಿಳಿನ ಜನಪ್ರಿಯ ಸಂಗೀತ ನಿರ್ದೇಶಕರಾದ ಅನಿರುದ್ಧ್ ರವಿಚಂದರ್ ಅವರು ಈ ಚಿತ್ರದ ಮೂಲಕ ಬಾಲಿವುಡ್ಗೆ ಎಂಟ್ರಿ ಕೊಟ್ಟಿದ್ದಾರೆ. ‘ಜವಾನ್’ ಚಿತ್ರವು ಸೆಪ್ಟೆಂಬರ್ 7ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ಆದಷ್ಟು ಬೇಗ ಈ ಸಿನಿಮಾವನ್ನು ದೊಡ್ಡ ಪರದೆಯಲ್ಲಿ ನೋಡಲು ಫ್ಯಾನ್ಸ್ ಕಾದಿದ್ದಾರೆ.
ಇದನ್ನೂ ಓದಿ: Jawan: ಶಾರುಖ್ ಖಾನ್-ಸಂಜಯ್ ದತ್ ಮುಖಾಮುಖಿ; ‘ಜವಾನ್’ ಚಿತ್ರದಲ್ಲಿ ಭರ್ಜರಿ ಫೈಟ್
ಸಾನ್ಯಾ ಮಲ್ಹೋತ್ರಾ ಅವರು ಸಹ ಈ ಬಹುನಿರೀಕ್ಷಿತ ಚಿತ್ರದಲ್ಲಿ ನಟಿಸಿರಬಹುದು ಎಂಬ ಗುಮಾನಿ ಹಲವರಿಗೆ ಮೂಡಿತ್ತು. ಆ ಬಗ್ಗೆ ಕೆಲವು ವರದಿಗಳು ಪ್ರಕಟ ಆಗಿದ್ದವು. ಈಗ ಆ ಗುಮಾನಿ ನಿಜವಾಗಿದೆ. ಶಾರುಖ್ ಖಾನ್ ಜೊತೆ ನಟಿಸುವ ಅವಕಾಶ ಸಿಕ್ಕಿದ್ದಕ್ಕೆ ಸಾನ್ಯಾ ಮಲ್ಹೋತ್ರಾ ಅವರು ಖುಷಿಯಾಗಿದ್ದಾರೆ. ದೇಶದ ವಿವಿಧ ನಗರಗಳಲ್ಲಿ ಈ ಚಿತ್ರದ ಶೂಟಿಂಗ್ ಮಾಡಲಾಗಿದೆ. ತಮಿಳು ಚಿತ್ರರಂಗದಲ್ಲಿ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಅಟ್ಲಿ ಕುಮಾರ್ ಜೊತೆ ಶಾರುಖ್ ಖಾನ್ ಅವರು ಮೊದಲ ಬಾರಿ ಕೈ ಜೋಡಿಸಿರುವುದರಿಂದ ಹೈಪ್ ಹೆಚ್ಚಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.