ನಿನ್ನೆ (ಏಪ್ರಿಲ್ 06) ರಂದು ನಡೆದ ಐಪಿಎಲ್ 2023 (IPL 2023) ನ ಕೆಕೆಆರ್ vs ಆರ್ಸಿಬಿ (KKR vs RCB) ಪಂದ್ಯದಲ್ಲಿ ಆರ್ಸಿಬಿ ತಂಡವು ಹೀನಾಯ ಸೋಲುಂಡಿದೆ. ಶಾರುಖ್ ಖಾನ್ ಒಡೆತನದ ಕೆಕೆಆರ್ ತಂಡ ಗೆದ್ದು ಬೀಗಿದೆ. ಕೊಲ್ಕತ್ತದಲ್ಲಿ ನಡೆದ ಈ ಪಂದ್ಯ ನೋಡಲು ನಟ ಶಾರುಖ್ ಖಾನ್ (Shah Rukh Khan) ಖುದ್ದು ಕ್ರೀಡಾಂಗಣಕ್ಕೆ ಆಗಮಿಸಿದ್ದರು. ಪಂದ್ಯ ಗೆದ್ದ ಬಳಿಕ ಡ್ರೆಸ್ಸಿಂಗ್ ರೂಮ್ಗೆ ತೆರಳಿ ತಮ್ಮ ತಂಡದ ಆಟಗಾರರ ಜೊತೆ ಸಮಯ ಕಳೆದರು, ಅವರೊಟ್ಟಿಗೆ ಮೋಜು ಮಾಡಿದರು, ಆಟಗಾರರನ್ನು ಮುಂದಿನ ಪಂದ್ಯಾವಳಿಗೆ ಹುರಿದುಂಬಿಸಿದರು. ಇದರ ಜೊತೆಗೆ ಆರ್ಸಿಬಿ ತಂಡದವರನ್ನು ಭೇಟಿ ಮಾಡಿ ಶುಭ ಕೋರಿದರು. ಅದರಲ್ಲಿಯೂ ಶಾರುಖ್ ಖಾನ್, ವಿರಾಟ್ ಕೊಹ್ಲಿಯನ್ನು (Virat Kohli) ಭೇಟಿಯಾಗಿ ಅವರೊಟ್ಟಿಗೆ ಡ್ಯಾನ್ಸ್ ಸ್ಟೆಪ್ ಸಹ ಹಾಕಿದ್ದಾರೆ. ಈ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ.
ಪಂದ್ಯ ಮುಗಿದ ಬಳಿಕ ಮೈದಾನಕ್ಕೆ ಬಂದ ನಟ ಶಾರುಖ್ ಖಾನ್ ಅಲ್ಲಿಯೇ ಇದ್ದ ವಿರಾಟ್ ಕೊಹ್ಲಿ ಅವರನ್ನು ಅಪ್ಪಿಕೊಂಡು ಕೆಲ ಸಮಯ ಮಾತನಾಡಿ ಆ ಬಳಿಕ ವಿರಾಟ್ ಕೊಹ್ಲಿಗೆ ತಮ್ಮ ಇತ್ತೀಚೆಗಿನ ಸೂಪರ್ ಹಿಟ್ ಪಠಾಣ್ ಸಿನಿಮಾದ ಸ್ಟೆಪ್ಗಳನ್ನು ಹೇಳಿಕೊಡಲು ಯತ್ನಿಸಿದರು. ವಿರಾಟ್ ಕೊಹ್ಲಿ, ಶಾರುಖ್ ಸ್ಟೆಪ್ ಅನ್ನು ನಕಲು ಮಾಡಲು ಯತ್ನಿಸಿ ವಿಫಲರಾದರು. ಈ ಇಬ್ಬರು ಲೆಜೆಂಡ್ಗಳು ಒಟ್ಟಿಗೆ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಸೋತ ಎದುರಾಳಿ ತಂಡದೊಟ್ಟಿಗೆ ಶಾರುಖ್ ಖಾನ್ರ ಸೌಹಾರ್ಧ ಗುಣ ಹಾಗೂ ವಿರಾಟ್ ಕೊಹ್ಲಿಯ ಕ್ರೀಡಾ ಸ್ಪೂರ್ತಿಯನ್ನು ಕ್ರಿಕೆಟ್ ಅಭಿಮಾನಿಗಳು ಕೊಂಡಾಡುತ್ತಿದ್ದಾರೆ. ಮೈದಾನದಲ್ಲಿ ಸದಾ ಸ್ಪರ್ಧಾತ್ಮಕವಾಗಿ ಆಡುವ, ಎದುರಾಳಿಗಳ ಮೇಲೆ ಸವಾರಿ ಮಾಡಲು ಯತ್ನಿಸುವ ವಿರಾಟ್ ಕೊಹ್ಲಿ ಪಂದ್ಯ ಮುಗಿದ ಬಳಿಕ ಎದುರಾಳಿ ತಂಡದೊಟ್ಟಿಗೆ ಸೌಹಾರ್ದಯುತವಾಗಿ ನಡೆದುಕೊಳ್ಳುತ್ತಾರೆ. ಇನ್ನು ಶಾರುಖ್ ಖಾನ್ ಸಹ ಆಟಗಾರರನ್ನು ಗೌರವಿಸುವ ವ್ಯಕ್ತಿತ್ವದವರಾಗಿದ್ದು, ಬಹುತೇಕ ಎಲ್ಲ ಕ್ರಿಕೆಟಿಗರೊಟ್ಟಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ವಿರಾಟ್ ಕೊಹ್ಲಿಯೊಟ್ಟಿಗೆ ಶಾರುಖ್ ಖಾನ್ಗೆ ತುಸು ಹೆಚ್ಚೇ ಗೆಳೆತನವಿದೆ.
Jhoome Jo KINGs mehfil hi loot jaye?
KING KHAN and KING KOHLI at #EdenGardens post #KKRvRCB game! @iamsrk @ViratKohliFC @kkriders #KKR #kkrhaitaiyaar #AmiKKR#ShahRukhKhan #ViratKohli #RCB pic.twitter.com/4i7qzwPXe2— Shah Rukh Khan Universe Fan Club (@SRKUniverse) April 7, 2023
ಅದೇ ದಿನ ಕೆಕೆಆರ್ ತಂಡದೊಟ್ಟಿಗೆ ಶಾರುಖ್ ಖಾನ್ ಮೋಜು ಮಾಡಿರುವ ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಗೆದ್ದ ಬಳಿಕ ಡ್ರೆಸ್ಸಿಂಗ್ ರೂಂನಲ್ಲಿ ತಂಡದ ಎಲ್ಲರೂ ಒಟ್ಟಿಗೆ ಕೆಕೆಆರ್ನ ಧ್ಯೇಯ ವಾಕ್ಯ ಹೇಳಲು ಸೇರಿದ್ದರು. ಆಗ ಶಾರುಖ್ ಖಾನ್, ಪಂದ್ಯದಲ್ಲಿ ಅತ್ಯುತ್ತಮವಾಗಿ ಆಡಿದ ರಿಂಕು ಮೊದಲು ಹೇಳಲಿ ನಾವು ಅವನನ್ನು ಫಾಲೋ ಮಾಡೋಣ ಎಂದಿದ್ದಾರೆ. ಆದರೆ ರಿಂಕು, ಅಯ್ಯೋ ಅದು ಇಂಗ್ಲೀಷ್ನಲ್ಲಿದೆ ನನಗೆ ಬರೊಲ್ಲ ಎನ್ನುತ್ತಾರೆ. ಬಳಿಕ ಎಲ್ಲರೂ ಒಟ್ಟಿಗೆ ಕೆಕೆಆರ್ ಧ್ಯೇಯವಾಕ್ಯವನ್ನು ಹೇಳಿದ್ದಾರೆ. ಕೊನೆಗೆ ಆಟಗಾರನೊಬ್ಬ ಶಾರುಖ್ ಖಾನ್ ಸೇರಿದಂತೆ ಎಲ್ಲರ ಮೇಲೆ ಕೂಲ್ಡ್ರಿಂಕ್ ಚೆಲ್ಲಿದ್ದಾನೆ. ಈ ವಿಡಿಯೋ ಸಹ ಇದೀಗ ವೈರಲ್ ಆಗಿದೆ.
ಮೊದಲ ಪಂದ್ಯದಲ್ಲಿ ಮುಂಬೈ ವಿರುದ್ಧ 8 ವಿಕೆಟ್ಗಳ ಭರ್ಜರಿ ಜಯ ಗಳಿಸಿದ್ದ ಆರ್ಸಿಬಿ ತಂಡ ಎರಡನೇ ಪಂದ್ಯದಲ್ಲಿ ಕೆಕೆಆರ್ ವಿರುದ್ಧ 81 ರನ್ಗಳ ಬೃಹತ್ ಅಂತರದಿಂದ ಸೋಲು ಕಂಡಿತು. ಆರ್ಸಿಬಿಯ ಮುಂದಿನ ಪಂದ್ಯವು ಲಖನೌ ಸೂಪರ್ ಜಾಯಿಂಟ್ಸ್ ವಿರುದ್ಧ ಏಪ್ರಿಲ್ 10 ರಂದು ನಡೆಯಲಿದೆ. ಇನ್ನು ಕೆಕೆಆರ್ ತಂಡದವು ಏಪ್ರಿಲ್ 9 ರಂದು ಗುಜರಾತ್ ತಂಡದವರನ್ನು ಎದುರಿಸಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ