ಶಾರುಖ್ ಖಾನ್ ನೌಕರಳಿಗೆ 8 ವರ್ಷಗಳ ಬಳಿಕ ಸಿಕ್ಕಿತು ನ್ಯಾಯ, 62 ಲಕ್ಷ ಪರಿಹಾರಕ್ಕೆ ಆದೇಶ
Shah Rukh Khan: ಶಾರುಖ್ ಖಾನ್ ಅವರ ಸಿನಿಮಾ ಹಾಗೂ ಸಂಸ್ಥೆಗಾಗಿ ಕೆಲಸ ಮಾಡಿದ್ದ ಯುವತಿಯೊಬ್ಬಾಕೆಗೆ ಬರೋಬ್ಬರಿ ಎಂಟು ವರ್ಷಗಳ ಬಳಿಕ ನ್ಯಾಯ ದೊರಕಿದೆ. ಅದೂ ಆಕೆ ನಿಧನ ಹೊಂದಿದ ಎಷ್ಟೋ ವರ್ಷಗಳ ಬಳಿಕ. ಏನಿದು ಪ್ರಕರಣ? ಪ್ರಕರಣದಲ್ಲಿ ಶಾರುಖ್ ಖಾನ್ ಅವರ ಪಾತ್ರವೇನು? ಆ ಯುವತಿಗೆ ಆಗಿದ್ದಾದರೂ ಏನು? ಎಲ್ಲದರ ಮಾಹಿತಿ ಇಲ್ಲಿದೆ...

ಶಾರುಖ್ ಖಾನ್ (Shah Rukh Khan) ಸಿನಿಮಾಕ್ಕಾಗಿ ಕೆಲಸ ಮಾಡಿದ್ದ ಯುವತಿಯೊಬ್ಬಾಕೆಗೆ ಬರೋಬ್ಬರಿ 8 ವರ್ಷದ ಬಳಿಕ ನ್ಯಾಯ ಸಿಕ್ಕಿದೆ. ಅದೂ ಆಕೆಯ ಮರಣಾನಂತರ! ಶಾರುಖ್ ಖಾನ್ ಅವರು ನಟಿಸಿ, ನಿರ್ಮಾಣ ಸಹ ಮಾಡಿದ್ದ ‘ರಾ ಒನ್’ ಸಿನಿಮಾ 14 ವರ್ಷಗಳ ಹಿಂದೆಯೇ ಹಾಲಿವುಡ್ ಮಾದರಿಯ ತಂತ್ರಜ್ಞಾನವನ್ನು ಸಿನಿಮಾದಲ್ಲಿ ಬಳಸಿಕೊಂಡಿತ್ತು. ಈ ಸಿನಿಮಾ ಅನಿಮೇಷನ್, ವಿಎಫ್ಎಕ್ಸ್ ಈಗಿನ ಕೆಲವು ಸಿನಿಮಾಗಳಿಗಿಂತಲೂ ಅದ್ಭುತವಾಗಿತ್ತು. ‘ರಾ ಒನ್’ ಸಿನಿಮಾದ ವಿಎಫ್ಕ್ಸ್, ಅನಿಮೇಷನ್ ತಂಡದಲ್ಲಿ ಕೆಲಸ ಮಾಡಿದ್ದ ಯುವತಿಯೊಬ್ಬಾಕೆಗೆ ಬರೋಬ್ಬರಿ 8 ವರ್ಷದ ಬಳಿಕ ನ್ಯಾಯ ದೊರೆತಿದ್ದು, ನ್ಯಾಯಾಲವು 62.20 ಲಕ್ಷ ರೂಪಾಯಿ ಪರಿಹಾರಕ್ಕೆ ಆದೇಶ ನೀಡಿದೆ.
ಚಾರು ಕಂಡಲ್, ಪ್ರತಿಭಾವಂತ ಅನಿಮೇಟರ್ ಆಗಿದ್ದರು. ರೆಡ್ ಚಿಲ್ಲೀಸ್ನ ‘ರಾ ಒನ್’ ಸಿನಿಮಾದ ಅನಿಮೇಟರ್ಸ್ ತಂಡದ ಪ್ರಮುಖ ಸದಸ್ಯೆ ಆಗಿದ್ದರು. ‘ರಾ ಒನ್’ ಸಿನಿಮಾಕ್ಕಾಗಿ ಅದ್ಭುತ ಕೆಲಸ ಮಾಡಿದ್ದರು. ಆದರೆ 2012 ರ ಮಾರ್ಚ್ ಒಮ್ಮೆ ಆಟೋನಲ್ಲಿ ಅವರ ಸಹೋದರಿ ಹಾಗೂ ಗೆಳೆಯನೊಟ್ಟಿಗೆ ಬರುವಾಗ ನಡೆದ ಅಪಘಾತದಲ್ಲಿ ಚಾರು ಅವರಿಗೆ ತೀವ್ರ ಗಾಯಗಳಾದವು. ಚಾರು ಅವರ ಕತ್ತಿನ ಕೆಳಭಾಗ ಸಂಪೂರ್ಣವಾಗಿ ನಿಶ್ಚಲಗೊಂಡಿತು. ಆದರೂ ಚಾರು, ಕೆಲ ಪ್ರೊಫೆಸರ್ಗಳ ನೆರವಿನಿಂದ ವಿಜ್ಞಾನಿ ಸ್ಟೀಫನ್ ಹಾಕಿಂಗ್ ರೀತಿ ಕಂಪ್ಯೂಟರ್ ಸಹಾಯದೊಂದಿಗೆ ಸಂವಹ ಮಾಡುವ ಪ್ರಯತ್ನ ಮಾಡಿ, ಯಶಸ್ವಿಯೂ ಆದರು. ಆದರೆ ಅವರ ದೇಹ ಅವರಿಗೆ ಹೆಚ್ಚು ಬೆಂಬಲ ನೀಡಲಿಲ್ಲ. ಕೆಲ ವರ್ಷಗಳ ಬಳಿಕ ಅವರು ನಿಧನ ಹೊಂದಿದರು.
ಆದರೆ ಇನ್ಷುರೆನ್ಸ್ ಕಂಪೆನಿ ಜನರಲ್ ಇನ್ಷುರೆನ್ಸ್ನವರು ಚಾರು ಅವರಿಗೆ ಇನ್ಷುರೆನ್ಸ್ ಮೊತ್ತ ನೀಡಲು ನಿರಾಕರಿಸಿದರು. ಚಾರುಗೆ ಅವರ ಪೆರಾಲಿಸಿಸ್ ಸ್ಥಿತಿ ಅಪಘಾತದಿಂದ ಆಗಿರುವುದಲ್ಲ, ಚಿಕಿತ್ಸೆಯಿಂದ ಆಗಿರುವುದು ಎಂದಿತು. ಇದರ ವಿರುದ್ಧ ಚಾರು ಅವರ ಕುಟುಂಬದವರು ನ್ಯಾಯಾಲಯದಲ್ಲಿ ಹೋರಾಟ ಆರಂಭಿಸಿದರು. ಹೋರಾಟದ ನಡುವೆ ಚಾರು ನಿಧನರಾದರು. ಆದರೆ ಎಂಟು ವರ್ಷಗಳ ಬಳಿಕ ಬಾಂಬೆ ಹೈಕೋರ್ಟ್ ಪ್ರಕರಣದ ತೀರ್ಪು ನೀಡಿದ್ದು, ಜನರಲ್ ಇನ್ಷುರೆನ್ಸ್ ಸಂಸ್ಥೆಯು ಚಾರು ಅವರ ಕುಟುಂಬಕ್ಕೆ 62.20 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದಿದೆ.
ಇದನ್ನೂ ಓದಿ:21 ಕೋಟಿ ರೂ. ಬೆಲೆಯ ವಾಚ್ ಧರಿಸಿ ಎಲ್ಲರನ್ನೂ ದಂಗುಬಡಿಸಿದ ಶಾರುಖ್ ಖಾನ್
ಚಾರು ಅಪಘಾತಗೊಂಡು ಆಸ್ಪತ್ರೆಯಲ್ಲಿದ್ದಾಗ ಹಲವು ಬಾರಿ ಶಾರುಖ್ ಖಾನ್ ಅವರನ್ನು ಭೇಟಿ ಆಗಿದ್ದರು. ಮುಂಬೈನ ಅತ್ಯುತ್ತಮ ಆಸ್ಪತ್ರೆಯಾದ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ಚಾರು ಅವರನ್ನು ದಾಖಲಿಸಿ ಚಿಕಿತ್ಸೆಗೆ ಸಹಾಯ ಮಾಡಿದ್ದರು. ಚಾರು ಅವರ ಕುಟುಂಬದವರೊಟ್ಟಿಗೆ ಸತತವಾಗಿ ಸಂಪರ್ಕದಲ್ಲಿದ್ದರು. ಚಾರು ನಿಧನರಾದಾಗ ಸಹ ಭೇಟಿ ನೀಡಿದ್ದರು. ಶಾರುಖ್ ಅವರ ಬೆಂಬಲದಿಂದಲೇ ಚಾರು ಅವರ ಕುಟುಂಬದವರು ಇಷ್ಟು ಸುದೀರ್ಘ ಹೋರಾಟ ಮಾಡಲು ಸಾಧ್ಯವಾಯ್ತು ಎಂದು ಚಾರು ಅವರ ಗೆಳೆಯ ಸಾಗರ್ ಠಕ್ಕರ್ ಹೇಳಿದ್ದಾರೆ. ಚಾರು ಕೆಲಸ ಮಾಡಿದ್ದ ‘ರಾ ಒನ್’ ಸಿನಿಮಾದ ಅನಿಮೇಷನ್ಗೆ ರಾಷ್ಟ್ರಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಬಂದಿದ್ದವು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




